ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು[ಡಿ.17]: ಎರಡು ತಿಂಗಳ ಹಿಂದೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳ ಬೆನ್ನುಹತ್ತಿ ಮೂರು ರಾಜ್ಯಗಳಲ್ಲಿ ಕರ್ನಾಟಕದ ರೈಲ್ವೆ ಪೊಲೀಸರು ಹುಡುಕಾಟ ನಡೆಸಿದ್ದು, ಇದುವರೆಗೆ ಕಿಡಿಗೇಡಿಗಳ ಖಚಿತ ಸುಳಿವು ದೊರಕಿಲ್ಲ.

ಬಾಂಬ್‌ ಸ್ಫೋಟಿಸಿದವರ ಶೋಧನೆಗೆ ತೆರಳಿದ ರೈಲ್ವೆ ಪೊಲೀಸರಿಗೆ ಮಹಾರಾಷ್ಟ್ರದಲ್ಲಿ ಸ್ಥಳೀಯವಾಗಿ ಬಾಂಬ್‌ ತಯಾರಿಸುವ ಎರಡು ಗುಂಪುಗಳು ಸಿಕ್ಕಿಬಿದ್ದಿದ್ದವು. ಆದರೆ ಆ ಗುಂಪುಗಳಿಗೂ ಹುಬ್ಬಳ್ಳಿ ಕೃತ್ಯಕ್ಕೂ ನಂಟು ಖಚಿತವಾಗದ ಕಾರಣ ರೈಲ್ವೆ ಪೊಲೀಸರು ಅವರನ್ನು ಸ್ಥಳೀಯ ಪೊಲೀಸರ ಸುಪರ್ದಿಗೆ ಒಪ್ಪಿಸಿ ಬರಿಗೈಯಲ್ಲಿ ಮರಳಿದ್ದಾರೆ.

ಈ ಕೃತ್ಯದಲ್ಲಿ ಪತ್ತೆಯಾದ ಸ್ಫೋಟಕ ವಸ್ತುಗಳನ್ನು ಪರಿಶೀಲಿಸಿದ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು, ಸ್ಥಳೀಯ ಕಚ್ಚಾವಸ್ತುಗಳನ್ನು ಬಳಸಿಯೇ ಬಾಂಬ್‌ ತಯಾರಿಸಲಾಗಿದೆ. ಆದರೆ ಇವುಗಳು ಅಷ್ಟುಗಂಭೀರ ಸ್ವರೂಪದ ಅಪಾಯಕಾರಿ ಸ್ಫೋಟಕ ವಸ್ತುಗಳಲ್ಲ. ಕಾಡು ಪ್ರಾಣಿಗಳನ್ನು ಬೆದರಿಸಲು ಬಳಸಬಹುದಾದ ಸ್ಫೋಟಕಗಳು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮಾಹಿತಿ ಮೇರೆಗೆ ರೈಲ್ವೆ ಪೊಲೀಸರು ಸ್ಥಳೀಯ ಬಾಂಬ್‌ ತಯಾರಿಕಾ ಜಾಲದ ಶೋಧನೆಗಿಳಿದಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹುಬ್ಬಳ್ಳಿ ಮಾದರಿಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಹ ಘಟನೆ ನಡೆದಿತ್ತು. ಹಾಗಾಗಿ ನಮ್ಮನ್ನು ಅಲ್ಲಿನ ಅಧಿಕಾರಿಗಳು ಸಂಪರ್ಕಿಸಿ ಪ್ರಕರಣದ ಕುರಿತು ಚರ್ಚಿಸಿದ್ದಾರೆ. ಇನ್ನು ಮಹಾರಾಷ್ಟ್ರದ ಪೊಲೀಸರಿಗೂ ಅವರ ಪ್ರಕರಣದಲ್ಲೂ ಆರೋಪಿಗಳ ಕುರಿತು ಖಚಿತ ಮಾಹಿತಿ ಇಲ್ಲ. ಹೀಗಾಗಿ ಎರಡು ರಾಜ್ಯಗಳ ಪೊಲೀಸರು ಪರಸ್ಪರ ಸಹಕಾರದಲ್ಲಿ ತನಿಖೆ ನಡೆಸಿದ್ದೇವೆ ಎಂದು ರಾಜ್ಯ ರೈಲ್ವೆ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬೋರಲಿಂಗಯ್ಯ ತಿಳಿಸಿದರು.

ರೈಲು ಆಂಧ್ರಪ್ರದೇಶದ ವಿಜಯವಾಡದಿಂದ ಹೊರಟಿತ್ತು. ಈ ಹಿನ್ನೆಲೆಯಲ್ಲಿ ಒಂದು ತಂಡ ವಿಜಯವಾಡಕ್ಕೂ ಸಹ ತೆರಳಿ ಮಾಹಿತಿ ಕಲೆಹಾಕಿದೆ. ಅಲ್ಲಿನ ಜಿಲ್ಲಾ ಎಸ್ಪಿ ಜತೆಗೂ ಖುದ್ದು ನಾನೇ ಮಾತುಕತೆ ನಡೆಸಿದ್ದೇನೆ. ಆದರೆ ನಮ್ಮ ಪ್ರಕರಣದ ಸಂಬಂಧ ಆರೋಪಿಗಳ ಸುಳಿವು ಸಿಕ್ಕಿಲ್ಲ ಎಂದು ಬೋರಲಿಂಗಯ್ಯ ಹೇಳಿದರು.

ಅ.20ರಂದು ಹುಬ್ಬಳ್ಳಿಯಲ್ಲಿ ಸ್ಫೋಟ:

ಕಳೆದ ಅಕ್ಟೋಬರ್‌ 20ರಂದು ವಿಜಯವಾಡದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಅಮರಾವತಿ ಎಕ್ಸ್‌ಪ್ರೆಸ್‌ ರೈಲಿನ ಜನರಲ್‌ ಬೋಗಿಯಲ್ಲಿ ಕೆಂಪು ಬಣ್ಣದ ಕಾಗದ ಸುತ್ತಿದ ಪ್ಲಾಸ್ಟಿಕ್‌ ಬಕೆಟ್‌ ಒಂದು ರೈಲ್ವೆ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಬಿದ್ದಿತ್ತು. ಅದನ್ನು ಕಚೇರಿಗೆ ತಂದು ಪರಿಶೀಲಿಸಿದಾಗ ಸ್ಫೋಟಗೊಂಡಿತ್ತು. ಆಗ ಚಹಾ ವ್ಯಾಪಾರಿ ಹುಬ್ಬಳ್ಳಿಯ ಮಂಟೂರು ರಸ್ತೆಯ ನಿವಾಸಿ ಹುಸೇನ್‌ ಸಾಬ್‌ ಅವರ ಅಂಗೈ ಛಿದ್ರವಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಸ್ಫೋಟಕ ತುಂಬಿದ್ದ ಚಿಕ್ಕ ಬಾಕ್ಸ್‌ಗಳಿದ್ದ ಪ್ಲಾಸ್ಟಿಕ್‌ ಬಕೆಟ್‌ ಮೇಲೆ ಕೊಲ್ಹಾಪುರದ ಶಿವಸೇನೆ ಶಾಸಕನ ಹೆಸರು ಹಾಗೂ ‘ನೋ ಬಿಜೆಪಿ, ನೋ ಆರ್‌ಎಸ್‌ಎಸ್‌’ ಎಂದು ಕೂಡಾ ಬರೆಯಲಾಗಿತ್ತು.

ಬುಡಕಟ್ಟು ಸಮುದಾಯದ ಮೇಲೆ ಶಂಕೆ?

ಬೆಳೆ ಹಾನಿ ಮಾಡುವ ಕಾಡು ಹಂದಿಗಳನ್ನು ಓಡಿಸಲು ಕೃಷಿಕರು ಈ ರೀತಿಯ ಸ್ಫೋಟಕ ಬಳಸುವುದುಂಟು ಎಂದು ಹೊರ ರಾಜ್ಯಗಳ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಈ ಮಾದರಿಯ ಸ್ಫೋಟಕ ವಸ್ತುಗಳನ್ನು ಬೆಳಗಾವಿ ಹಾಗೂ ಆಂಧ್ರಪ್ರದೇಶದ ಗಡಿ ಭಾಗದ ಕೆಲವು ಬುಡಕಟ್ಟು ಸಮುದಾಯದವರು ತಯಾರಿಸುತ್ತಾರೆ ಎಂದೂ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚುನಾವಣೆಯಲ್ಲಿ ಭೀತಿ ಹುಟ್ಟಿಸಲು ಬಳಕೆ?

ಈ ಘಟನೆ ನಡೆದ ವೇಳೆ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ನಡೆಯುತ್ತಿತ್ತು. ಹಾಗಾಗಿ ಸ್ಫೋಟಕ ವಸ್ತುಗಳನ್ನು ತುಂಬಿದ್ದ ಬಾಕ್ಸ್‌ ಮೇಲೆ ಕೊಲ್ಹಾಪುರ ಕ್ಷೇತ್ರದ ಶಿವಸೇನೆ ಶಾಸಕರ ಹೆಸರು ಪತ್ತೆಯಾಗಿದ್ದು ಮಹತ್ವದ ಪಡೆದಿತ್ತು. ಆದರೆ ಈ ಕುರಿತು ಪರಿಶೀಲಿಸಿದಾಗ ಚುನಾವಣೆಯಲ್ಲಿ ಶಾಸಕರಿಗೆ ತೊಂದರೆ ಉಂಟುಮಾಡುವ ಸಲುವಾಗಿ ದುಷ್ಕರ್ಮಿಗಳು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವ ಬಗ್ಗೆ ಶಂಕೆ ಇದೆ ಎಂದು ಮೂಲಗಳು ಹೇಳಿವೆ.