ಶಿವಾನಂದ ಗೊಂಬಿ

ಹುಬ್ಬಳ್ಳಿ[ಆ.15]: ‘ಹತ್ತ ದಿನಾ ಆತ್‌ ನೋಡ್ರಿ. ನಾವ್‌ ಇಲ್ಲೇ ಬಂದ್‌. ನಮ್ಮನಿ ಎಲ್ಲ ಬಿದ್ದ ಹೋಗೈತಿ. ಇಲ್ಲೇ ಅಡ್ಗಿ ಮಾಡ್ಬೇಕ್‌, ಬಾಣಂತಿ ದೇಖರಕಿ ಕೂಡ ಇಲ್ಲೇ ಮಾಡಬೇಕಾಗೈತಿ ನೋಡ್ರಿ..!’

-ವರುಣನ ಅಬ್ಬರಕ್ಕೆ ಮನೆ ಕಳೆದುಕೊಂಡು ಹುಬ್ಬಳ್ಳಿ ತಾಲೂಕಿನ ಅಮರಗೋಳ ಗ್ರಾಮದ ಅಡವಿ ಸಿದ್ದೇಶ್ವರ ದೇವಸ್ಥಾನದಲ್ಲಿ ಆಶ್ರಯ ಪಡೆದಿರುವ ಈರಮ್ಮ ಲದ್ದಿ ಹೇಳುವ ಮಾತಿದು. ಇದೀಗ ಮಳೆ ಶಾಂತವಾಗಿರುವುದರಿಂದ ಪುನರ್ವಸತಿ ಕೇಂದ್ರದಲ್ಲಿ ಬುಧವಾರದಿಂದ ಊಟ ನೀಡಿಲ್ಲ. ಹೀಗಾಗಿ ಸರ್ವಸ್ವವನ್ನೂ ಕಳೆದುಕೊಂಡಿರುವ ಕುಟುಂಬಗಳಿಗೆ ದಿಕ್ಕೇ ತೋಚದಂತಾಗಿದೆ.

ಈರಮ್ಮ ಅವರ ಪತಿ ನಿಂಗಪ್ಪ ಲದ್ದಿ ಕೃಷಿಕರಾಗಿದ್ದು 3 ಎಕರೆ ಜಮೀನಿದೆ. ಕಳೆದ ವರ್ಷ ಬರದಿಂದಾಗಿ ಬಿತ್ತಿದ್ದ ಬೆಳೆಯೆಲ್ಲ ಒಣಗಿ ಹಾಳಾಗಿ ಹೋಗಿದ್ದರೆ, ಈ ವರ್ಷ ಬಿತ್ತಿದ್ದ ಬೆಳೆಯೆಲ್ಲ ನೀರಲ್ಲಿ ಕೊಚ್ಚಿ ಹೋಗಿದೆ. 10 ದಿನಗಳ ಹಿಂದೆ ಸುರಿದ ಮಳೆಗೆ ಇವರ ಮನೆಯೂ ಕುಸಿದಿದೆ. ಮನೆಯಲ್ಲಿ 20 ದಿನದ ಹಿಂದೆ ಹೆರಿಗೆಯಾಗಿರುವ ಶಿಲ್ಪಾ ಕೂಡ ಇದ್ದರು. ಬಾಣಂತಿ ಮಲಗಿದ್ದ ಕೊಠಡಿಯೇ ನೆಲಕಚ್ಚಿದೆ. ಅದೃಷ್ಟವಶಾತ್‌ ಬಾಣಂತಿ ಹಾಗೂ ಮಗು ಅಪಾಯದಿಂದ ಪಾರಾಗಿದ್ದಾರೆ.

ಮನೆ ಬಿದ್ದ ಕೆಲಹೊತ್ತಿನಲ್ಲೇ ಬಾಣಂತಿ ಹಾಗೂ ಮಗುವನ್ನು ಕರೆದುಕೊಂಡು ಬಂದು ದೇವಸ್ಥಾನ ಸೇರಿದ್ದಾರೆ. ಅಲ್ಲೇ ಅಡುಗೆ ಅನಿಲ, ಬಟ್ಟೆಬರೆ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಗರ್ಭಗುಡಿ ಹಿಂದೆಯೇ ಬಾಣಂತಿಗೆ ಆರೈಕೆ ಮಾಡಲಾಗುತ್ತಿದೆ. ತಾಲೂಕಾಡಳಿತ ಕೂಡ ಇಲ್ಲೇ ಪುನರ್ವಸತಿ ಕೇಂದ್ರ ತೆರೆದಿದೆ. ಈ ದೇವಸ್ಥಾನದಲ್ಲಿ ಮೂರು ಕುಟುಂಬಗಳಿವೆ. ಅಲ್ಲೇ ಮನೆ ಮಂದಿಯೆಲ್ಲ ಊಟ ಮಾಡ್ತಾರೆ. ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಬಾಣಂತಿ ಹಾಗೂ ಮಗುವಿಗೆ ಸ್ನಾನದ ವ್ಯವಸ್ಥೆ ಮಾಡಲಾಗಿದೆ. ಆದಷ್ಟುಬೇಗನೆ ಪರಿಹಾರ ಕೊಟ್ಟರೆ ಮನೆ ರಿಪೇರಿಯಾದರೂ ಮಾಡಿಸಿಕೊಬಹುದು ಎಂಬ ಯೋಚನೆ ದೇವಸ್ಥಾನದಲ್ಲಿ ವಾಸಿಸುತ್ತಿರುವ ಮೂರು ಕುಟುಂಬಗಳದ್ದು