Udupi: ಉತ್ತಮ ಶಿಕ್ಷಕ ಪ್ರಶಸ್ತಿಗೂ ತಟ್ಟಿದ ಹಿಜಾಬ್ ವಿವಾದ, ಅವಾರ್ಡ್ ಘೋಷಿಸಿದ ಬಳಿಕ ತಡೆಹಿಡಿದ ಸರ್ಕಾರ!
ಹಿಜಾಬ್ ವಿವಾದದ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಗೇಟ್‌ನಲ್ಲಿ ತಡೆದಿದ್ದಕ್ಕಾಗಿ ಕುಂದಾಪುರದ ಪ್ರಾಂಶುಪಾಲರೊಬ್ಬರಿಗೆ ನೀಡಲಾಗಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಈ ಕ್ರಮವನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತೀವ್ರವಾಗಿ ಖಂಡಿಸಿದ್ದಾರೆ.
ಉಡುಪಿ (ಸೆ.5): ಶಿಕ್ಷಕರ ದಿನಾಚರಣೆ ನಿಮಿತ್ತ ರಾಜ್ಯ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇಂದು ಪ್ರದಾನ ಮಾಡಿದೆ. ಇದರಲ್ಲಿ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರಾದ ರಾಮಕೃಷ್ಣ ಜಿಬಿ ಅವರಿಗೂ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಆದರೆ, ಹಿಜಾಬ್ ವಿವಾದದ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಗೇಟ್‌ನಲ್ಲಿಯೇ ತಡೆದಿದ್ದು ಇವರೇ ಎನ್ನುವುದು ಗೊತ್ತಾಗುತ್ತಿದ್ದಂತೆ ರಾಜ್ಯ ಸರ್ಕಾರ ಇವರಿಗೆ ಘೋಷಣೆ ಮಾಡಿದ್ದ ಪ್ರಶಸ್ತಿಯನ್ನು ತಡೆಹಿಡಿದಿದೆ. ಉತ್ತಮ ಪ್ರಾಂಶುಪಾಲ ಪ್ರಶಸ್ತಿ ತಡೆಹಿಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, 'ಹಿಜಾಬ್ ವಿವಾದ ಸಂದರ್ಭದಲ್ಲಿ ಗೇಟಿನಲ್ಲಿ ವಿದ್ಯಾರ್ಥಿನಿಯರನ್ನು ರಾಮಕೃಷ್ಣ ಜಿಬಿ ಅವರು ತಡೆದಿದ್ದರು. ಇದು ಸರ್ಕಾರವೇ ನೀಡಿದ್ದ ಆದೇಶವಾಗಿತ್ತು. ಆದರೆ, ಈ ಆರೋಪ ಹಿನ್ನೆಲೆಯಲ್ಲಿ ಅವರಿಗೆ ಪ್ರಶಸ್ತಿ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಯಶ್‌ಪಾಲ್ ಸುವರ್ಣ, ಪ್ರಾಂಶುಪಾಲರ ಸಾಧನೆಗಾಗಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಯಾರ ಮೂಲಕ ಒತ್ತಡ ತಂದು ಪ್ರಶಸ್ತಿ ಪಡೆದಿರಲಿಲ್ಲ. ಮನೆ ಬಾಗಿಲಿಗೆ ಹೋಗಿ ಭಿಕ್ಷೆ ಬೇಡದೆ ಪ್ರಶಸ್ತಿ ಪಡೆದಿದ್ದರು. ಅನುಭವದ ಆಧಾರದಲ್ಲಿ ಆಯ್ಕೆ ಸಮಿತಿ ಆಯ್ಕೆ ಮಾಡಿತ್ತು. ಸರಕಾರ ಅಗೌರವ ಮೊಂಡುತನ ತೋರಿಸಿದೆ. ಇದು ಶಿಕ್ಷಕ ವೃತ್ತಿಗೆ ಮಾಡಿದ ಅವಮಾನ, ಅನ್ಯಾಯ. ಆಯ್ಕೆಯಾದ ನಂತರ ಹಿಂಪಡೆದಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡಲು ಸರಕಾರ ಮುಂದಾಗಿದೆ. ಉಡುಪಿ ಜಿಲ್ಲೆಯ ಜನರ ತಾಳ್ಮೆಯನ್ನು ಸಿದ್ದರಾಮಯ್ಯ ಸರಕಾರ ಪರೀಕ್ಷೆ ಮಾಡುತ್ತಿದೆ. ಜೇನುಗೂಡಿಗೆ ಮತ್ತೊಮ್ಮೆ ಸರ್ಕಾರ ಕೈ ಹಾಕಿದೆ. ರಾಮಕೃಷ್ಣ ಅವರು ಆ ಭಾಗದ ವಿದ್ಯಾರ್ಥಿಗಳ ಮನಸ್ಸು ಗೆದ್ದವರು. ಯಾವುದೇ ರಾಜಕೀಯ ಮಾಡದೆ ಪ್ರಾಮಾಣಿಕ ಕರ್ತವ್ಯ ಮಾಡಿದವರು. ಹಿಜಾಬ್ ಸಂದರ್ಭದಲ್ಲಿ ಅವರ ಕರ್ತವ್ಯ ಮಾಡಿದ್ದಾರಷ್ಟೇ. ಸರ್ಕಾರ ಸೂಚಿಸಿದ ನಿಯಮಾವಳಿ ಪಾಲಿಸಿದ್ದಾರೆ. ವಿದ್ಯಾರ್ಥಿನಿಯರಲ್ಲಿ ತಾರತಮ್ಯ ಮಾಡಬಾರದು ಎಂಬ ಕಾರಣಕ್ಕೆ ಕ್ರಮ ಕೈಗೊಂಡಿದ್ದರು. ಶಾಲೆಯ ಶಿಸ್ತನ್ನು ಕಾಪಾಡಿದ್ದಕ್ಕೆ ಅವಮಾನ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಹಿಜಾಬ್ ರೀತಿ ತಿಲಕ, ಬಿಂದಿಗೂ ನಿಷೇಧ ಹೇರುತ್ತೀರಾ? ಸುಪ್ರೀಂ ಪ್ರಶ್ನೆ
ಈ ಬಗ್ಗೆ ಸರಕಾರ ಉಡುಪಿಯ ಜನತೆ ಹಾಗೂ ಶಿಕ್ಷಕರ ಕ್ಷಮೆ ಕೇಳದಿದ್ದರೆ ಹೋರಾಟ ಮಾಡುತ್ತೇವೆ. ಪ್ರಶಸ್ತಿಯಿಂದ ಯಾರು ಕುಗ್ಗೋದು ಇಲ್ಲ, ಹಿಗ್ಗೋದು ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಮಾದರಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಚೆಲ್ಲಾಟ ಆಡಬಾರದು. ತಾಕತ್ತಿದ್ದರೆ ಅಂಗನವಾಡಿ ಕಾರ್ಯಕರ್ತೆಯರ ಬಾಕಿ ಹಣ ಬಿಡುಗಡೆ ಮಾಡಿ. ಮಳೆಯಿಂದ ನಷ್ಟ ಹೊಂದಿರುವ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡಿ. ಒಂದು ಸಮುದಾಯದ ಜನರ ತುಷ್ಟಿಕರಣ ಬಿಡಿ ಎಂದು ಹೇಳಿದ್ದಾರೆ.
ಕಾಲೇಜಲ್ಲಿ ಹಿಜಾಬ್ ನಿಷೇಧ ತಪ್ಪಲ್ಲ: ಬಾಂಬೆ ಹೈಕೋರ್ಟ್
ಈ ಬಗ್ಗೆ ಮಾತನಾಡಿರುವ ಛಲವಾದಿ ನಾರಾಯಣಸ್ವಾಮಿ ಮಾತನಾಡಿದ್ದು, 'ಸರ್ಕಾರ ಡಬಲ್ ಸ್ಟ್ಯಾಂಡರ್ಡ್ ತಾಳ್ತಿದೆ. SDPI ನವರು ದೂರು ನೀಡಿದ್ರು ಅಂತ ಪ್ರಶಸ್ತಿಯನ್ನು ರದ್ದು ಮಾಡಿದೆ. ಇದು ಸರಿಯಾದ ಕ್ರಮ ಅಲ್ಲ. ನೀವೇ ಉತ್ತಮ ಶಿಕ್ಷಕ ಅಂತ ಆಯ್ಕೆ ಮಾಡಿ. ಹಿಜಾಬ್ ವಿಚಾರದಲ್ಲಿ ಇದ್ರು ಅಂತ ರದ್ದು ಮಾಡೋದು ಸರಿಯಲ್ಲ. ನೀವೇ ಉತ್ತಮ ಅಂತ ಮಾಡಿ, ದೂರು ಬಂದ ತಕ್ಷಣ ಅದಮ ಆಗ್ತಾನಾ.? ಉತ್ತಮ ಶಿಕ್ಷಕ, ಅದಮ ಆಗ್ತಾರಾ ಹಾಗಾದ್ರೆ.? ಎಂದು ಪ್ರಶ್ನೆ ಮಾಡಿದ್ದಾರೆ.