Asianet Suvarna News Asianet Suvarna News

ಸಂಡೂರು: ತಾರಾನಗರ ಜಲಾಶಯಕ್ಕೆ ಹೈಟೆಕ್‌ ಸ್ಪರ್ಶ..!

ಅಣೆಕಟ್ಟಿನ ಮುಂಭಾಗದಲ್ಲಿ ಸೌಂದರ್ಯ ವೃದ್ಧಿಗೆ ಸಿದ್ಧವಾಗುತ್ತಿದೆ ಯೋಜನೆ| ಜಾರುಬಂಡಿ, ಕಾರಂಜಿ, ಸಾರ್ವಜನಿಕರಿಗೆ ವಿಶ್ರಾಂತಿಗಾಗಿ ಬೆಂಚುಗಳು, ಜೋಕಾಲಿಗಳು ಸೇರಿದಂತೆ ಮಕ್ಕಳು ಹಾಗೂ ಹಿರಿಯರಿಗೆ ಉಪಯೋಗವಾಗುವಂಥ ಪರಿಕರಗಳೊಂದಿಗೆ ಆಕರ್ಷಣೀಯ ಸ್ಪರ್ಶ| ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿರುವ ತಾರಾನಗರ ಡ್ಯಾಂ| 

High Tech Touch to Taranagar Dam in Sandur in Ballari grg
Author
Bengaluru, First Published Mar 10, 2021, 1:22 PM IST

ರಾಮು ಅರಕೇರಿ

ಸಂಡೂರು(ಮಾ.10): ಮಾನಸ ಸರೋವರ ಎಂದೆ ಕರೆಯಲಾಗುತ್ತಿರುವ ತಾಲೂಕಿನ ತಾರಾನಗರ ಜಲಾಶಯದ ಮುಂಭಾಗ ಇನ್ನೇನು ಕೆಲವೇ ದಿನಗಳಲ್ಲಿ ಹೈಟೆಕ್‌ ಸ್ಪರ್ಶ ಪಡೆಯಲಿದೆ. ಅಣೆಕಟ್ಟು ಮುಂದೆ ಇರುವ 5 ಎಕರೆ ಬಯಲು ಜಾಗದಲ್ಲಿ ಒಂದು ಸುಂದರ ಉದ್ಯಾನ ನಿರ್ಮಾಣವಾಗಲಿದೆ. ಅದಕ್ಕಾಗಿ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಈಗಾಗಲೇ ಎರಡೂವರೆ ಕೋಟಿ ರುಪಾಯಿ ಅನುದಾನವನ್ನು ಕೂಡ ನಿಗದಿಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ತಾರಾನಗರ ಜಲಾಶಯ ಪ್ರವಾಸಿಗರನ್ನು ಕೈ ಬೀಸಿ ಕರೆಯಲಿದೆ.

ಜಲಾಶಯದ ಮುಂಭಾಗದಲ್ಲಿ 5-6 ಎಕರೆ ಜಾಗದಲ್ಲಿ ಒಂದು ಸುಂದರ ಉದ್ಯಾನ ನಿರ್ಮಿಸುವುದು ಈ ಯೋಜನೆಯ ಮುಖ್ಯಉದ್ದೇಶ. ಇದರೊಂದಿಗೆ ತಾರಾನಗರ ಜಲಾಶಯಕ್ಕೆ ಸ್ವಾಗತ ಕಮಾನು ನಿರ್ಮಿಸಲಾಗುವುದು. ಮುಖ್ಯವಾಗಿ ತುಂಗಭದ್ರಾ ಜಲಾಶಯದ ಮುಂಭಾಗದಲ್ಲಿ ನಿರ್ಮಿಸಿರುವ ನೀರಿನ ಬಣ್ಣಬಣ್ಣದ ಕಾರಂಜಿಯ ಮಾದರಿಯಲ್ಲಿ ಇಲ್ಲಿಯೂ ಕೂಡ ನೀರು ನೃತ್ಯ ಮಾಡಲಿದೆ. ಜಾರುಬಂಡಿ, ಕಾರಂಜಿ, ಸಾರ್ವಜನಿಕರಿಗೆ ವಿಶ್ರಾಂತಿಗಾಗಿ ಬೆಂಚುಗಳು, ಜೋಕಾಲಿಗಳು ಸೇರಿದಂತೆ ಮಕ್ಕಳು ಹಾಗೂ ಹಿರಿಯರಿಗೆ ಉಪಯೋಗವಾಗುವಂಥ ಪರಿಕರಗಳೊಂದಿಗೆ ಆಕರ್ಷಣೀಯ ಸ್ಪರ್ಶ ನೀಡಲಾಗುತ್ತಿದೆ. ಸಂಗ್ರಹಿತ ನೀರು ವೀಕ್ಷಿಸುವುದು ಹಾಗೂ ಅಣೆಕಟ್ಟಿನ ಮೇಲೆ ನಿಂತು ಉದ್ಯಾನ ಹಾಗೂ ಪ್ರಕೃತಿಯನ್ನು ಆಸ್ವಾದಿಸಲು ಮುಖ್ಯ ರಸ್ತೆಯಿಂದ ಕೆಳಗಿಳಿಯಲು ಒಂದು ಹಳೆ ರಸ್ತೆ ಇದ್ದು ಇದನ್ನು ಕೂಡಾ ನವೀಕರಣಗೊಳಿಸಲಾಗುವುದು.

ಇದು ಅಲ್ಲದೆ ಅಣೆಕಟ್ಟು ಸಂಜೆ ವೇಳೆಗೆ ರಂಗಾಗಿಕಾಣಿಸಲು ವಿಶೇಷವಾದ ಲೈಟಿಂಗ್‌ ವ್ಯವಸ್ಥೆ ಮಾಡಲಾಗುವುದು. ಬಳ್ಳಾರಿ ಜಿಲ್ಲೆ ವಿಭಜನೆಯ ಆನಂತರ ಇನ್ನು ಮುಂದೆ ಸಂಡೂರು ಪ್ರವಾಸಿಗರ ನೆಚ್ಚಿನ ತಾಣವಾಗಲಿದೆ. ಈ ಹಿನ್ನೆಲೆಯಲ್ಲಿ ತಾರಾನಗರ ಜಲಾಶಯ ಪ್ರವಾಸಿ ಪ್ರಿಯರಿಗೆ ಮೊದಲ ಆದ್ಯತೆ ಆಗುವುದು ಎಂದರೂ ತಪ್ಪಾಗಲಾರದು.

ಹಂಪಿ ಸ್ಮಾರಕ ವೀಕ್ಷಣೆಗೆ ಮೆಟ್ರೋ ಟ್ರೈನ್‌ ಮಾದರಿ ಮಿನಿ ಬಸ್‌..!

ನೀರಿನ ಸಮರ್ಪಕ ಬಳಕೆ:

ಜಲಾಶಯವು ಒಟ್ಟು 0.81 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ವರ್ಷ ಉತ್ತಮ ಮಳೆಯಾಗಿದ್ದು ಈಗ 0.77 ಟಿಎಂಸಿ ನೀರು ಸಂಗ್ರಹವಾಗಿದೆ. ಸೌಂದರ್ಯ ವೃದ್ಧಿ ಯೋಜನೆಗೆ ಹೆಚ್ಚು ನೀರು ಬೇಕಾಗುವುದು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟುವುದಾದರೂ ಇದಕ್ಕೆ ಅತಿ ಕಡಿಮೆ ನೀರಿನಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎನ್ನುತ್ತಾರೆ ಅಧಿಕಾರಿಗಳು. ಇದೀಗ ಸಂಡೂರು ಹಾಗೂ ಎನ್‌ಎಂಡಿಸಿಗೆ ಕುಡಿಯುವ ನೀರು ಹಾಗೂ ಡಿಆರ್‌ಡಿಒ ಬಳಕೆಗೆ ಸೇರಿ ವಾರ್ಷಿಕ 11 ಕ್ಯುಸೆಕ್‌ ನೀರು ನಿಗದಿಪಡಿಸಲಾಗಿದೆ. ಇಲ್ಲಿನ ಎಡದಂಡೆ ಕಾಲುವೆಗೂ ರೈತರಿಗೆ ಬೇಸಾಯಕ್ಕೆ ನೀರು ಬಿಡಬೇಕಾಗಿರುವುದರಿಂದ ಜಲಾಶಯ ತುಂಬಿದ ವರ್ಷ 28 ಕ್ಯುಸೆಕ್‌ ನೀರನ್ನು ಬೇಸಿಗೆಯಲ್ಲಿ 30 ದಿನಗಳ ಕಾಲ ಬಿಡಬೇಕಿದೆ. ಇಷ್ಟಲ್ಲದೆ ಜಲಾಶಯದ ನೀರನ್ನು ಹೊರತುಪಡಿಸಿ ಕುರುಕುಪ್ಪೆ ಬಳಿ ತುಂಗಭದ್ರಾ ನದಿ ನೀರನ್ನು ಕಾಲುವೆಯಿಂದ ಜಾಕ್‌ವೆಲ್‌ ಮೂಲಕ ಪಡೆದು ಸಂಗ್ರಹಿಸಿಕೊಳ್ಳಲಾಗುತ್ತಿದೆ. ಹಾಗಾಗಿ ಈ ಯೋಜನೆಗೆ ಇರುವ ನೀರೇ ಸಾಕಾಗುತ್ತದೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು:

ಸಂಡೂರು ಭಾಗದಲ್ಲಿ ಹಲವು ಪ್ರವಾಸಿ ತಾಣಗಳಿದ್ದು, ಅದರಲ್ಲಿ ಪ್ರಮುಖ ತಾಣವೇ ಈ ತಾರಾನಗರ. ಸ್ಥಳೀಯ ಯುವಕರಿಗೆ ಉದ್ಯೋಗವನ್ನು ಒದಗಿಸುವುದು ಹಾಗೂ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಗೆ ಒತ್ತು ಕೊಡುವ ಉದ್ದೇಶದಿಂದ ಜಲಾಶಯಕ್ಕೆ ಡಿಎಂಎಫ್‌ ಎರಡೂವರೆ ಕೋಟಿ ಅನುದಾನ ನಿಗದಿ ಮಾಡಲಾಗಿದೆ. ಉಬ್ಬಳಗಂಡಿ ವೀರಭದ್ರೇಶ್ವರ ದೇವಸ್ಥಾನ, ಗಂಡಿ ಬಸವೇಶ್ವರ ದೇವಸ್ಥಾನ, ಗಂಡಿ ನರಸಿಂಹ ದೇವಸ್ಥಾನಗಳಿಗೆ ಒಟ್ಟು . 6.5 ಕೋಟಿ ನಿಗದಿ ಮಾಡಲಾಗಿದ್ದು, ಆ ದೇವಸ್ಥಾನಗಳು ಕೂಡಾ ಪ್ರವಾಸೋದ್ಯಮ ಆಯಾಮದಲ್ಲಿ ಅಭಿವೃದ್ಧಿ ಹೊಂದಲಿವೆ. ವಿಭಜಿತ ಬಳ್ಳಾರಿ ಜಿಲ್ಲೆಗೆ ಸಂಡೂರು ಪ್ರಮುಖ ಟೂರಿಸಂ ಸ್ಥಳವಾಗಲಿದೆ.

ತಾರಾನಗರ ಜಲಾಶಯವು ಸಂಡೂರು ತಾಲೂಕಿನ ಅಸ್ಮಿತೆ. ಅದರ ಸೌಂದರ್ಯ ವೃದ್ಧಿ ಮಾಡುವುದರಿಂದ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗದ ಪ್ರವಾಸಿಗರು ಇಲ್ಲಿಗೆ ಬರುವಂತಾಗಬೇಕು. ಇದರೊಂದಿಗೆ ಹಲವು ಐತಿಹಾಸಿಕ ದೇವಾಲಯಗಳನ್ನು ಕೂಡಾ ಅಭಿವೃದ್ಧಿಗೆ ಹಣ ನಿಗದಿಪಡಿಸಲಾಗಿದೆ. ಈ ಯೋಜನೆಗೆ ಈಗಾಗಲೇ ನೀಲನಕ್ಷೆಯು ಕೂಡ ಸಿದ್ಧವಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಈ. ತುಕರಾಂ ಸಂಡೂರು ತಿಳಿಸಿದ್ದಾರೆ. 
 

Follow Us:
Download App:
  • android
  • ios