ಶಿವಮೊಗ್ಗ [ಸೆ.12]:   ನಗರದ ಶ್ರೀ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಸಂಘಟನೆ ಮಹಾಗಣಪತಿ ವಿಸರ್ಜನಾಪೂರ್ವ ಮೆರವಣಿಗೆ ಸೆ. 12ರಂದು ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿವೆ.

ರಾಜಬೀದಿಯ ಉತ್ಸವಕ್ಕೆ ಹಿಂದೂ ಮಹಾಸಭಾ ಮಂಡಳಿ ಈಗಾಗಲೇ ಸಕಲ ಸಿದ್ಧತೆ ನಡೆಸಿದೆ. ಮೆರವಣಿಗೆ ಮಾರ್ಗದುದ್ದಕ್ಕೂ ಕೇಸರಿ ಪತಾಕೆ ರಾರಾಜಿಸುತ್ತಿವೆ. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಕೇಸರಿ ಧ್ವಜ, ತಳಿರು ತೋರಣ ಕಟ್ಟಲಾಗಿದೆ. ವಿಶೇಷವಾಗಿ ಸ್ವಾತಂತ್ರ್ಯ ಹೋರಾಟಗಾರರು, ಸಾಧು-ಸಂತರು, ಹಿಂದೂ ಸಂಘಟನೆ ಮುಖಂಡರ ಭಾವಚಿತ್ರಗಳನ್ನು ಪ್ರಮುಖ ರಸ್ತೆಗಳಿಗೆ ಅಳವಡಿಸಲಾಗಿದೆ.

ರಾಣಾ ಪ್ರತಾಪ್‌, ಸರ್ಧಾರ್‌ ವಲ್ಲಭಬಾಯಿ ಪಟೇಲ್‌, ಸುಭಾಷ್‌ ಚಂದ್ರ ಬೋಸ್‌, ವೀರ ಸಾವರ್ಕರ್‌, ಗುರೂಜಿ ಭಗತ್‌ಸಿಂಗ್‌, ಸ್ವಾಮಿ ವಿವೇಕಾನಂದ, ಡಾ. ಬಿ.ಆರ್‌. ಅಂಬೇಡ್ಕರ್‌, ಪುರಂದರದಾಸರು, ಜಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಅನೇಕ ಮಹನೀಯರ ಕಟೌಟ್‌ಗಳನ್ನು ಹಾಕಲಾಗಿದೆ.

ಗಾಂಧಿ ಬಜಾರ್‌ ಪ್ರವೇಶ ದ್ವಾರದಲ್ಲಿ ಅಂದರೆ ಶಿವಪ್ಪನಾಯಕ ವೃತ್ತದಲ್ಲಿ ಶ್ರೀ ಆಂಜನೇಯ ಸ್ವಾಮಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್‌ ಗಾತ್ರದ ವಿದ್ಯುತ್‌ ದೀಪಾಲಂಕೃತ ಫಲಕ ಅಳವಡಿಸಲಾಗಿದೆ. ಗಾಂಧಿ ಬಜಾರ್‌ ಮುಖ್ಯದ್ವಾರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್‌ಗಾತ್ರದ ಪುತ್ಥಳಿ ಎಲ್ಲರ ಗಮನ ಸೆಳೆಯುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಿವಪ್ಪನಾಯಕ ವೃತ್ತ, ಅಮೀರ್‌ ಅಹಮ್ಮದ್‌ ಸರ್ಕಲ್‌, ಗೋಪಿ ವೃತ್ತ, ಎಂಆರ್‌ಎಸ್‌ ವೃತ್ತ, ರಾಮಣ್ಣ ಶ್ರೇಷ್ಠಿ ಪಾರ್ಕ್ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳನ್ನು ಕೇಸರಿ ಧ್ವಜದಿಂದ ಅಲಂಕರಿಸಲಾಗಿದೆ. ನೆಹರೂ ರಸ್ತೆ, ಗಾಂಧಿ ಬಜಾರ್‌ ಮುಖ್ಯ ರಸ್ತೆ, ಬಿಎಚ್‌ ರಸ್ತೆ, ದುರ್ಗಿಗುಡಿ ಮುಖ್ಯರಸ್ತೆ ಸೇರಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಬಂಟಿಂಗ್ಸ್‌ ಹಾಗೂ ಬ್ಯಾನರ್‌ ರಾರಾಜಿಸುತ್ತಿವೆ.

ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಭಕ್ತರು, ಯುವಕರು, ಸಾರ್ವಜನಿಕರಿಗೆ ಅಲ್ಲಲ್ಲಿ ನೀರಿನ ವ್ಯವಸ್ಥೆ, ಲಘು ಉಪಹಾರ, ಪಾನಕ ನೀಡಲು ವಿವಿಧ ಸಂಘ ಸಂಸ್ಥೆಗಳಿಂದ ವ್ಯವಸ್ಥೆ ಮಾಡಲಾಗಿದೆ.

ಗಣಪತಿಗಾಗಿ ವಿಶೇಷವಾದ ಬೃಹತ್‌ ಗಾತ್ರದ ಹೂವಿನ ಹಾರಗಳನ್ನು ಸಿದ್ಧಪಡಿಸಲಾಗುತ್ತಿದೆ. ಸೆ. 12ರ ಬೆಳಗ್ಗೆ 10ಗಂಟೆ ಸುಮಾರಿಗೆ ಕೋಟೆ ಶ್ರೀ ಭೀಮೇಶ್ವರ ದೇವಾಲಯ ಆವರಣದಲ್ಲಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಕೆ ಬಳಿಕ ವಿಸರ್ಜನಾ ಪೂರ್ವ ಮೆರವಣಿಗೆಗೆ ಚಾಲನೆ ದೊರಕಲಿದೆ.

ಮೆರವಣಿಗೆ ಎಸ್‌.ಪಿ.ಎಂ. ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್‌, ಶಿವಪ್ಪನಾಯಕ ವೃತ್ತ, ಎ.ಎ.ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಜೈಲು ವೃತ್ತ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ, ಮಹಾವೀರ ವೃತ್ತ, ಡಿವಿಎಸ್‌ ವೃತ್ತ ಮಾರ್ಗವಾಗಿ ಭೀಮೇಶ್ವರ ಮಡುವಿನಲ್ಲಿ ಗಣಪತಿಯನ್ನು ವಿಸರ್ಜಿಸಲಾಗುವುದು.

ಈ ಬಾರಿ 75 ವರ್ಷದ ಆಚರಣೆ ಪ್ರಯುಕ್ತ ಮಹಾಮಂಡಳಿ ಅದ್ಧೂರಿಯಾಗಿ ರಾಜಬೀದಿ ಉತ್ಸವ ನಡೆಸಲು ಉದ್ದೇಶಿಸಿದ್ದು, ಹಿಂದೆಂದಿಗಿಂತ ಹೆಚ್ಚು ಅಲಂಕಾರ ಮಾಡಲಾಗಿದೆ. ಮೆರವಣಿಗೆಯ ಮಾರ್ಗದುದ್ದಕ್ಕೂ ಡೊಳ್ಳು, ಕಂಸಾಳೆ, ವೀರಗಾಸೆ, ಗೊಂಬೆ ಕುಣಿತ ಮುಂತಾದ ವಿಶೇಷ ಆಕರ್ಷಣೆಗಳಿರಲಿದ್ದು, ಸಾವಿರಾರು ಜನ ಮೆರವಣಿಗೆಯಲ್ಲಿ ಮಹಾಗಣಪತಿಯೊಂದಿಗೆ ಸಾಗಲಿದ್ದಾರೆ. ಮೆರವಣಿಗೆ ಹಿನ್ನಲೆಯಲ್ಲಿ ಪೊಲೀಸ್‌ ಇಲಾಖೆ ನಗರದ ಎಲ್ಲೆಡೆ ಬಿಗಿ ಬಂದೋಬಸ್‌್ತ ಕಲ್ಪಿಸಿದೆ.