ಬೆಂಗಳೂರು(ಫೆ.20): ನಗರದ ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಹಾಪ್‌ಕಾಮ್ಸ್‌ನಿಂದ ನೇರವಾಗಿ ಪ್ರತಿನಿತ್ಯ ಹಣ್ಣು, ತರಕಾರಿ ಸರಬರಾಜು ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತೋಟಗಾರಿಕಾ ಸಚಿವ ನಾರಾಯಣಗೌಡ ಹೇಳಿದ್ದಾರೆ.

ಲಾಲ್‌ಬಾಗ್‌ ಬಳಿಯ ಹಾಪ್‌ಕಾಮ್ಸ್‌ನಲ್ಲಿ ಮಾ.31ರ ವರೆಗೆ ನಡೆಯಲಿರುವ ‘ದ್ರಾಕ್ಷಿ ಹಾಗೂ ಕಲ್ಲಂಗಡಿ’ ಹಣ್ಣುಗಳ ಮಾರಾಟ ಮೇಳಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಣ್ಣು, ತರಕಾರಿ ಬೆಳೆಯುವ ರೈತರಿಗೆ ಉತ್ತಮ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ ನಗರ ಹೋಟೆಲ್‌ ಮಾಲಿಕರೊಂದಿಗೆ ಸಭೆ ಮಾಡಿ, ಹಾಪ್‌ಕಾಮ್ಸ್‌ ಮೂಲಕ ನೇರವಾಗಿ ತಾಜಾ ಹಣ್ಣು ತರಕಾರಿ ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು. ಇದರಿಂದ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಈಗಾಗಲೇ ಕೆಲವು ಕಡೆ ಹಾಪ್‌ಕಾಮ್ಸ್‌ನಿಂದ ನೇರವಾಗಿ ಹಣ್ಣು ತರಕಾರಿ ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಈ ಹಿಂದೆ ರಾಜ್ಯಸರ್ಕಾರದ ವತಿಯಿಂದ ಹಾಪ್‌ಕಾಮ್ಸ್‌ಗೆ ಚಿಕ್ಕಬಳ್ಳಾಪುರದ ಬಳಿ ಸುಮಾರು 10 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಅದರ ನೋಂದಣಿ ಶುಲ್ಕ 49 ಲಕ್ಷ ಮನ್ನಾ ಮಾಡುವಂತೆ ತೋಟಗಾರಿಕಾ ಸಚಿವರಲ್ಲಿ ಮನವಿ ಮಾಡಿದರು.

ಈ ವೇಳೆ ಶಾಸಕ ಉದಯ್‌ ಗರುಡಾಚಾರ್‌, ತೋಟಗಾರಿಕಾ ಇಲಾಖೆ ನಿರ್ದೇಶಕ ವೆಂಕಟೇಶ್‌, ಹಾಪ್‌ಕಾಮ್ಸ್‌ ಅಧ್ಯಕ್ಷ ಎ.ಎಸ್‌.ಚಂದ್ರೇಗೌಡ, ಉಪಾಧ್ಯಕ್ಷ ಬಿ.ಮುನೇಗೌಡ, ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌.ಪ್ರಸಾದ್‌ ಮೊದಲಾದವರು ಉಪಸ್ಥಿತರಿದ್ದರು.

ಬೀಜ ರಹಿತ, ಹಳದಿ ಬಣ್ಣದ ‘ನೈಜೀರಿಯಾ’ ಕಲ್ಲಂಗಡಿ!

ಮೇಳದಲ್ಲಿ ಸುಮಾರು 12ರಿಂದ 15 ದ್ರಾಕ್ಷಿ, ಮೂರ್ನಾಲ್ಕು ತಳಿಯ ಕಲ್ಲಂಗಡಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದ್ದು, ಅದರಲ್ಲಿ ‘ನೈಜೀರಿಯಾ’ ಕಲ್ಲಂಗಡಿ ಎಲ್ಲರ ಗಮನ ಸೆಳೆಯಿತು. ಈ ಕಲ್ಲಂಗಡಿ ಎಲ್ಲ ಕಲ್ಲಂಗಡಿಯಂತೆ ಹೊರ ಭಾಗ ಹಸಿರು ಬಣ್ಣ ಇದ್ದರೂ ಒಳಭಾಗದ ಹಣ್ಣು ಹಳದಿ ಬಣ್ಣವಿದೆ. ಬೀಜ ರಹಿತ ಹಣ್ಣಾಗಿದೆ. ಮಾಚ್‌ರ್‍ 31ರ ವರೆಗೆ ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣು ಖರೀದಿಗೆ ಶೇ.10ರಷ್ಟುರಿಯಾಯಿತಿ ನೀಡಲಾಗಿದೆ. 42ರಿಂದ 192 ರವರೆಗೆ ದ್ರಾಕ್ಷಿ ಬೆಲೆ ಇದ್ದು, ಪ್ರತಿ ಕೆಜಿಗೆ 20 ರಿಂದ 22 ಕಲ್ಲಂಗಡಿ ಬೆಲೆ ಇರಲಿದೆ. ಮೇಳದಲ್ಲಿ 500 ಮೆಟ್ರಿಕ್‌ ಟನ್‌ ದ್ರಾಕ್ಷಿ ಹಾಗೂ 1500 ಮೆಟ್ರಕ್‌ ಟನ್‌ ಕಲ್ಲಂಗಡಿ ಮಾರಾಟ ಮಾಡುವ ಗುರಿ ಹೊಂದಿದೆ.