ಹುನಗುಂದ(ಏ.11): ಬಾಗಲಕೋಟೆ ನಗರದ ಕೊರೋನಾ ಸೋಂಕಿತರ ಪ್ರದೇಶದಲ್ಲಿ ವಾಸವಾಗಿದ್ದ ದಂಪತಿ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಬಂದು ಹೋಗಿದ್ದು, ಇದು ತಾಲೂಕಿನ ಜನತೆಯಲ್ಲಿ ತಲ್ಲಣ ಸೃಷ್ಟಿ​ಸಿದೆ.

ಹಳೆ ಬಾಗಲಕೋಟೆ ಒಂದೇ ಪ್ರದೇಶದ 7 ಜನರಿಗೆ ಕೊರೋನಾ ಸೋಂಕು ತಗುಲಿ, ಓರ್ವ ವೃದ್ಧ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆ ಪ್ರದೇಶಕ್ಕೆ ಸಂಪೂರ್ಣ ನಿ​ರ್ಬಂಧ ಹೇರಿ ಅಲ್ಲಿಯ ಜನರು ಮನೆ ಬಿಟ್ಟು ಹೊರ ಬರದಂತೆ ಬೀಗಿ ಪೊಲೀಸ್‌ ಕಾವಲು ನಿಯೋಜಿಸಲಾಗಿದೆ. ಆದರೆ, ಇದೇ ಪ್ರದೇಶದ ದಂಪತಿ ಗುರುವಾರ ಬೆಳಗ್ಗೆ ಬಾಗಲಕೋಟೆಯಿಂದ ಕೂಡಲಸಂಗಮಕ್ಕೆ ಬಂದು ಅರ್ಚಕರ ಕಾಲೋನಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಸಂಜೆಯ ವರೆಗೆ ಇದ್ದು ಹೋಗಿದ್ದು ಆತಂಕಕ್ಕೆ ಕಾರಣವಾಗಿದೆ.

ಕೊರೋನಾ ಭೀತಿ: ಕ್ವಾರಂಟೈನ್‌ನಲ್ಲಿ ಪೊಲೀಸ್‌ ಪೇದೆ!

ಅರ್ಚಕರ ಕಾಲೋನಿ ಮನೆಯೊಂದರಲ್ಲಿ ಬಾಗಲಕೋಟೆ ದಂಪತಿ ತಂಗಿದ್ದ ವಿಷಯ ಹಬ್ಬಿ, ಇಡೀ ಕಾಲೋನಿ ಜನ ಭಯಭೀತರಾಗಿ ಸ್ಥಳೀಯ ಅ​​ಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಇದನ್ನು ಗಮನಿಸಿದ ದಂಪತಿ ಗುರುವಾರ ರಾತ್ರಿಯೇ ಕೂಡಲಸಂಗಮದಿಂದ ನಿರ್ಗಮಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಸೋಂಕಿತ ವ್ಯಕ್ತಿಗಳು ವಾಸಿಸುವ ಪ್ರದೇಶದ ಮೇಲೆ ಅಧಿ​ಕಾರಿಗಳ ಹದ್ದಿನ ಕಣ್ಣು ಇಟ್ಟಿದೆ. ​ಪೊಲೀಸರ ಕಣ್ತಪ್ಪಿಸಿ ಈ ಪ್ರದೇಶದಿಂದ ಒಂದು ಇರುವೆಯೂ ಹೊರ ಹೋಗುವಂತಿಲ್ಲ, ಒಳ ಬರುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ದಂಪತಿ ಹೇಗೆ ಹೊರ ಬಂದರು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿರುವುದು ಒಂದಡೆಯಾದರೆ, ಕೂಡಲಸಂಗಮದಿಂದ ನಿರ್ಗಮಿಸಿದ ಈ ದಂಪತಿ ಈಗ ಎಲ್ಲ ನೆಲೆಸಿದ್ದಾರೆ ಎಂಬುದು ಸ್ಪಷ್ಟಪಡಬೇಕಿದೆ.