ನಾಳೆ ಹುಬ್ಬಳ್ಳಿ-ದೆಹಲಿ ಹೊಸ ರೈಲಿಗೆ ಚಾಲನೆ
- ನಾಳೆ ಹುಬ್ಬಳ್ಳಿ-ದೆಹಲಿ ಹೊಸ ರೈಲಿಗೆ ಚಾಲನೆ
- ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರೈಲಿಗೆ ಹಸಿರು ನಿಶಾನೆ
- ಹುಬ್ಬಳ್ಳಿ ನಿಲ್ದಾಣದ 3ನೇ ಪ್ರವೇಶ ದ್ವಾರ ಲೋಕಾರ್ಪಣೆ
ಹುಬ್ಬಳ್ಳಿ ಅ.(10) : ಹುಬ್ಬಳ್ಳಿ-ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು ಮತ್ತೆ ಪ್ರಾರಂಭವಾಗಲಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅ. 11ರಂದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಿದ್ದು ಇದು ಸಾಪ್ತಾಹಿಕ ರೈಲಾಗಿದೆ. ಇದರೊಂದಿಗೆ ರೈಲ್ವೆ ನಿಲ್ದಾಣದ 3ನೇ ಪ್ರವೇಶ ದ್ವಾರ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ.
ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗ: ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆಯೇ ಯೋಜನೆ?
ಅಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ‘ಸವಾಯಿ ಗಂಧರ್ವರ ಸ್ಮರಣಾರ್ಥ’ ಅಂಚೆಚೀಟಿ ಬಿಡುಗಡೆ ಮಾಡುವರು. ಮಧ್ಯಾಹ್ನ 12.30ಕ್ಕೆ . 20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಧಾರವಾಡ ರೈಲ್ವೆ ನಿಲ್ದಾಣ, ಮಧ್ಯಾಹ್ನ 3ಕ್ಕೆ . 115 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹುಬ್ಬಳ್ಳಿ ರೈಲ್ವೆ ನಿಲ್ದಾಣದ 3ನೇ ಪ್ರವೇಶ ದ್ವಾರ ಲೋಕಾರ್ಪಣೆಗೊಳಿಸಲಿದ್ದಾರೆ. ಆನಂತರ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಹುಬ್ಬಳ್ಳಿ-ನಿಜಾಮುದ್ದೀನ್ ಹೊಸ ರೈಲಿಗೆ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ ತೋರಿಸುವರು.
ಹೊಸ ರೈಲು:
ಈ ಹಿಂದೆ ಇದ್ದ ಹುಬ್ಬಳ್ಳಿ-ನಿಜಾಮುದ್ದೀನ್ ಲಿಂಕ್ ರೈಲನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಇದನ್ನರಿತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತೆ ರೈಲು ಓಡಿಸುವಂತೆ ಒತ್ತಾಯಿಸಿದ್ದರು. ಹೀಗಾಗಿ ಮಂಗಳವಾರ ರೈಲು ಸಂಚಾರ ಆರಂಭವಾಗಲಿದೆ.
ಧಾರವಾಡ ರೈಲ್ವೆ ನಿಲ್ದಾಣ:
. 20 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಧಾರವಾಡ ರೈಲ್ವೆ ನಿಲ್ದಾಣ ಆಧುನಿಕ ವಾಸ್ತುಶಿಲ್ಪ ಸಂಯೋಜನೆ ಒಳಗೊಂಡಿದೆ. 1936ರಲ್ಲಿ ಅಂದಿನ ಮದ್ರಾಸ್ ದಕ್ಷಿಣ ಮರಾಠಾ ರೈಲ್ವೆ ವತಿಯಿಂದ ನಿಲ್ದಾಣ ನಿರ್ಮಿಸಲಾಗಿತ್ತು. 2018ರಲ್ಲಿ ಈ ರೈಲ್ವೆ ನಿಲ್ದಾಣವನ್ನು . 19.05 ಕೋಟಿ ವೆಚ್ಚದಲ್ಲಿ ನವೀಕರಿಸಲು ಚಾಲನೆ ನೀಡಲಾಗಿತ್ತು. ಈ ನಿಲ್ದಾಣಕ್ಕೆ ರವೀಂದ್ರನಾಥ ಟ್ಯಾಗೂರ್ ಭೇಟಿ ನೀಡಿದ ಸ್ಮರಣಾರ್ಥ ಪ್ಲಾಟ್‌ಫಾರಂ 1ರಲ್ಲಿ ‘ಟ್ಯಾಗೂರ್ ವಾಟಿಕಾ’ ಎಂದು ನಾಮಕರಣ ಮಾಡಿ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ.
ಮೂರನೇ ಪ್ರವೇಶ ದ್ವಾರ:
ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ 3ನೇ ಪ್ರವೇಶ ದ್ವಾರ ನಿರ್ಮಾಣ ಪೂರ್ಣಗೊಂಡಿದೆ. ಮಂಟೂರು ರಸ್ತೆಯಲ್ಲಿ ನಿರ್ಮಿಸಿರುವ ಈ ದ್ವಾರದಿಂದ ರೈಲ್ವೆ ನಿಲ್ದಾಣವನ್ನು ಮೂರು ದಿಕ್ಕಿನಿಂದಲೂ ಪ್ರಯಾಣಿಕರು ಪ್ರವೇಶಿಸಲು ಹಾಗೂ ನಿರ್ಗಮಿಸಲು ಅವಕಾಶ ಕಲ್ಪಿಸಿದಂತೆ ಆಗಿದೆ. ಬೆಂಗಳೂರು ಹಾಗೂ ಯಶವಂತಪುರ ನಿಲ್ದಾಣ ಹೊರತುಪಡಿಸಿದರೆ 3ನೇ ಪ್ರವೇಶದ್ವಾರ ಹೊಂದಿರುವುದು ಹುಬ್ಬಳ್ಳಿಯಲ್ಲಿ ಮಾತ್ರ. ಈ ನಿಲ್ದಾಣದಲ್ಲಿ ಈ ಮೊದಲು 5 ಪ್ಲಾಟ್ ಫಾರಂಗಳಿದ್ದವು. ಇದೀಗ ಅವುಗಳ ಸಂಖ್ಯೆ 8ಕ್ಕೇರಿದೆ. 1505 ಮೀಟರ್ ಉದ್ದದ ಪ್ಲಾಟ್ ಫಾರ್‌ಂನಲ್ಲಿ ರೈಲು ಹತ್ತಲು ಪ್ರಯಾಣಿಕರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ 3ನೇ ಪ್ರವೇಶದ್ವಾರ ನಿರ್ಮಿಸಲಾಗಿದೆ. ನೂತನ ಪ್ರವೇಶ ದ್ವಾರವು 6,7 ಹಾಗೂ 8ನೇ ಪ್ಲಾಟ್‌ಫಾರಂಗೆ ಸಂಪರ್ಕ ಕಲ್ಪಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಒಂದು ನಿಲ್ದಾಣ ಒಂದು ಉತ್ಪನ್ನ: 71 ರೈಲು ನಿಲ್ದಾಣಗಳಿಗೆ ವಿಸ್ತರಣೆ
ಅಂದು ನಡೆಯುವ ಕಾರ್ಯಕ್ರಮದಲ್ಲಿ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವರಾದ ಹಾಲಪ್ಪ ಆಚಾರ್, ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಜನಪ್ರತಿನಿಧಿಗಳೆಲ್ಲರೂ ಭಾಗವಹಿಸಲಿದ್ದಾರೆ.