ಹೊನ್ನಾಳಿ ಕ್ಷೇತ್ರ ಅಭಿವೃದ್ದಿಗೆ ಸಿಎಂ ಉತ್ತಮ ಸ್ಪಂದನೆ

ಕೊರೋನಾ ಸಂಕಷ್ಟದ ಹೊರತಾಗಿಯೂ ಹೊನ್ನಾಳಿ ಕ್ಷೇತ್ರದ ಅಭಿವೃದ್ದಿಗೆ ಮುಖ್ಯಮಂತ್ರಿ ಬಿ. ಎಸ್. ಯಡುಯೂರಪ್ಪ ನೀಡುತ್ತಿರುವ ಅನುದಾನಕ್ಕೆ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Honnali MLA MP Renukacharya Thanks CM BS Yediyurappa for his support for Development

ಹೊನ್ನಾಳಿ(ಆ.06): ಕೊರೋನಾ ವೈರಸ್‌ ಸೋಂಕಿನಿಂದಾಗಿ ಉದ್ಭವಿಸಿರುವ ತೀವ್ರ ಆರ್ಥಿಕ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಇದಕ್ಕಾಗಿ ಜನತೆ ಪರವಾಗಿ ಅವರಿಗೆ ಹೃತ್ಫೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಸುಂಕದಕಟ್ಟೆಯಲ್ಲಿ ಮಂಗಳವಾರ 55 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸಿಸಿ ರಸ್ತೆ ಉದ್ಘಾಟನೆ ನೆರವೇರಿಸಿ, ಕೊರೋನಾ ವೈರಸ್‌ ಸೋಂಕು ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕುಗಳ ಬಹುತೇಕ ಎಲ್ಲ ಗ್ರಾಮಗಳಲ್ಲಿಯೂ ಸಿಸಿ ರಸ್ತೆಗಳು, ಚರಂಡಿ, ಕುಡಿಯುವ ನೀರು ಪೂರೈಕೆ, ರಸ್ತೆ ಡಾಂಬರೀಕರಣ, ಸಮುದಾಯ ಭವನ- ಅಂಗನವಾಡಿ ಕೇಂದ್ರಗಳ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದಾಗಿ ತಿಳಿಸಿದರು.

ತಾಲೂಕಿನ ಸುಂಕದಕಟ್ಟೆಯಲ್ಲಿ 4 ಕೋಟಿ ರುಪಾಯಿ ವೆಚ್ಚದಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಲಾಗಿದೆ. 2 ಕೋಟಿ ರುಪಾಯಿ ವೆಚ್ಚದಲ್ಲಿ ಶ್ರೀ ಮಂಜುನಾಥಸ್ವಾಮಿ- ಶ್ರೀ ನರಸಿಂಹಸ್ವಾಮಿ ದೇವಸ್ಥಾನದ ಸಮುದಾಯ ಭವನ ನಿರ್ಮಿಸಲಾಗಿದೆ. ರಾಜಗೋಪುರ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. 2 ಕೋಟಿ ರುಪಾಯಿ ವೆಚ್ಚದಲ್ಲಿ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಲಾಗಿದೆ. ಗ್ರಾಮದ ಹೊರವಲಯದಲ್ಲಿ 10 ಕೋಟಿ ರುಪಾಯಿ ವೆಚ್ಚದಲ್ಲಿ ಡಿಪ್ಲೊಮಾ, ಐಟಿಐ ಕಾಲೇಜು ಕಟ್ಟಡ ನಿರ್ಮಿಸಲಾಗಿದೆ ಎಂದು ವಿವರಿಸಿದರು. ಕೊರೋನಾ ವೈರಸ್‌ ಸೋಂಕು ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಕೊರೋನಾ ವೈರಸ್‌ ಸೋಂಕು ಹರಡಲು ಪ್ರಾರಂಭವಾದ ಸಮಯದಲ್ಲಿ ನಮ್ಮ ದೇಶದಲ್ಲಿ ಪಿಪಿಇ ಕಿಟ್‌ ತಯಾರಾಗುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಪ್ರಯತ್ನದ ಫಲವಾಗಿ ಇದೀಗ ದೇಶದಲ್ಲೇ ಪಿಪಿಇ ಕಿಟ್‌ಗಳನ್ನು ತಯಾರಿಸಲಾಗುತ್ತದೆ. ಸದೃಢ ಭಾರತ ನಿರ್ಮಾಣಕ್ಕೆ ಮೋದಿ ಅವರ ಕೊಡುಗೆ ಅಪಾರ. ಕುತಂತ್ರಿ ದೇಶ ಪಾಕಿಸ್ತಾನಕ್ಕೆ ಮೋದಿ ತಕ್ಕ ಪಾಠ ಕಲಿಸುತ್ತ ಬಂದಿದ್ದಾರೆ. ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೂ ಸಮರ್ಥವಾಗಿ ಉತ್ತರ ನೀಡಿದ್ದಾರೆ. ಫ್ರಾನ್ಸ್‌ನಿಂದ ರಫೇಲ್‌ ಯುದ್ಧಮಾನಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಪಾಕಿಸ್ತಾನ, ಚೀನಾ ಎರಡೂ ದೇಶಗಳು ಬಾಲ ಮುದುರಿಕೊಳ್ಳುವಂತಾಗಿದೆ. ದೇಶದ ರಕ್ಷಣೆ ವಿಷಯದಲ್ಲಿ ಯಾರೊಂದಿಗೂ ರಾಜಿ ಪ್ರಶ್ನೆಯೇ ಇಲ್ಲ ಎಂಬುದು ಮೋದಿ ಅವರ ನಿಲುವಾಗಿದೆ ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ದೀಪಾ ಜಗದೀಶ್‌, ಸದಸ್ಯೆ ಉಮಾ ರಮೇಶ್‌, ತಾಪಂ ಪ್ರಭಾರ ಅಧ್ಯಕ್ಷ ಕೆ.ಎಲ್‌. ರಂಗನಾಥ್‌, ನ್ಯಾಮತಿ ತಾಪಂ ಉಪಾಧ್ಯಕ್ಷ ಡಿ. ಮರಿಕನ್ನಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್‌, ಗ್ರಾಪಂ ಮಾಜಿ ಅಧ್ಯಕ್ಷ ಡಿ.ಬಸಪ್ಪ, ಬಿಜೆಪಿ ಸುಂಕದಕಟ್ಟೆಗ್ರಾಮ ಘಟಕದ ಅಧ್ಯಕ್ಷ ಎಸ್‌.ಜಿ. ಮಂಜಪ್ಪ, ಮುಖಂಡರಾದ ಎಸ್‌.ಕೆ. ನರಸಿಂಹಮೂರ್ತಿ, ಎಸ್‌.ಕೆ. ಕರಿಯಪ್ಪ, ಎಸ್‌.ಆರ್‌. ಗಣೇಶ್‌ ಮತ್ತಿತರರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios