ಶಿವಕುಮಾರ ಕುಷ್ಟಗಿ

ಗದಗ(ಡಿ.06): ಈರುಳ್ಳಿ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗುತ್ತಿದ್ದು ಇದರ ಪರಿಣಾಮ ನೇರವಾಗಿ ಹೋಟೆಲ್‌ ಉದ್ಯಮದ ಮೇಲೆ ಬಿದ್ದಿದೆ. ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಈರುಳ್ಳಿ ಹೆಚ್ಚು ಬಳಕೆ ಮಾಡಿ ತಯಾರಿಸುತ್ತಿದ್ದ ಆಹಾರ ಪದಾರ್ಥಗಳನ್ನು ಸಣ್ಣ ಮತ್ತು ಮಧ್ಯಮ ಹೋಟೆಲ್‌ಗಳಲ್ಲಿ ತಯಾರಿಸುವುದನ್ನೇ ನಿಲ್ಲಿಸಿದ್ದಾರೆ.

ಹೋಟೆಲ್‌ ಉದ್ಯಮಕ್ಕೆ ಪ್ರಮುಖವಾಗಿ ಬೇಕಾಗಿರುವುದೇ ಈರುಳ್ಳಿ. ಆದರೆ ದಿನ ಕಳೆದಂತೆ ಈರುಳ್ಳಿ ಬೆಲೆ ವಿಪರೀತ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಈರುಳ್ಳಿಯ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿ, ಹಳೆಯ ರೇಟ್‌ಗೆ ಮಾರಾಟ ಮಾಡಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಆ ಎಲ್ಲಾ ಆಹಾರ ಪದಾರ್ಥಗಳು ಹೋಟೆಲ್‌ನಿಂದಲೇ ಮಾಯವಾಗಿವೆ.

ಏನೆಲ್ಲಾ ಸಿಗುವುದಿಲ್ಲ

ಹೆಚ್ಚು ಈರುಳ್ಳಿ ಬಳಕೆ ಮಾಡಿ ಭಜ್ಜಿ, ಕಾಂದಾ ಭಜ್ಜಿ, ಉತ್ತಪ್ಪ ಈ ಎಲ್ಲಾ ಖಾದ್ಯಗಳನ್ನು ತಯಾರಿಸುತ್ತಿದ್ದು ಉಡುಪಿ ಶೈಲಿಯ ಹೋಟೆಲ್‌ಗಳಲ್ಲಿ ಸದ್ಯ ಇವೆಲ್ಲಾ ಸಿಗುತ್ತಿಲ್ಲ. ಇನ್ನು ದಕ್ಷಿಣ ಭಾರತ ಶೈಲಿಯಲ್ಲಿನ ಹೋಟೆಲ್‌ಗಳಲ್ಲಿ ಟೊಮೆಟೊ ಅಮ್ಲೆಟ್‌ (ಮೇಲೆ ಈರುಳ್ಳಿ ಕೊಡುತ್ತಾರೆ), ಈರುಳ್ಳಿ ಕಟ್ಲೆಟ್‌, ಈರುಳ್ಳಿ ಬೋಂಡಾ, ಪಾವ್ ಭಾಜಿಯೊಂದಿಗೆ ಈರುಳ್ಳಿಯನ್ನು ನೀಡಲೇಬೇಕಾದ ಹಿನ್ನೆಲೆಯಲ್ಲಿ ಈ ಆಹಾರ ಪದಾರ್ಥಿಗಳನ್ನೇ ತಯಾರಿಸುವುದನ್ನು ಹೋಟೆಲ್‌ ಮಾಲೀಕರು ನಿಲ್ಲಿಸಿದ್ದಾರೆ.

ಜವಾರಿ ಚಟ್ನಿ ಮಾಯ:

ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲಾ, ತಾಲೂಕು ಹಾಗೂ ಗ್ರಾಮಗಳಲ್ಲಿ ಪುರಿ ಹಾಗೂ ಈರುಳ್ಳಿ ಚಟ್ನಿ (ಸಾಕಷ್ಟು ಈರುಳ್ಳಿ, ಕಡಲೆ ಹಿಟ್ಟಿನಿಂದ ಸಿದ್ಧಪಡಿಸುವ ಚಟ್ನಿ) ತಯಾರಿಸುವುದು ಸಾಮಾನ್ಯ. ಯಾವುದೇ ಸಣ್ಣ ಸಣ್ಣ ಗ್ರಾಮಕ್ಕೆ ಬೆಳಗ್ಗೆ ತೆರಳಿದರೂ ಅಲ್ಲಿ ಪುರಿ ಚಟ್ನಿ ಸಿಗುತ್ತದೆ. ಆದರೆ ಈರುಳ್ಳಿ ಬೆಲೆಯಲ್ಲಿ ಆಗಿರುವ ಭಾರಿ ಹೆಚ್ಚಳ, ಪುರಿ ಜವಾರಿ ಚಟ್ನಿ ಖಾದ್ಯಕ್ಕೆ ಬ್ರೇಕ್‌ ಬೀಳುವಂತೆ ಮಾಡಿದ್ದು, ಗ್ರಾಮೀಣ ಜನರ ಈ ಪ್ರೀತಿಯ ಖಾದ್ಯವೂ ಸ್ವರೂಪ ಬದಲಿಸಿಕೊಂಡಿದ್ದು, ಈರುಳ್ಳಿ ಚಟ್ನಿ ಬದಲಾಗಿ ಕ್ಯಾಬೇಜ್‌ ಬಳಸಿ ಚಟ್ನಿ ತಯಾರಿಸುತ್ತಿದ್ದಾರೆ.

ಸಾವಜಿ ಹೋಟೆಲ್‌ಗಳಲ್ಲಿ ಈರುಳ್ಳಿ ಇಲ್ಲ

ಮಾಂಸಾಹಾರ ಊಟದ ಸಾಲಿನಲ್ಲಿ ಸಾವಜಿ ಹೊಟೇಲ್‌ಗಳು ಮುಂಚೂಣಿಯಲ್ಲಿವೆ. ಇಲ್ಲಿ ಊಟದೊಂದಿಗೆ ಈರುಳ್ಳಿ ನೀಡುವುದನ್ನು ನಿಲ್ಲಿಸಿದ್ದು, ಬದಲಾಗಿ ಸೌತೆಕಾಯಿ ನೀಡುತ್ತಿದ್ದಾರೆ. ಇದರಿಂದಾಗಿ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದೆ. ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವ ಈ ಸಂದರ್ಭದಲ್ಲಿ ಈಗಿರುವ ದರದಲ್ಲಿ ನೀಡುವುದು ಅಸಾಧ್ಯದ ಮಾತಾಗಿದೆ. ಹಾಗಾಗಿ ಹೋಟೆಲ್‌ಗಳನ್ನೇ ಕೆಲ ದಿನಗಳ ಕಾಲ ಮುಚ್ಚುವಂತಾ ಸ್ಥಿತಿ ಬಂದಿದೆ.

ಗಿರ್‌ಮಿಟ್‌ಗೂ ಬರ

ಉತ್ತರ ಕರ್ನಾಟಕ ಶೈಲಿಯ ಸಂಜೆಯ ವೇಳೆಯ ಮತ್ತೊಂದು ಪ್ರಸಿದ್ಧ ಕುರುಕಲು ತಿಂಡಿ ಗಿರ್‌ಮಿಟ್‌ (ಚುರುಮರಿಯಿಂದ ತಯಾರಿಸುವ) ರುಚಿಯನ್ನು ಸವಿಯಬೇಕಾದಲ್ಲಿ ಪಕ್ಕದಲ್ಲಿ ಈರುಳ್ಳಿ ಬೇಕು. ಆದರೆ ಬೆಲೆ ಏರಿಕೆಯ ಬಿಸಿಯಿಂದಾಗಿ ಗಿರಮಿಟ್‌ ಅಂಗಡಿಗಳಲ್ಲೂ ಈರುಳ್ಳಿ ಕೊಡಲು ಆಗುತ್ತಿಲ್ಲ. ಇದು ಕೂಡಾ ಸಂಜೆಯ ಕುರುಕಲು ತಿಂಡಿಯ ವ್ಯಾಪಾರ ವಹಿವಾಟಿನ ಮೇಲೆ ಸಾಕಷ್ಟುಪರಿಣಾಮ ಬೀರಿದೆ.

ಪ್ರತಿಯೊಂದು ಹೆದ್ದಾರಿ ಪಕ್ಕದ ಡಾಬಾಗಳಲ್ಲಿ ಎಗ್‌ರೈಸ್‌ ಅತ್ಯಂತ ಪ್ರಸಿದ್ಧ. ಆದರೆ ಈರುಳ್ಳಿ ಬೆಲೆ ಏರಿಕೆಯಿಂದಾಗಿ ಎಗ್‌ರೈಸ್‌ ಪ್ರಿಯರು ಈರುಳ್ಳಿ ಇಲ್ಲದೆ ಎಗ್‌ರೈಸ್‌ ತಿನ್ನುವಂತಾಗಿದೆ. ಇನ್ನು ಸಂಜೆಯಾಗುತ್ತಿದ್ದಂತೆ ಅಲ್ಲಲ್ಲಿ ತೆರೆದುಕೊಳ್ಳುವ ಪಾನಿಪುರಿ, ಶೇವ್‌ಪುರಿ, ಭೇಳ್‌ಪುರಿ ಅಂಗಡಿಗಳಲ್ಲಿಯೂ ಈರುಳ್ಳಿ ಮಾಯ! ಇನ್ನು ರಸ್ತೆ ಬದಿಯ ಅಮ್ಲೆಟ್‌ ತಯಾರಕರು ಕೂಡಾ ಈರುಳ್ಳಿ ಹಾಕದೇ ಅಮ್ಲೇಟ್‌ ತಯಾರಿಸಿ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಮ್ಮದು ನಾನ್‌ವೆಜ್‌ ಹೋಟೆಲ್‌. ಈರುಳ್ಳಿ ದರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಊಟದೊಂದಿಗೆ ಈರುಳ್ಳಿ ಕೊಡಲು ಆಗುತ್ತಿಲ್ಲ. ಅದರಲ್ಲೂ ತಡರಾತ್ರಿ ಈರುಳ್ಳಿ ಕೊಡದೇ ಇರುವ ವಿಷಯದಲ್ಲಿಯೇ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ಗದಗ ಸಾವಜಿ ಹೋಟೆಲ್‌ ಮಾಲೀಕ ರವಿ ಹಬೀಬ ಅವರು ಹೇಳಿದ್ದಾರೆ. 

ನಮ್ಮ ಹೋಟೆಲ್‌ನ ವಿಶೇಷತೆ ಪುರಿ ಹಾಗೂ ಈರುಳ್ಳಿ ಚಟ್ನಿ. ಆದರೆ ಉಳ್ಳಾಗಡ್ಡಿ ದರದಲ್ಲಿ ಅತೀ ಹೆಚ್ಚಳವಾಗಿರುವುದರಿಂದಾಗಿ ನಾವು ಪುರಿಯೊಂದಿಗೆ ಬೇರೆ ರೀತಿಯ ಚಟ್ನಿ ಮಾಡುತ್ತಿದ್ದೇವೆ. ಗ್ರಾಹಕರು ಮಾತ್ರ ಈರುಳ್ಳಿ ಚಟ್ನಿ ಇದ್ದರೆ ಮಾತ್ರ ಹೆಚ್ಚು ಸಂಖ್ಯೆಯಲ್ಲಿ ಬರುತ್ತಾರೆ. ಆದರೆ 130 ರುಪಾಯಿಗೆ ಕೆಜಿ ಖರೀದಿಸಿ ಅದರಿಂದ ಚಟ್ನಿ ತಯಾರಿಸುವುದು ಅಸಾಧ್ಯದ ಮಾತಾಗಿದೆ ಎಂದು ಗದಗ ನಗರದ ಸಣ್ಣ ಹೋಟೆಲ್‌ ಮಾಲೀಕ ನಾಗಪ್ಪ ಬೆಟಗೇರಿ ಅವರು ಹೇಳಿದ್ದಾರೆ.