ಬೆಂಗಳೂರು(ಜು.18): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಇರುವ ಆಕಾಶ್‌ ಮೆಡಿಕಲ್‌ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಯೋಗಾಸನದ ವಿವಿಧ ಭಂಗಿಗಳು ಹಾಗು ಸೂರ್ಯ ನಮಸ್ಕಾರ ಮಾಡುವುದನ್ನು ಹೇಳಿಕೊಡಲಾಗುತ್ತಿದೆ.

ಕೊರೋನಾ ಸೋಂಕಿತರಿಗೆ ಯೋಗ ಕಲಿಕೆಯೊಂದಿಗೆ ಬೇಗ ಚೇತರಿಕೆಯಾಗಲು ಅವಕಾಶ ಸಿಕ್ಕಂತಾಗಿದೆ. ಒಂದು ವಾರದಲ್ಲಿ 500ಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿದ್ದಾರೆ ಎನ್ನಲಾಗಿದೆ.

ವರದಿಗಾಗಿ ಪರದಾಟ

ಕೊರೋನಾ ಪರೀಕ್ಷೆ ಮಾಡಿಸಿ ಏಳು ದಿನ ಕಳೆದರೂ ವರದಿ ನೀಡದೆ ಸತಾಯಿಸುತ್ತಿರುವ ಪ್ರಕರಣ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ನಡೆದಿದೆ. ರಾಕೇಶ್‌ ಎಂಬುವವರು ಏಳು ದಿನಗಳ ಹಿಂದೆ ಐದು ಸಾವಿರ ಹಣ ಪಾವತಿಸಿ ಸುಗುಣ ಆಸ್ಪತ್ರೆಯಲ್ಲಿ ಕೋವಿಡ್‌ 19 ಪರೀಕ್ಷೆ ಮಾಡಿಸಿದ್ದರು. ಆದರೆ, ಒಂದು ವಾರ ಕಳೆದರೂ ವರದಿ ನೀಡಿಲ್ಲ. ಪರೀಕ್ಷಾ ವರದಿ ಕೇಳಿದರೆ ಆಸ್ಪತ್ರೆ ಸಿಬ್ಬಂದಿ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಅಂತ್ಯ ಕ್ರಿಯೆಗೆ ವಿರೋಧ

ಬಸವೇಶ್ವರನಗರದ ಕ್ರಿಶ್ಚಿಯನ್‌ ಸಮುದಾಯದ 86 ವರ್ಷದ ವೃದ್ಧ ಸೋಂಕಿಗೆ ಬಲಿಯಾಗಿದ್ದು, ಅಂತ್ಯ ಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ಮೃತರಿಗೆ ಸೊಂಕು ದೃಢಪಟ್ಟಿದೆ. ಬಳಿಕ ಖಾಸಗಿ ಆಸ್ಪತ್ರೆ ನಿನ್ನೆ ಬೆಳಗ್ಗೆ ಕುಟುಂಬಸ್ಥರಿಗೆ ದೇಹ ಹಸ್ತಾಂತರಿಸಿದೆ.

ರಾಜಕೀಯ ನಾಯಕರು, ಗಣ್ಯರು ತಂಗುವ ಕುಮಾರಕೃಪಾ ಸಿಬ್ಬಂದಿಗೆ ಸೋಂಕು

ಮೃತನ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ಎಂ.ಎಸ್‌.ಪಾಳ್ಯಕ್ಕೆ ಹೋಗಿದ್ದಾರೆ. ಆದರೆ, ಅಲ್ಲಿಯ ಸ್ಥಳೀಯರು ಅಂತ್ಯಸಂಸ್ಕಾರ ನಡೆಸಲು ವಿರೋಧಿಸಿದ್ದಾರೆ. ಬಳಿಕ ಕುಟುಂಬಸ್ಥರು ಸ್ಥಳೀಯರ ಸಹಾಯದಿಂದಲೇ ಸಂಜೆಯವರೆಗೆ ಜೆ.ಸಿ.ರಸ್ತೆಯ ಮುಸ್ಲಿಂ ಖಬರ್‌ಸ್ತಾನದಲ್ಲಿ ಮೃತದೇಹವಿಟ್ಟು ನಂತರ ಹೊಸೂರು ರಸ್ತೆಯ ಕ್ರಿಶ್ಚಿಯನ್‌ ಸ್ಮಶಾನದಲ್ಲಿ ವಿಧಿವಿಧಾನ ಪೂರೈಸಿದ್ದಾರೆ.

ವಿವಿಧ ಸೌಲಭ್ಯ ಒತ್ತಾಯ

ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಮಾಸ್ಕ್‌, ಪಿಪಿಇ ಕಿಟ್‌ ಹಾಗೂ ರಜೆ ಸೌಲಭ್ಯ ನೀಡದೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಹೌಸ್‌ ಕೀಪಿಂಗ್‌ ಸಿಬ್ಬಂದಿ ಶುಕ್ರವಾರ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈಗಾಗಲೇ ಹೌಸ್‌ ಕೀಪಿಂಗ್‌ ಕೆಲಸ ಮಾಡುವ ಮೂವರಿಗೆ ಸೋಂಕು ದೃಢಪಟ್ಟಿದೆ. ಇತರೆ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡದೇ ನಿರಂತರ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಆಸ್ಪತ್ರೆಯಲ್ಲಿ ಕಸದ ರಾಶಿ

ನಗರದ ಹೊರವಲಯದಲ್ಲಿರುವ ಆನೇಕಲ್‌ ತಾಲೂಕು ವ್ಯಾಪ್ತಿಗೆ ಒಳಪಡುವ ಆಕ್ಸ್‌ಫರ್ಡ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಈ ಆಸ್ಪತ್ರೆಯಲ್ಲಿ ಶುಚಿತ್ವವಿಲ್ಲ. ರೋಗಿಗಳು ಇರುವ ಪಕ್ಕದಲ್ಲೇ ಕಸದ ರಾಶಿ ಹಾಕಲಾಗುತ್ತದೆ. ಉಪಹಾರ, ಊಟ ಮಾಡಿದ ಪ್ಲೇಟ್‌ಗಳನ್ನು ಸಹ ಸರಿಯಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ ಎಂದು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳೇ ಆರೋಪಿಸಿದ್ದಾರೆ.