ಮಯೂರ ಹೆಗಡೆ 

ಹುಬ್ಬಳ್ಳಿ(ಡಿ.12):ಪ್ರಸಕ್ತ ವರ್ಷದ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಗೆ ಮಹಾನಗರ ಪಾಲಿಕೆ ಹುಬ್ಬಳ್ಳಿ- ಧಾರವಾಡ ವ್ಯಾಪ್ತಿಯಲ್ಲಿ ಕೈಗೊಂಡ ಕ್ರಮಗಳ ಕುರಿತು ಸರ್ವೇಕ್ಷಣ ಪೋರ್ಟಲ್‌ಗೆ ಅಳವಡಿಕೆ ಮಾಡುತ್ತಿದೆ. ಶತಾಯ ಗತಾಯ ಈ ಬಾರಿ ಟಾಪ್ 50ರ ಪಟ್ಟಿಯೊಳಗೆ ಸೇರಬೇಕೆಂಬ ಗುರಿ ಈಡೇರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 

ಡಿ. 1 ರಿಂದ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ ಆರಂಭವಾಗಿದೆ. ಡಿ. 13 ತ್ಯಾಜ್ಯಮುಕ್ತ ನಗರದ ಕುರಿತಾಗಿ ನೀಡುವ 1 ರಿಂದ 7 ಸ್ಟಾರ್‌ಗಾಗಿ ಪೋರ್ಟಲ್‌ಗೆ ದಾಖಲೆ ಸಲ್ಲಿಸುವ ಅವಧಿ ಮುಕ್ತಾಯವಾಗಲಿದೆ. ಡಿ. 24ರೊಳಗಾಗಿ ಸರ್ವೇಕ್ಷಣಕ್ಕಾಗಿ ಸಮಗ್ರ ದಾಖಲೆಗಳನ್ನು ಸಲ್ಲಿಸಬೇಕಿದೆ. ಪಾಲಿಕೆಯ ಪರಿಸರ ಹಾಗೂ ಘನತ್ಯಾಜ್ಯ ವಿಲೇವಾರಿ ವಿಭಾಗದ ಅಧಿಕಾರಿಗಳು ಇದಕ್ಕಾಗಿ ಕಾರ್ಯೋನ್ಮುಖರಾಗಿದ್ದಾರೆ. 

ಹೆಚ್ಚಿನ ಪ್ರಯತ್ನ:

ಈ ಬಾರಿ ಟಾಪ್ 50ರೊಳಗೆ ಸ್ಥಾನ ಪಡೆಯುವ ಸಲುವಾಗಿ ಹೆಚ್ಚಿನ ಪ್ರಯತ್ನ ನಡೆದಿದೆ. ಪಾಲಿಕೆಯು ಈ ವರೆಗೆ ಕೈಗೊಂಡ ಕ್ರಮದ ಕುರಿತಾಗಿ ಪೋರ್ಟಲ್‌ಗೆ ಅಪ್‌ಲೋಡ್ ಮಾಡುತ್ತಿದೆ. ವಲಯ ಹಾಗೂ ವಾರ್ಡ್‌ವಾರು ಮನೆ ಮನೆ ಕಸ ಸಂಗ್ರಹ ಕುರಿತಂತೆ ಜಿಪಿಎಸ್ ಸಮೇತ ಮಾಹಿತಿ, ಬಯೋಮೆಟ್ರಿಕ್ ಹಾಜರಾತಿ, ತ್ಯಾಜ್ಯ ಬೀಳುವ ಕುರಿತಂತೆ ಗುರುತಿಸಲಾಗಿದ್ದ ಬ್ಲಾಕ್‌ಸ್ಪಾಟ್‌ಗಳನ್ನು ನಿವಾರಣೆ ಮಾಡಿರುವುದು, ಕಸ ಚೆಲ್ಲಿದವರಿಗೆ ದಂಡ, ವಿಂಗಡಣೆ ಮಾಡದೆ ತ್ಯಾಜ್ಯ ನೀಡಿದವರಿಗೆ ವಿಧಿಸಿದ ದಂಡದ ಮಾಹಿತಿ, ಕಸ ವಿಲೇವಾರಿಗೆ ಕೈಗೊಂಡ ವೈಜ್ಞಾನಿಕ ಕ್ರಮ, ಹೋಟೆಲ್ ಕೈಗಾರಿಕೆಗಳಿಂದ ಸಂಗ್ರಹಿಸಲಾಗುತ್ತಿರುವ ತ್ಯಾಜ್ಯದ ಕುರಿತಂತೆ ವಾರ್ಡ್‌ವಾರು ದಾಖಲೆಗಳನ್ನು ಸಲ್ಲಿಸಲಾಗುತ್ತಿದೆ ಎಂದು ಪರಿಸರ ಅಭಿಯಂತರರಾದ ನಯನಾ ಕೆ.ಎಸ್. ತಿಳಿಸಿದ್ದಾರೆ. 

ಜನಾಭಿಪ್ರಾಯ ಸಂಗ್ರಹ: 

ದಾಖಲೆಗಳ ಒಪ್ಪಿಸುವಿಕೆ ಬಳಿಕ ಅಂದರೆ ಜ. 4ರ ನಂತರ ಸಮೀಕ್ಷಾ ಅಧಿಕಾರಿಗಳು ನಗರಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ. ಹಿಂದೆ ಯಾರಿಗೂ ಹೇಳದಂತೆ ಸಮೀಕ್ಷೆ ಮಾಡಿ ತೆರಳುತ್ತಿದ್ದ ಇವರು, ಈ ಬಾರಿ ಪರಿಶೀಲನೆ ಬಳಿಕ ಅಧಿಕಾರಿಗಳನ್ನು ಭೇಟಿಯಾಗಿ ಸಲಹೆ ನೀಡಿ ತೆರಳಲಿದ್ದಾರೆ. ಸ್ವಚ್ಛತೆ ಕುರಿತಾಗಿ ಪಾಲಿಕೆ ಕೈಗೊಳ್ಳುತ್ತಿರುವ ಕ್ರಮದ ಬಗ್ಗೆ ಜನಾಭಿಪ್ರಾಯ ಪಡೆಯಲಿದ್ದಾರೆ. ಮಹಾನಗರದಲ್ಲಿ ಸ್ವಚ್ಛತಾ ಆ್ಯಪ್ ಬಳಕೆ ಮಾಡುತ್ತಿರುವವ ಸಂಖ್ಯೆ, ಬಹಿರ್ದೆಸೆ ಮುಕ್ತ ಪ್ರದೇಶ, ಪ್ಲಾಸ್ಟಿಕ್ ನಿಷೇಧ ಜಾರಿ, ಮನೆ ಮನೆ ಕಸ ಸಂಗ್ರಹ, ದಿನನಿತ್ಯದ ನಗರ ಸ್ವಚ್ಛತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯ ಪಡೆದು ಅಂಕ ನೀಡಲಿದ್ದು, ಇದಕ್ಕೆ ಅನುಗುಣವಾಗಿ ಅಂತಿಮ ರ‍್ಯಾಂಕಿಂಗ್ ಸಿಗಲಿದೆ. ಕಳೆದ ವರ್ಷ ಮಹಾನಗರ ಪಾಲಿಕೆ ಹುಬ್ಬಳ್ಳಿ- ಧಾರವಾಡ ಮಹಾನಗರ 235 ನೇ ರ‍್ಯಾಂಕಿಂಗ್ ಪಡೆದಿತ್ತು. ಈ ಬಾರಿ 50 ರ‌್ಯಾಂಕಿಂಗ್‌ನೊಳಗೆ ಬರಲು ಪಾಲಿಕೆಗೆ ಗುರಿ ನೀಡಲಾಗಿದೆ. ಸ್ಮಾರ್ಟ್‌ಸಿಟಿಯಡಿ 10 ಸಾವಿರ ಮನೆಗಳಿಗೆ ಆರ್‌ಎಫ್ ಐಡಿ ಟ್ಯಾಗ್ ಅಳವಡಿಸಿ ಮಾಡಲಾಗುತ್ತಿರುವ ಕಸ ಸಂಗ್ರಹ, ಕಸ ವಿಂಗಡಣೆ ಕಾರ್ಯ, ಪಾಲಿಕೆ ರೂಪಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕಗಳು ಈ ಬಾರಿಯ ಪೂರಕ ಅಂಶಗಳಾಗಿವೆ. ಜನಾಭಿಪ್ರಾಯ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಸಮೀಕ್ಷೆಯಲ್ಲಿ ಪಾಲಿಕೆ ಸಾಧನೆ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ 2016 ರಲ್ಲಿ 54ನೇ ಪಡೆದಿದ್ದ ಪಾಲಿಕೆಯು 2017ರಲ್ಲಿ 145, 2018ರಲ್ಲಿ 199ನೇ ಸ್ಥಾನ, 2019ರಲ್ಲಿ 235 ನೇ ಸ್ಥಾನ ಪಡೆದಿತ್ತು. ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಗಾಗಿ ಎಲ್ಲ ಬಗೆಯ ಸಿದ್ಧತೆಗಳಾಗಿವೆ. ಉತ್ತಮ ರ‍್ಯಾಂಕಿಂಗ್‌ನೊಳಗೆ ಹು-ಧಾ ಮಹಾನಗರ ಪಾಲಿಕೆ ಸೇರ್ಪಡೆಗೆ ಪ್ರಯತ್ನಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ಹೇಳಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಹಾನಗರ ಪಾಲಿಕೆಯಿಂದ ಉತ್ತಮವಾಗಿ ಕಸ ಸಂಗ್ರಹ, ವಿಲೇವಾರಿ ನಡೆಯುತ್ತಿದೆ. ಹೀಗಾಗಿ ಸ್ವಚ್ಛ ನಗರಿ ಎನಿಸಿಕೊಳ್ಳುವಲ್ಲಿ ಇದು ಸಹಕಾರಿಯಾಗಬಹುದು ಎಂದು ನಗರ ನಿವಾಸಿ     ಪವನ ರಾಥೋಡ ಅವರು ಹೇಳಿದ್ದಾರೆ.