ಬೆಂಗಳೂರು(ಜು.13): ಸರ್ಕಾರ ಎಷ್ಟೇ ಎಚ್ಚರಿಕೆ ನೀಡುತ್ತಿದ್ದರೂ ಆಸ್ಪತ್ರೆಗಳ ಎಡವಟ್ಟುಗಳು ಮುಂದುವರೆಯುತ್ತಲೇ ಇದ್ದು, ಮೃತರ ಅಂತ್ಯಸಂಸ್ಕಾರ ನೆರವೇರಿಸದ ಬಳಿಕ ಅವರಿಗೆ ಸೋಂಕಿತ್ತು ಎಂದು ದೃಢಪಡಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ ಶ್ರೀನಗರದ 53 ವರ್ಷದ ಮಹಿಳೆಯನ್ನು ಜು.9ರಂದು ಸಮೀಪದ ಪ್ರಶಾಂತ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕ್ಸಿಜನ್‌ ಇಲ್ಲ ಎಂದು ತಿಳಿಸಿದ ಸಿಬ್ಬಂದಿ ಬೇರೆ ಆಸ್ಪತ್ರೆಗೆ ಸೇರಿಸಲು ಹೇಳಿದ್ದು, ಅಲ್ಲಿಂದ ಅಪೋಲೊ ಆಸ್ಪತ್ರೆಗೆ ಹೋದರೆ ಹಾಸಿಗೆ ಇಲ್ಲ ಎಂದಿದ್ದಾರೆ. ಬಳಿಕ ಮಹಿಳೆಯನ್ನು ಜಯನಗರದ ಜನರಲ್‌ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಸಾವನ್ನಪ್ಪಿದ್ದರು.

ಹಾಸಿಗೆ ಇಲ್ಲದೆ ವಿಕ್ಟೋರಿಯಾ ಮುಂದೆ ಜೀವ ಬಿಟ್ಟವೃದ್ಧೆ, ಸತ್ತ ನಂತ್ರ ಕೊರೋನಾ ಟೆಸ್ಟ್ ಮಾಡಿದ ವೈದ್ಯರು

ಮೃತ ಮಹಿಳೆಯ ಸ್ವಾಬ್‌ ಪಡೆದ ಆಸ್ಪತ್ರೆಯ ಸಿಬ್ಬಂದಿ, ಹಿಮೋಗ್ಲೋಬಿನ್‌ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಶವವನ್ನು ಹಸ್ತಾಂತರಿಸಿದ್ದರು. ಕೊರೋನಾ ಇಲ್ಲ ಎಂದು ಮೃತರ ಸಂಬಂಧಿಕರು ನಗರದ ಜಿಂಕೆ ಪಾರ್ಕ್ನಲ್ಲಿರುವ ರುದ್ರಭೂಮಿಯಲ್ಲಿ ಅಂದು ಸಂಜೆ ಅಂತ್ಯಸಂಸ್ಕಾರ ಮಾಡಿದ್ದರು. ಆದರೆ, ಜು.10ರಂದು ಆಸ್ಪತ್ರೆಯಿಂದ ಕರೆ ಮಾಡಿ ಮೃತ ಮಹಿಳೆಗೆ ಕೊರೋನಾ ಪಾಸಿಟಿವ್‌ ಎಂದು ಹೇಳಿದ್ದಾರೆ. ಇದರಿಂದ ಕುಟುಂಬಸ್ಥರು, ನೆರೆಹೊರೆಯವರಿಗೆ ಆತಂಕ ಶುರುವಾಗಿದೆ.

5 ದಿನದ ಬಳಿಕ ಪಾಸಿಟಿವ್‌!

ಇದೇ ರೀತಿ ಘಟನೆ ಆನೇಕಲ್‌ ಪಟ್ಟಣದಲ್ಲೂ ನಡೆದಿದ್ದು, ಅಂತ್ಯಸಂಸ್ಕಾರ ನೆರವೇರಿಸಿದ 6 ದಿನದ ಬಳಿಕ ಮೃತನಿಗೆ ಸೋಂಕಿತ್ತು ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ಇಲ್ಲಿನ ಸಿಪಾಯಿ ಗಲ್ಲಿಯ 60 ವರ್ಷದ ವೃದ್ಧರೊಬ್ಬರು ಚಿಕಿತ್ಸೆ ಲಭಿಸದೇ ಮೃತಪಟ್ಟಿದ್ದರು. ಕೊನೆಗೆ ಇವರ ಸ್ವಾಬ್‌ ಪಡೆದ ಆರೋಗ್ಯ ಸಿಬ್ಬಂದಿ ಅಂತ್ಯಕ್ರಿಯೆ ನೆರವೇರಿಸಲು ಅನುಮತಿ ನೀಡಿದ್ದರು. ಆದರೆ, ಅಂತ್ಯಕ್ರಿಯೆಯಾದ 6 ದಿನದ ಬಳಿಕ ಅವರಿಗೆ ಕೊರೋನಾ ಇರುವುದನ್ನು ದೃಢಪಡಿಸಿದ್ದು, ಮೃತರ ಕುಟುಂಬದ 12 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.