ರವಿ ಕಾಂಬಳೆ 

ಹುಕ್ಕೇರಿ(ಜ.25): ಸುಸ್ಥಿರ ಅಭಿವೃದ್ಧಿ, ಜನರ ಆರೋಗ್ಯ ದೃಷ್ಟಿಯಿಂದ ಜಾರಿಗೆ ತಂದಿರುವ ಅನಿಲ ಭಾಗ್ಯ ಯೋಜನೆ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಯಶಸ್ವಿಯಾಗಿದೆ. 2017ರ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನಿಲ ಭಾಗ್ಯ ಯೋಜನೆಯಡಿ ಹುಕ್ಕೇರಿ ತಾಲೂಕಿನಲ್ಲಿ ಇದುವರೆಗೆ ಸಲ್ಲಿಕೆಯಾಗಿದ್ದ 2785 ಅರ್ಜಿಗಳ ಪೈಕಿ 1999 ಫಲಾನುಭವಿಗಳನ್ನು ಆಯ್ಕೆ ಮಾಡಿ 1364 ಜನರಿಗೆ ಗ್ಯಾಸ್ ವಿತರಿಸಲಾಗಿದೆ. 

ಈ ಮೂಲಕ ಯೋಜನೆಯಡಿ ಶೇ.87 ರಷ್ಟು ಪ್ರಗತಿ ಸಾಧಿಸಿದಂತಾಗಿದೆ. ಇದರಿಂದ ಅಡುಗೆಗೆ ಉರುವಲು ಬಳಸುವ, ಹೊಗೆ ವಾತಾವರಣದಲ್ಲಿ ಮಹಿಳೆಯರು ಇರಬೇಕಾದ ಪರಿಸ್ಥಿತಿಯೂ ಇಲ್ಲವಾಗಿದೆ. ಅನಿಲ ಭಾಗ್ಯ ಯೋಜನೆಯಲ್ಲಿ ಹಿಂದೂಸ್ತಾನ ಪೆಟ್ರೋಲಿಯಂ, ಭಾರತ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಸಂಸ್ಥೆಗಳ ಮೂಲಕ ಸಂಪರ್ಕವನ್ನು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ ಫಲಾನುಭವಿಗಳಿಗೆ ವಿತರಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸೌದೆ ಬಳಸಿ ಅಡುಗೆ ತಯಾರಿಸುತ್ತಿದ್ದ ನೂರಾರು ಕುಟುಂಬಗಳಿಗೆ ಅನಿಲ ಭಾಗ್ಯ ಆಸರೆಯಾಗಿದ್ದು, ಈಗ ಸರ್ಕಾರ ಕೊಡಮಾಡಿರುವ ಗ್ಯಾಸ್ ಬಳಸಿ ಅಡುಗೆ ಸಿದ್ಧಪಡಿಸಿಕೊಂಡು ನೆಮ್ಮದಿ ಜೀವನ ಕಳೆಯುತ್ತಿದ್ದಾರೆ. ಯೋಜನೆಯಲ್ಲಿ ಅರ್ಜಿ ನೋಂದಾಯಿಸಿ ಸೌಲಭ್ಯ ಪಡೆಯಲು ಫಲಾನುಭವಿಗಳು ಬಿಪಿಎಲ್ ಪ್ರಮಾಣ ಪತ್ರ, ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್, ಚುನಾವಣೆ ಚೀಟಿ, ಭಾವಚಿತ್ರದೊಂದಿಗೆ ವಿತರಣೆ ಕೇಂದ್ರಗಳಿಗೆ ತೆರಳಿ ನಿಗದಿತ ನಮೂನೆಯಲ್ಲಿ ಭರ್ತಿಗೊಳಿಸಿ ನೀಡಿದ್ದರು. ಬಳಿಕ ದಾಖಲೆ ಪರಿಶೀಲನೆ ನಡೆದು ಸಮರ್ಪಕವಿದ್ದ ಅರ್ಜಿದಾರರಿಗೆ ಗ್ಯಾಸ್ ಸಂಪರ್ಕ ದೊರಕಿದೆ. 

ಜೀವ ವಿಮೆ ಸೌಲಭ್ಯ: 

ಯೋಜನೆಯಡಿ ಗ್ಯಾಸ್ ಜತೆಗೆ ಸುರಕ್ಷತೆಗಾಗಿ ಜೀವ ವಿಮೆ ನೀಡಲಾಗಿದೆ. ಸೌದೆ ಒಲೆಯಿಂದ ಉಂಟಾಗುವ ಹೊಗೆಯಿಂದ ಬಡ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಹಿನ್ನೆಲೆ ಬಡವರಿಗಾಗಿ ಸರ್ಕಾರ ತಂದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಜತೆಗೆ ಹೊಗೆ ಮುಕ್ತ ಅಡುಗೆ ಮನೆ ದೃಷ್ಟಿಯಿಂದ ಜಾರಿಗೆ ತಂದ ಈ ಯೋಜನೆಯನ್ನು ಜನರೂ ಮುಕ್ತವಾಗಿ ಸ್ವೀಕರಿಸಿದ್ದಾರೆ. ಯೋಜನೆಯ ಪ್ರಯೋಜನವನ್ನು ಅನೇಕ ಬಡ ಕುಟುಂಬಗಳು ಪಡೆದುಕೊಂಡಿವೆ. ಒಲೆಯ ಮುಂದೆ ಕುಳಿತು ಹೊಗೆಯಿಂದ ಕಷ್ಟಪಡುತ್ತಿದ್ದ ಬಡ ಮಹಿಳೆ ಯರು ಅದರಿಂದ ಹೊರಬಂದಿದ್ದಾರೆ. ಗ್ರಾಮೀಣ ಮಹಿಳೆಯರ ಜೀವನ ಸುಧಾರಿಸಿದೆ. ದಾಖಲೆಗಳ ವ್ಯತ್ಯಾಸಗಳಿಂದ ಕೆಲವರಿಗೆ ಸಂಪರ್ಕ ಕೈತಪ್ಪಿದೆ. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಂಡು ಅವರನ್ನು ಸೇರಿಸಿ ವಿತರಿಸುವ ಗುರಿ ಹೊಂದಲಾಗಿದೆ.

ಸದ್ಯ ವಿತರಣೆ ಸ್ಥಗಿತ ಅನಿಲ ಭಾಗ್ಯ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸುವ ಕೆಲಸ ಹಿಂದಿನ ಎರಡು ವರ್ಷಗಳಲ್ಲಿ ನಡೆದಿತ್ತು. ಕುಟುಂಬ ಸದಸ್ಯರಿಂದ ಅರ್ಜಿ ಆಹ್ವಾನಿಸಿ ಫಲಾನುಭವಿಗಳನ್ನು ಗುರುತಿಸುವ ಕೆಲಸ ನಡೆದಿತ್ತು. ಅರ್ಜಿ ಸಲ್ಲಿಸಿದ ಬಡ ಕುಟುಂಬಗಳ ಅರ್ಹ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಪೂರ್ಣಗೊಂಡಿದೆ. ದಾಖಲೆಗಳಿಲ್ಲದೇ ಅಸಮರ್ಪಕವಾಗಿರುವ ಕೆಲ ಅರ್ಜಿದಾರರಿಗೆ ವಿತರಣೆಗೆ ಬಾಕಿ ಇದೆ. ಸದ್ಯ ವಿತರಣೆ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೆದಾರ ಬಿ.ಎನ್.ಬಡಿಗೇರ ಅವರು ಹೇಳಿದ್ದಾರೆ. 

ನಿರೀಕ್ಷಿತ ಗುರಿ ವಿಶ್ವಾಸ ರಾಜ್ಯ ಸರ್ಕಾರದ ಅನಿಲ ಭಾಗ್ಯ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲ ಅರ್ಹರಿಗೆ ಗ್ಯಾಸ್ ಸಂಪರ್ಕ ನೀಡಲು ಕ್ರಮ ಕೈಕೊಳ್ಳಲಾಗಿದೆ. ದಾಖಲೆಗಳು ಸರಿ ಇಲ್ಲದೇ ಇರುವವರಿಗೆ ತಾಂತ್ರಿಕ ತೊಂದರೆಗಳಿಂದ ವಿತರಿಸಲು ಸಾಧ್ಯವಾಗಿಲ್ಲ. ತಾಲೂಕಿನಲ್ಲಿ ನಿರೀಕ್ಷಿತ ಗುರಿ ಸಾಧಿಸಿದ ವಿಶ್ವಾಸವಿದೆ. ಯೋಜನೆ ಯ ಪ್ರಯೋಜನವನ್ನು ಅನೇಕ ಬಡ ಕುಟುಂಬಗಳು ಪಡೆದುಕೊಂಡಿವೆ. ಒಲೆ ಯ ಮುಂದೆ ಕುಳಿತು ಹೊಗೆಯಿಂದ ಕಷ್ಟ ಪಡುತ್ತಿದ್ದ ಬಡ ಮಹಿಳೆಯರು ಅದರಿಂದ ಹೊರಬಂದಿದ್ದಾರೆ ಎಂದು ಆಹಾರ ನಿರೀಕ್ಷಕ ಲೋಕೇಶ ಢಂಗೆ ಹೇಳಿದ್ದಾರೆ.