ಶಿವಾನಂದ ಗೊಂಬಿ 

ಹುಬ್ಬಳ್ಳಿ[ಡಿ.25]: ಹಿಂದೆ ಲಾಲು ಪ್ರಸಾದ ಯಾದವ್ ರೈಲ್ವೆ ಸಚಿವರಾಗಿದ್ದಾಗ ರೈಲು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ಗಳಲ್ಲೇ ಚಹಾ ಯೋಜನೆ ಜಾರಿಯಾಗಿತ್ತು. ಆದರೆ ಅದು ಕೆಲವೇ ದಿನಗಳಲ್ಲಿ ವಿಫಲವಾಗಿತ್ತು. ಇದೀಗ ಮತ್ತೆ ರೈಲ್ವೆ ನಿಲ್ದಾಣ, ರೈಲುಗಳಲ್ಲಿ ಮಣ್ಣಿನ ಕಪ್‌ಗಳಲ್ಲಿ ಚಹಾ ಪೂರೈಕೆ ಯೋಜನೆ ಸದ್ದಿಲ್ಲದೇ ಶುರುವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈಗ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸೂಚನೆ ಮೇರೆಗೆ ಕಳೆದ 10-15 ದಿನಗಳಿಂದಲೂ ಶುರುವಾಗಿದ್ದು, ಹುಬ್ಬಳ್ಳಿ ವಿಭಾಗದ ನಿಲ್ದಾಣಗಳಲ್ಲಿನ ಕ್ಯಾಂಟೀನ್‌ಗಳಲ್ಲಿ ಮಾತ್ರ ಶುರುವಾಗಿದೆ. ಹೌದು! ಕಳೆದ ಬಾರಿ ಲಾಲು ಪ್ರಸಾದ ಯಾದವ್ ಕುಂಬಾರರನ್ನು ಆರ್ಥಿಕವಾಗಿ ಸದೃಢವನ್ನಾಗಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಹಾಗೂ ಪೇಪರ್ ಕಪ್‌ಗಳ ಬಳಕೆಗೆ ಬದಲು ಮಣ್ಣಿನ ಕಪ್ ಬಳಕೆ ಮಾಡುವ ಯೋಜನೆ ಜಾರಿಗೊಳಿಸಿದ್ದರು. ಈ ಕುರಿತು ಬಜೆಟ್ ನಲ್ಲೇ ಘೋಷಿಸಿ ಯೋಜನೆ ಜಾರಿಗೊಳಿಸಿದ್ದರು. ಆದರೆ ಪೂರ್ವಸಿದ್ಧತೆ ಇಲ್ಲದೇ ಕೈಗೊಂಡ ಈ ಯೋಜನೆ ಬರೀ ಎರಡೇ ತಿಂಗಳಲ್ಲಿ ವಿಫಲವಾಗಿತ್ತು. ಆದರೆ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡು ಯೋಜನೆ ಘೋಷಣೆ ಮಾಡುವ ಯೋಚನೆ ಸಚಿವ ಸುರೇಶ ಅಂಗಡಿ ಅವರದ್ದು. 

ಈಗ ಏನಾಗಿದೆ?: 

ಪ್ಲಾಸ್ಟಿಕ್ ಬ್ಯಾನ್ ಆದ ಮೇಲೆ ರೈಲ್ವೆ ನಿಲ್ದಾಣ ಹಾಗೂ ರೈಲುಗಳಲ್ಲಿ ಪೇಪರ್ ಕಪ್‌ಗಳನ್ನು ಬಳಸಲಾಗುತ್ತಿದೆ. ಪೇಪರ್ ಕಪ್‌ಗಳ ಬದಲಿಗೆ ಮಣ್ಣಿನ ಕಪ್‌ಗಳನ್ನು ಬಳಸುವುದರಿಂದ ಸ್ಥಳೀಯವಾಗಿರುವ ಕುಂಬಾರರಿಗೆ ಉದ್ಯೋಗ ಕೊಟ್ಟಂತಾ ಗುತ್ತದೆ ಎಂದು ಯೋಚನೆ ಮಾಡಿಕೊಂಡು ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ಅನುಷ್ಠಾನಗೊಳಿಸಿದ್ದಾರೆ. 

ಹುಬ್ಬಳ್ಳಿ ವಿಭಾಗದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಹೊಸಪೇಟೆ, ಹಾವೇರಿ ಸೇರಿದಂತೆ ಮತ್ತಿತರ ನಿಲ್ದಾಣಗಳಲ್ಲಿ ಮಣ್ಣಿನ ಕಪ್ ಬಳಕೆ ಮಾಡಲಾಗುತ್ತಿದೆ. ಹಾಗಂತ ಎಲ್ಲರಿಗೂ ಮಣ್ಣಿನ ಕಪ್‌ಗಳಲ್ಲೇ ಕೊಡುತ್ತಿಲ್ಲ. ಕ್ಯಾಂಟೀನ್‌ಗಳಲ್ಲಿ ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಲಾಗುತ್ತಿದೆ. ಜೊತೆಗೆ ಚಹಾ ಪಡೆಯಲು ಬರುವ ಗ್ರಾಹಕರಿಗೆ ಮಣ್ಣಿನ ಕಪ್‌ಗಳಲ್ಲಿ ಬೇಕೋ, ಪೇಪರ ಕಪ್‌ಗಳಲ್ಲಿ ಬೇಕೋ ಎಂದು ಕೇಳಲಾಗುತ್ತಿದೆ. ಯಾರು ಮಣ್ಣಿನ ಕಪ್ ಬೇಕು ಎಂದು ಕೇಳುತ್ತಾರೋ ಅವರಿಗೆ ಮಾತ್ರ ಕೊಡಲಾಗುತ್ತಿದೆ. ರೈಲುಗಳಲ್ಲೂ ಇನ್ನು ಪ್ರಾರಂಭವಾಗಿಲ್ಲ. ನಿಲ್ದಾಣಗಳಲ್ಲಿ ಯಾವ ರೀತಿ ಜನರಿಂದ ಸ್ಪಂದನೆ ಸಿಗುತ್ತದೆಯೋ ನೋಡಿಕೊಂಡು ರೈಲುಗಳಲ್ಲಿ ಹಾಗೂ ನೈರುತ್ಯ ರೈಲ್ವೆ ವಲಯದ ಉಳಿದ ವಿಭಾಗಗಳಲ್ಲಿ ಮಣ್ಣಿನ ಕಪ್ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿ ವರ್ಗ ತಿಳಿಸುತ್ತದೆ. 

ದರವೆಷ್ಟು? 

ಒಂದು ಕಪ್‌ಗೆ ೨.೫೦ ರು. ಬೀಳುತ್ತದೆ. ಪೇಪರ್ ಕಪ್‌ಗಳು 50 ಪೈಸೆಯಿಂದ 1 ರು.ಗೆ ಸಿಗುತ್ತವೆ. ಹೀಗಾಗಿ ಮಣ್ಣಿನ ಕಪ್ ಕೊಂಚ ದುಬಾರಿ ಎಂಬ ಅಭಿಪ್ರಾಯ ಚಹಾದಂಗಡಿ ಮಾಲೀಕರದ್ದು

ಯಾರಿಗೆ ಆರ್ಡರ್ 

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಸಂಗಪ್ಪ ಬಸಪ್ಪ ಕುಂಬಾರ ಎಂಬಾತನಿಗೆ ಮಣ್ಣಿನ ಕಪ್ ಪೂರೈಕೆಗೆ ಗುತ್ತಿಗೆ ನೀಡಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ೫ ಸಾವಿರ ಕಪ್‌ಗಳನ್ನು ಪೂರೈಕೆ ಮಾಡಿದ್ದ ಸಂಗಪ್ಪ, ಇದೀಗ ಮತ್ತೆ ೨ ಸಾವಿರ  ಕಪ್ ಗಳನ್ನು ಪೂರೈಕೆ ಮಾಡಿದ್ದಾರೆ . ಮತ್ತೆ 3 ಸಾವಿರ ಕಪ್ ಪೂರೈಕೆಯನ್ನು ಇನ್ನು ಎಂಟ್ಹತ್ತು ದಿನಗಳಲ್ಲಿ ಮಾಡಲಿದ್ದಾರೆ. ಹಿಂದೆ ಮಣ್ಣಿನ ಕಪ್ ಯೋಜನೆ ಜಾರಿಯಾಗಿದ್ದಾಗ ಈತ ಕಪ್‌ಗಳನ್ನು ಪೂರೈಕೆ ಮಾಡಿದ್ದ. ಈ ಕಾರಣದಿಂದ ಪ್ರಾರಂಭದಲ್ಲಿ ಈತನಿಗೆ ವಹಿಸಲಾಗಿದೆ. ಎಲ್ಲ ವಿಭಾಗಗಳಲ್ಲಿ ಮಣ್ಣಿನ ಕಪ್ ಬೇಡಿಕೆ ಜಾಸ್ತಿಯಾದ ಮೇಲೆ ಬೇರೆ ಬೇರೆಯ ಕುಂಬಾರರಿಗೂ ಕೆಲಸ ನೀಡಲಾಗು ವುದು ಎಂದು ರೈಲ್ವೆ ಇಲಾಖೆಯ ವಾಣಿಜ್ಯ ವಿಭಾಗ ತಿಳಿಸುತ್ತದೆ. ಒಟ್ಟಿನಲ್ಲಿ ಮಣ್ಣಿನ ಕಪ್ ಬಳಕೆಯಂತೂ ಮಾಡಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸು ಆಗುತ್ತದೆ ಎಂಬುದನ್ನು ಇನ್ನು ಕೆಲ ದಿನ ಕಾಯ್ದು ನೋಡಬೇಕಷ್ಟೇ!

ಸದ್ಯ 7 ಸಾವಿರ ಮಣ್ಣಿನ ಕಪ್ ಗಳನ್ನು ತರಿಸಲಾಗಿದೆ. ಹುಬ್ಬಳ್ಳಿ ವಿಭಾಗದ ಕೆಲ ನಿಲ್ದಾಣಗಳಲ್ಲಿ ಕ್ಯಾಂಟೀನ್ ಗಳಲ್ಲಿ ಲಭ್ಯ. ಹಂತ ಹಂತವಾಗಿ ಬೇರೆ ವಿಭಾಗಗಳಲ್ಲೂ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ  ಈ. ವಿಜಯಾ ಅವರು ತಿಳಿಸಿದ್ದಾರೆ. 

ನನಗೆ ಮಣ್ಣಿನ ಕಪ್ ಪೂರೈಕೆಗೆ ಆರ್ಡರ್ ಕೊಟ್ಟಿದ್ದಾರೆ. ಸದ್ಯ 7 ಸಾವಿರ ಕಪ್‌ಗಳನ್ನು ಪೂರೈಕೆ ಮಾಡಿದ್ದೇನೆ. ಹಿಂದೆಯೂ ಪೂರೈಕೆ ಮಾಡಿದ್ದೆ. ಇನ್ನಷ್ಟು ಆರ್ಡರ್ ಕೊಡುತ್ತೇನೆ ಎಂದು ಹೇಳಿದ್ದಾರೆ ನೋಡಬೇಕು ಎಂದು ಸವದತ್ತಿ ತಾಲೂಕು ಕುಂಬಾರ ಸಂಗಪ್ಪ ಬಸಪ್ಪ ಕುಂಬಾರ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿದೆ. ಸದ್ಯ ಪೇಪರ್ ಕಪ್ ಗಳನ್ನು ನಿಲ್ದಾಣ, ರೈಲುಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಇದರೊಂದಿಗೆ ಮಣ್ಣಿನ ಕಪ್ ಬಳಕೆ ಮಾಡುವುದರಿಂದ ಸ್ಥಳೀಯ ಕುಂಬಾರರಿಗೆ ಉದ್ಯೋಗ ನೀಡಿದಂತೆಯೇ ಆಗುತ್ತದೆ. ಈ ಕಾರಣಕ್ಕಾಗಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.