ಬೆಂಗಳೂರು[ನ.26]: ನಗರದ ಹುಳಿಮಾವು ಕೆರೆ ಏರಿ ಒಡೆದು ಭಾನುವಾರ ಸುಮಾರು 1 ಸಾವಿರ ಮನೆಗಳಿಗೆ ನೀರು ನುಗ್ಗಿದ್ದ ಪರಿಣಾಮ ನೂರಾರು ಕುಟುಂಬ ಬೀದಿಗೆ ಬಿದ್ದಿವೆ. ಸಂತ್ರಸ್ತರ ಅಳಲು ಸೋಮವಾರವೂ ಮುಂದುವರೆದಿದ್ದು, ಎಲ್ಲವೂ ನೀರು ಪಾಲಾಗಿರುವುದನ್ನು ನೆನೆದು ಬಿಬಿಎಂಪಿಯ ನಿರಾಶ್ರಿತರ ಕೇಂದ್ರದಲ್ಲಿ ಸಂತ್ರಸ್ತರು ಕಣ್ಣೀರು ಹಾಕುವಂತಾಗಿದೆ.

ಪ್ರವಾಹ ಉಂಟಾಗಿ ಎರಡು ದಿನ ಘಟನೆಗೆ ನಿರ್ದಿಷ್ಟಕಾರಣಕರ್ತರು ಯಾರೆಂಬುದು ಖಚಿತವಾಗಿಲ್ಲ. ಇದರ ನಡುವೆ ಚರಂಡಿ ನೀರು ಕೆರೆಗಳಿಗೆ ಬಿಡುವ ಸಲುವಾಗಿ ಬೆಂಗಳೂರು ಜಲಮಂಡಳಿಯಿಂದಲೇ ಕೆರೆ ಏರಿ ಒಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಕಳೆದ ಎರಡು ತಿಂಗಳಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ ಮೂರು ಕೆರೆಗಳು ಒಡೆದಿವೆ. ಎಲ್ಲಾ ಕೆರೆಗಳು ಒಡೆಯಲು ಮೂಲ ಕಾರಣ ಬೆಂಗಳೂರು ಜಲ ಮಂಡಳಿ ಎಂದು ರಾಜರಾಜೇಶ್ವರನಿಗರದ ಪದಚ್ಯುತ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಕೆರೆ ಒಡೆಯಲು ಕಾರಣರಾದ ಅಧಿಕಾರಿಗಳನ್ನು ಕೂಡಲೇ ಬಂಧಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಅವರ ಆಸ್ತಿ ಹರಾಜು ಮಾಡಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಭಾನುವಾರ ಸುಮಾರು 12 ಗಂಟೆಯ ಸುಮಾರಿಗೆ ಕೆರೆ ಏರಿ ಒಡೆದು ನೀರು ಕೃಷ್ಣಾ ಬಡಾವಣೆ ಮೂಲಕ ಕೆರೆಯ ಅಕ್ಕ-ಪಕ್ಕದ ಸುಮಾರು ಆರೇಳು ಬಡಾವಣೆಗೆ ನುಗ್ಗುವುದಕ್ಕೆ ಆರಂಭವಾಯಿತು. ಮಧ್ಯಾಹ್ನ 2ರ ಸುಮಾರಿಗೆ ಕೆರೆ ಏರಿ ಸಡಿಲಗೊಂಡ ಭಾರೀ ಪ್ರಮಾಣ ನೀರು ಅವನಿ ಶೃಂಗೇರಿ, ಆರ್‌.ಆರ್‌.ರೆಸಿಡೆನ್ಸಿ, ಸರಸ್ವತಿಪುರ, ಶಾಂತಿನಿಕೇತನ, ವೈಶ್ಯಬ್ಯಾಂಕ್‌ ಕಾಲೋನಿ, ಬಿಡಿಎ ಲೇಔಟ್‌ ಸೇರಿದಂತೆ ವಿವಿಧ ಲೇಔಟ್‌ನ ಸಾವಿರಕ್ಕೂ ಹೆಚ್ಚು ಮನೆಗಳಿಗೆ ಕೆರೆಯ ನೀರು ನುಗ್ಗಿತ್ತು. ಬಡಾವಣೆಯ ರಸ್ತೆಗಳು ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡು ನಡುಗಡ್ಡೆಗಳಾಗಿ ಅಕ್ಷರಶಃ ದ್ವೀಪಗಳಾಗಿ ರೂಪಗೊಂಡವು.

ಕೆರೆಯಲ್ಲಿದ್ದ ಜಲಚರಗಳಾದ ಹಾವು, ಕಪ್ಪೆ, ಮೀನು, ಏಡಿ ನೀರಿನೊಂದಿಗೆ ಮನೆ ಸೇರಿಕೊಂಡವು. ಇದರಿಂದಾಗಿ ಸೋಮವಾರ ಮನೆಗೆ ಸ್ವಚ್ಛತೆಗೆ ಮುಂದಾದ ಸಾರ್ವಜನಿಕರು ತಮ್ಮ ಮನೆಯಲ್ಲೇ ಭಯದ ವಾತಾವರಣದ ನಡುವೆ ನಡೆದಾಡುವಂತಾಯಿತು. ಇನ್ನು ರಸ್ತೆ, ಕಾಂಪೌಂಡ್‌, ಚರಂಡಿಗಳಲ್ಲಿ ಹಾವು, ಕಪ್ಪೆಗಳು ಕಾಣಿಸಿಕೊಂಡಿದ್ದರಿಂದ ಮಕ್ಕಳ, ಮಹಿಳೆಯರು ಭಯದಲ್ಲಿ ಒಡಾಡಬೇಕಾಯಿತು. ಬಿಬಿಎಂಪಿ ವನ್ಯಜೀವಿ ಪರಿಪಾಲರು ಮೂರು ಕೇರೆ ಹಾವುಗಳನ್ನು ರಕ್ಷಿಸಿದರು.

ಭಾನುವಾರ ಸಂಜೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ಹರಸಾಹಸದಿಂದ ಕೆರೆ ಏರಿ ದುರಸ್ತಿಗೊಂಡಿದೆ. ತಾತ್ಕಾಲಿಕ ದುರಸ್ತಿಗಾಗಿ ಬರೋಬ್ಬರಿ 200 ಟ್ರಕ್‌ ಮಣ್ಣು ಬಳಸಿಕೊಂಡಿದ್ದು, ಮನೆಗಳಲ್ಲಿ ತುಂಬಿಕೊಂಡಿದ್ದ ನೀರು ಹೊರ ಹಾಕಲು 25ಕ್ಕೂ ಹೆಚ್ಚು ನೀರೆತ್ತುವ ಪಂಪ್‌ಸೆಟ್‌, 400ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬಳಸಿಕೊಳ್ಳಲಾಯಿತು.

ಜನರ ಜೀವನಕ್ಕೆ ‘ಹುಳಿ’ ಹಿಂಡಿದ ಕೆರೆ:

ಭೀಕರ ಮಳೆ, ನೀರಿನ ಒಳಹರಿವು ಯಾವುದೂ ಇಲ್ಲದೆ ಏಕಾಏಕಿ ಒಡೆದ ಹುಳಿಮಾವು ಕೆರೆಯಿಂದಾಗಿ ನೂರಾರು ಕುಟುಂಬಗಳ ಜೀವನ ಬೀದಿಗೆ ಬಿದ್ದಿದೆ. ಏಕಾಏಕಿ ನೀರು ನುಗ್ಗಿದ್ದರಿಂದ 700 ಮನೆ, 300 ಫ್ಲ್ಯಾಟ್‌ಗಳುಳ್ಳ ಅಪಾರ್ಟ್‌ಮೆಂಟ್‌ ಸೇರಿ 1,000 ಮನೆಗಳು ಯಾತನೆ ಅನುಭವಿಸುವಂತಾಗಿದೆ.

ನೆಲ ಮಹಡಿ ಮನೆಗಳಲ್ಲಿ ವಾಸ್ತವ್ಯವಿದ್ದವರ ದಿನಸಿ ಪದಾರ್ಥ, ಎಲೆಕ್ಟ್ರಾನಿಕ್‌ ಉಪಕರಣ, ಬೆಲೆಬಾಳುವ ವಸ್ತುಗಳು ನೀರುಪಾಲಾಗಿವೆ. ಮಕ್ಕಳ ಪಠ್ಯ ಪುಸ್ತಕಗಳೂ ಹಾಳಾಗಿದ್ದು, ಸೋಮವಾರ ಶಾಲೆಗೆ ಮಕ್ಕಳು ಖಾಲಿ ಕೈಲಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಭಾನುವಾರ ರಾತ್ರಿಯಿಡೀ ನೀರು ತುಂಬಿಕೊಂಡಿದ್ದ ಮನೆಗಳಿಂದ ನೀರು ಹೊರ ಹಾಕಲು ಸೋಮವಾರ ಸಾರ್ವಜನಿಕರು ಪರದಾಡುವಂತಾಯಿತು. ಸಂತ್ರಸ್ತ ಸ್ಥಿತಿಯಿಂದ ಸಹಜ ಸ್ಥಿತಿಗೆ ಮರಳಲು ಒದ್ದಾಡುತ್ತಿದ್ದ ಸಾರ್ವಜನಿಕರು ನೀರಿನಲ್ಲಿ ನೆಂದಿದ್ದ ಹಾಸಿಗೆ, ದಿಂಬು, ಬಟ್ಟೆ, ಮಕ್ಕಳ ಪುಸ್ತಕ ಸೇರಿದಂತೆ ಇನ್ನಿತರ ವಸ್ತುಗಳನ್ನು ರಸ್ತೆಗಿಟ್ಟು ಒಣಗಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹುಳಿಮಾವು ಮುಖ್ಯ ರಸ್ತೆಯಲ್ಲಿರುವ ನ್ಯಾನೋ ಆಸ್ಪತ್ರೆಯಲ್ಲಿ ಒಳಗೂ ನೀರು ನುಗ್ಗಿದ ಪರಿಣಾಮ ಔಷಧಿಗಳು, ಪ್ರಿಂಟಿಂಗ್‌ ಮಿಷನ್‌, ಕಂಪ್ಯೂಟರ್‌, ಸೇರಿದಂತೆ ಇನ್ನಿತರ ಉಪಕರಣಗಳು ನೀರಿನಲ್ಲಿ ನೆನೆದಿದ್ದವು. ಆಸ್ಪತ್ರೆಯ ಸಿಬ್ಬಂದಿ ಸೋಮವಾರ ಆಸ್ಪತ್ರೆಯ ಕಟ್ಟಡದ ಕೆಳ ಮಹಡಿಯನ್ನು ಸ್ವಚ್ಛಗೊಳಿಸುವುದರ ಜತೆಗೆ ನೀರಿನಲ್ಲಿ ನೆಂದು ಹೋಗಿದ್ದ ಔಷಧಿಯನ್ನು ಬಿಸಿಲಿನಲ್ಲಿ ಒಣಗಿಸುವುದರಲ್ಲಿ ನಿರತರಾಗಿದ್ದರು.

400ಕ್ಕೂ ಹೆಚ್ಚು ಸಿಬ್ಬಂದಿಯಿಂದ ಪರಿಹಾರ ಕಾರ್ಯ:

ಅಗ್ನಿಶಾಮಕ ದಳ, ಕಂದಾಯ ಅಧಿಕಾರಿಗಳು, ಪೌರಕಾರ್ಮಿಕರು 400ಕ್ಕೂ ಹೆಚ್ಚು ಮಂದಿ ಸೋಮವಾರವೂ ನೀರು ಹೊರ ಹಾಕುವ ಕಾರ್ಯ ನಡೆಸಿದರು. ಘಟನಾ ಸ್ಥಳ ಹಾಗೂ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಲೋಕಾಯುಕ್ತ ವಿಶ್ವನಾಥಶೆಟ್ಟಿಶೀಘ್ರ ಪರಿಹಾರಕ್ಕೆ ಸೂಚನೆ ನೀಡಿದರು. ನಿರಾಶ್ರಿತ ಕೇಂದ್ರದಲ್ಲಿ ಮಹಿಳೆಯರಿಗೆ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಊಟ, ವಸತಿ, ಇ-ಶೌಚಾಲಯ ವ್ಯವಸ್ಥೆ ಕಲ್ಪಿಸಲಾಯಿತು. ಸ್ಥಳೀಯ ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮೇ ಅವರಿಂದ ಮಹಿಳೆಯರಿಗೆ ಮಕ್ಕಳಿಗೆ ಬಟ್ಟೆವಿತರಣೆ ಮಾಡಲಾಯಿತು.

ಆದರೆ, ಭಾರಿ ಪ್ರಮಾಣದ ನೀರು ನೆಲೆ ನಿಂತಿದ್ದ ಪರಿಣಾಮ ಹಾಗೂ ಮನೆಗಳಿಗೆ ಕೊಳಚೆ ನೀರು ನುಗ್ಗಿದ್ದ ಪರಿಣಾಮ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಹೀಗಾಗಿ ಬಿಬಿಎಂಪಿಯಿಂದ ಔಷಧಗಳ ಸಿಂಪಡಣೆ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ದಿನಸಿ ಕಿಟ್‌ ವಿತರಣೆಗೆ ಚಿಂತನೆ

ಮನೆಯಲ್ಲಿದ್ದ ದವಸ-ಧಾನ್ಯ ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಒಂದು ವಾರಕ್ಕೆ ಬೇಕಾಗುವ ಆಹಾರ ಸಾಮಗ್ರಿಯ ಕಿಟ್‌ ವಿತರಣೆ ಮಾಡುವುದಕ್ಕೆ ಬಿಬಿಎಂಪಿ ಚಿಂತನೆ ನಡೆಸುತ್ತಿದೆ. ಕಿಟ್‌ನಲ್ಲಿ ಗೋಧಿ, ಅಕ್ಕಿ, ಎಣ್ಣೆ, ಬೆಳೆ, ರವೆ ಸೇರಿದಂತೆ ಅಗತ್ಯವಿರುವ ಸಾಮಗ್ರಿಗಳನ್ನು ಒಳಗೊಂಡಿರಲಿದೆ ಎಂದು ಬೊಮ್ಮನಹಳ್ಳಿ ವಲಯದ ವಿಶೇಷ ಆಯುಕ್ತ ಡಿ.ರಂದೀಪ್‌ ಮಾಹಿತಿ ನೀಡಿದರು.

ಸ್ಥಳೀಯ ಶಾಸಕರು ಪತ್ತೆ ಇಲ್ಲ: ಆಕ್ರೋಶ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹುಳಿಮಾವು ಕೆರೆ ಒಡೆದು ಭಾರೀ ಪ್ರಮಾಣದ ಅನಾಹುತ ಉಂಟಾದರೂ ಸ್ಥಳೀಯ ಶಾಸಕ ಸತೀಶ್‌ ರೆಡ್ಡಿ ಭಾನುವಾರ ಮತ್ತು ಸೋಮವಾರ ಎರಡೂ ದಿನವೂ ಸ್ಥಳದಲ್ಲಿ ನಿಂತು ಸ್ಥಳೀಯರ ನೋವಿಗೆ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಆಕ್ರೋಶ ಹೊರಹಾಕಿದ ಸಂತ್ರಸ್ತರು, ಇಷ್ಟುಪ್ರಮಾಣದಲ್ಲಿ ಪ್ರವಾಹ ಆಗಿ ನಾವೆಲ್ಲಾ ಬೀದಿಗೆ ಬಿದ್ದರೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಇಂತಹ ಸಮಯದಲ್ಲೇ ನಮ್ಮ ಸಮಸ್ಯೆಗಳನ್ನು ಕೇಳದಿದ್ದರೆ ಅವರು ಜನಪ್ರತಿನಿಧಿಯಾಗಿರುವುದು ಏಕೆ ಎಂದು ಪ್ರಶ್ನಿಸಿದರು.

‘ಉದ್ದೇಶಪೂರ್ವಕವಾಗಿ ಕೆರೆ ಒಡೆದಂತಿದೆ’

ಮೇಲ್ನೋಟಕ್ಕೆ ಯಾರೋ ಉದ್ದೇಶಪೂರ್ವಕವಾಗಿಯೇ ಕೆರೆ ಒಡೆದಿದ್ದಾರೆ ಎಂದು ತಿಳಿಯುತ್ತಿದೆ. ಸ್ವಾರ್ಥಕ್ಕಾಗಿ ಕೆರೆ ಒಡೆದಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಇಲ್ಲಿ ಅಧಿಕಾರಿಗಳಿಗೆ ಯಾವ ಕಾಮಗಾರಿ ಎಂಬುದೂ ಮಾಹಿತಿ ಇಲ್ಲ. ಬಿಬಿಎಂಪಿ, ಬಿಡಿಎ, ಜಲಮಂಡಳಿ, ಅರಣ್ಯ ಇಲಾಖೆ ಯಾರೂ ಹೊಣೆ ಹೊರುತ್ತಿಲ್ಲ. ಆದಷ್ಟುಶೀಘ್ರಕಾರಣ ಪತ್ತೆ ಹಚ್ಚಲಾಗುವುದು.

- ಆರ್‌.ಅಶೋಕ್‌, ಕಂದಾಯ ಸಚಿವ.

ಅಪಾರ ಹಾನಿ

- 15 ಬಡಾವಣೆ: ಹುಳಿಮಾವು ಕೆರೆಯಿಂದ ನೀರು ನುಗ್ಗಿದ ಬಡಾವಣೆಗಳು

- 1000 ಮನೆ: 700 ಮನೆಗಳು, 300 ಫ್ಲ್ಯಾಟ್‌ಗಳ ನಿವಾಸಿಗಳಿಗೆ ಸಂಕಷ್ಟ

- 3000 ಜನ: ಕೆರೆ ನೀರ ಪ್ರವಾಹದಿಂದ ಸಂತ್ರಸ್ತರಾದ ಅಂದಾಜು ಜನತೆ

- 1000 ಕಾರು: ಕೆರೆ ನೀರಿನಿಂದಾಗಿ ಹಾನಿಗೀಡಾದ ಕಾರು, ಬೈಕ್‌, ಆಟೋ

- 100ಕ್ಕೂ ಹೆಚ್ಚು: ಅಪಾರ್ಟ್‌ಮೆಂಟ್‌ಗಳ ಪಾರ್ಕಿಂಗ್‌ನಲ್ಲಿ ತುಂಬಿದ ನೀರು

ಕೆರೆ ಏರಿ ದುರಸ್ತಿ

- 400 ಸಿಬ್ಬಂದಿ: ಕೆರೆ ಏರಿ ದುರಸ್ತಿಗೆ ಬಳಸಿಕೊಳ್ಳಲಾದ ಸಿಬ್ಬಂದಿಯ ಸಂಖ್ಯೆ

- 200 ಟ್ರಕ್‌: ತಾತ್ಕಾಲಿಕ ದುರಸ್ತಿಗೆ ಬಳಸಿಕೊಂಡ ಮಣ್ಣಿನ ಟ್ರಕ್‌ ಲೋಡ್‌

- 25 ಪಂಪ್‌ಸೆಟ್‌: ನೆರೆ ನೀರು ಖಾಲಿ ಮಾಡಲು ಬಳಸಿದ ಪಂಪ್‌ಸೆಟ್‌ಗಳು

ನೆರೆ ಪರಿಹಾರ

50000 ರು.: ಸಂತ್ರಸ್ತರ ಕುಟುಂಬಕ್ಕೆ ಬಿಬಿಎಂಪಿ .10000, ಸರ್ಕಾರದಿಂದ .40000

5 ಲಕ್ಷ ರು.: ಪೂರ್ತಿ ಮನೆ ಹಾನಿಗೊಳಗಾದ ಕುಟುಂಬಕ್ಕೆ 5 ಲಕ್ಷ ರು. ನೀಡಲು ಚಿಂತನೆ

70 ಕೋಟಿ ರು. ಆಸ್ತಿ-ಪಾಸ್ತಿ ನಷ್ಟ?

ಕೆರೆ ಏರಿ ಒಡೆದ ಪರಿಣಾಮ ಆರೇಳು ಬಡಾವಣೆಯ ಸುಮಾರು 650ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಬಿಬಿಎಂಪಿ ಅಂದಾಜಿಸಿದ್ದು, ಸುಮಾರು 300 ಕಾರು, ನೂರಾರು ಬೈಕ್‌- ಆಟೋ, ದವಸ-ಧಾನ್ಯ, ಟಿವಿ. ಫ್ರಿಡ್ಜ್‌ ಸೇರಿದಂತೆ ಎಲೆಕ್ಟ್ರಾನಿಕ್‌ ವಸ್ತು, ಬಟ್ಟೆ, ಪಾತ್ರೆ ಇನ್ನಿತರ ವಸ್ತುಗಳು ಸೇರಿದಂತೆ ಒಟ್ಟು .70 ಕೋಟಿ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ನಿಖರವಾದ ಅಂಕಿ ಅಂಶ ತಿಳಿಯಲಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.