ಬೆಂಗಳೂರು [ನ.29]:  ಹುಳಿಮಾವು ಕೆರೆ ಏರಿ ಒಡೆದು ಸಂತ್ರಸ್ತರ ಕೇಂದ್ರದಲ್ಲಿ ವಾಸಿಸುತ್ತಿದ್ದ ನಿರಾಶ್ರಿತರು ಗುರುವಾರ ತಮ್ಮ- ತಮ್ಮ ಮನೆಗಳಿಗೆ ಮರಳಿದ್ದಾರೆ. ಆದರೆ, ಕೆಲವು ಮನೆಗಳು ಇನ್ನೂ ವಾಸಕ್ಕೆ ಯೋಗ್ಯವಲ್ಲದ ಪರಿಸ್ಥಿತಿಯಿದ್ದರೂ ಅನಿವಾರ್ಯವಾಗಿ ನಿರಾಶ್ರಿತ ಕೇಂದ್ರ ತೆರವು ಮಾಡಿದರು.

ಭಾನುವಾರ ಮಧ್ಯಾಹ್ನ ಏಕಾಏಕಿ ಹುಳಿಮಾವು ಕೆರೆ ಏರಿ ಒಡೆದು ಸುಮಾರು ಎಂಟು ಬಡಾವಣೆಯ 630 ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ದಿನಸಿ, ಎಲೆಕ್ಟ್ರಾನಿಕ್‌ ಉಪಕರಣ, ಬಟ್ಟೆ, ಹಾಸಿಗೆ ಸೇರಿದಂತೆ ಇನ್ನಿತರ ವಸ್ತುಗಳು ನೀರುಪಾಲಾಗಿದ್ದವು. ಸುಮಾರು ಮೂರದಿಂದ ಐದು ಅಡಿಗಳಷ್ಟುನೀರು ಮನೆಗಳಲ್ಲಿ ನಿಂತಿದ್ದರಿಂದ ಬಿಬಿಎಂಪಿ ಹುಳಿಮಾವು ಮುಖ್ಯರಸ್ತೆಯ ಟೆನ್ನಿಸ್‌ ಸ್ಟೇಡಿಯಂನಲ್ಲಿ ನಿರಾಶ್ರಿತ ಕೇಂದ್ರ ನಿರ್ಮಿಸಿ ಸಂತ್ರಸ್ತರಿಗೆ ಊಟ, ಬಟ್ಟೆ, ಮಲಗುವುದಕ್ಕೆ ಕಳೆದ ಐದು ದಿನ ವ್ಯವಸ್ಥೆ ಮಾಡಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಳಿಕ ಬಡಾವಣೆಗಳಿಗೆ ನುಗ್ಗಿದ್ದ ನೀರನ್ನು ಹೊರ ಹಾಕಿ, ಔಷಧಿ ಸಿಂಪಡಿಸಿ, ಸ್ವಚ್ಛಗೊಳಿಸಿ, ಮನೆಯಲ್ಲಿದ್ದ ವಸ್ತು ಹಾನಿಯಾದ 156 ಸಂತ್ರಸ್ತರ ಕುಟುಂಬಕ್ಕೆ ತಲಾ 50 ಸಾವಿರ ರು. ಪರಿಹಾರ, 16 ವಿಧದ ದಿನಸಿ ಕಿಟ್‌, ಬಟ್ಟೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟು ಗುರುವಾರ ತಮ್ಮ ಮನೆಗಳಿಗೆ ವಾಪಾಸ್‌ ಕಳುಹಿಸಿಕೊಡಲಾಗಿದೆ.

ಇನ್ನು ಸುಧಾರಿಸಿದ ಪರಿಸ್ಥಿತಿ:

ಕೆರೆ ಏರಿ ಒಡೆದು ಕೃಷ್ಣ ಲೇಔಟ್‌ನ ಸುಮಾರು ಮನೆಗಳು ಇನ್ನು ವಾಸಕ್ಕೆ ಯೋಗ್ಯವಾಗಿಲ್ಲ. ನೆಲದಲ್ಲಿ ಇನ್ನೂ ನೀರು ಜಿನುಗುತ್ತಿತ್ತು. ಬಿಬಿಎಂಪಿ ಗುರುವಾರ ಸಂತ್ರಸ್ತರ ಕೇಂದ್ರ ಮುಚ್ಚಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಂತ್ರಸ್ತರು ತಮ್ಮ ಮನೆಗಳಿಗೆ ಹೋಗಬೇಕಾಗಿದೆ.

ಎಲ್ಲರಿಗೂ ಪರಿಹಾರದ ಭರವಸೆ

ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಗುರುವಾರ ಕೆರೆ ಒಡೆದ ಪ್ರದೇಶ ಹಾಗೂ ನೀರು ನುಗ್ಗಿ ಹಾನಿಗೊಳಗಾದ ಪ್ರದೇಶದಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ಪಾಲಿಕೆ ಸದಸ್ಯರೊಂದಿಗೆ ಪರಿಶೀಲನೆ ನಡೆಸಿದರು. ಈ ವೇಳೆ ಕೆಲವರು ತಮಗೆ ಪರಿಹಾರ ನೀಡಿಲ್ಲ ಎಂದು ದೂರಿದರು. ಆಗ ಶಾಸಕರು ಮತ್ತು ಪಾಲಿಕೆ ಸದಸ್ಯರು ಮನೆಗಳಿಗೆ ನೀರು ನುಗ್ಗಿದ ಎಲ್ಲ ಮನೆಗಳಿಗೂ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

156 ಸಂತ್ರಸ್ತರಲ್ಲಿ ಸುಮಾರು 30 ಸಂತ್ರಸ್ತರ ಬ್ಯಾಂಕ್‌ ಖಾತೆಗೆ ತಾಂತ್ರಿಕ ಸಮಸ್ಯೆಯಿಂದ ಇನ್ನು ಪರಿಹಾರ ವರ್ಗಾವಣೆಯಾಗಿಲ್ಲ. ಶುಕ್ರವಾರ ಪರಿಶೀಲನೆ ಮಾಡಿ ಪರಿಹಾರ ನೀಡುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

-ಭಾಗ್ಯಲಕ್ಷ್ಮೀ ಮುರುಳಿ, ಅರಕೆರೆ ವಾರ್ಡ್‌ ಸದಸ್ಯೆ.