ಶಿವಕುಮಾರ ಕುಷ್ಟಗಿ 

ಗದಗ(ಜ.01): ಟ್ವೆಂಟಿ... ಟ್ವೆಂಟಿ ಎಂದು ಹೇಳುವುದೇ ಹೆಚ್ಚು ಖುಷಿ ಕೊಡುವ ವಿಚಾರವಾಗಿದೆ. ಹೀಗೆ ಹೇಳಲು ಖುಷಿಯಾಗಿರುವ ವರ್ಷದಲ್ಲಿ ಅಭಿವೃದ್ಧಿ ವಿಷಯದಲ್ಲಿ ಗದಗ ಜಿಲ್ಲೆಯ ಜನತೆ ನಿರೀಕ್ಷೆಗಳು ನೂರಾರಿದ್ದು ಅವುಗಳನ್ನು ಪೂರ್ಣಗೊಳಿಸುವಲ್ಲಿ ಸರ್ಕಾರದಲ್ಲಿರುವವರು ಮತ್ತು ವಿರೋಧ ಪಕ್ಷದವರು ವಿಶೇಷ ಗಮನ ನೀಡುವ ಮೂಲಕ ಜಿಲ್ಲೆಯನ್ನು ಹೊಸ ದಿಕ್ಕಿನತ್ತ ತೆಗೆದುಕೊಂಡು ಹೋಗಬೇಕಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗದಗ ಜಿಲ್ಲೆ ಸಂಪೂರ್ಣವಾಗಿ ಕೃಷಿಯನ್ನೇ ಆರ್ಥಿಕ ಹಿನ್ನೆಲೆಯನ್ನಾಗಿ ಹೊಂದಿರುವ ಜಿಲ್ಲೆಯಾಗಿದ್ದು, ಇಲ್ಲಿನ ಪ್ರತಿಯೊಂದು ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲವೂ ನಿರ್ಧಾರವಾಗುವುದು ಕೃಷಿ ವಲಯದ ಮೇಲೆಯೇ ಹಾಗಾಗಿ 2019 ಗದಗ ಜಿಲ್ಲೆಯ ರೈತರ ಪಾಲಿಗೆ ಸಿಹಿಗಿಂತ ಕಹಿಯನ್ನೇ ಮೊದಲು ಬರಗಾಲ ನಂತರ ಪ್ರವಾಹದ ಮೂಲಕ ಜೀವ ಹಿಂಡಿ ಹೋಗಿದ್ದು ಹೊಸವರ್ಷದಲ್ಲಾದರೂ ಎಲ್ಲರ ಬದುಕಿನಲ್ಲಿ ನೆಮ್ಮದಿ ಮೂಡಬೇಕಿದೆ. 

ಶಾಶ್ವತ ಸೂರು ಕಲ್ಪಿಸಲಿ: 

ಕಳೆದ ಸಾಲಿನಲ್ಲಿ ಗದಗ ಜಿಲ್ಲೆಯ ಇತಿಹಾಸದಲ್ಲಿಯೇ ಕಂಡು ಕೇಳರಿಯದಂತ ರೀತಿಯಲ್ಲಿ ಮಲಪ್ರಭಾ ಮತ್ತು ಬೆಣ್ಣೆಹಳ್ಳಕ್ಕೆ ಪ್ರವಾಹ ಉಂಟಾಗಿ ಜಿಲ್ಲೆಯ 5944 ಜನರು ಮನೆಗಳನ್ನು ಕಳೆದುಕೊಂಡಿದ್ದು ಮೊದಲು ಅವರ ಬದುಕು ಕಟ್ಟುವ ಕೆಲಸವಾಗಬೇಕಿದೆ. ಸರ್ಕಾರ ಇವರಿಗೆ ಕೇವಲ ಪರಿಹಾರ ಕೊಟ್ಟರೆ ಸಾಲದು ಅವರ ಬದುಕಿಗೆ ಆಸರೆ ಯಾಗುವಂತ ಯೋಜನೆಗಳನ್ನು ರೂಪಿಸಿ ಬೀದಿಗೆ ಬಂದವರ ಬದುಕನ್ನು ಮರು ಸ್ಥಾಪನೆ ಮಾಡಬೇಕಿದೆ. 18 ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಬೆಳೆಗಳು ಪ್ರವಾಹದ ಅಬ್ಬರಕ್ಕೆ ಕೊಚ್ಚಿಹೋಗಿದ್ದು ಆ ಎಲ್ಲಾ ರೈತರಿಗೆ ಸೂಕ್ತವಾದ ಪರಿಹಾರವನ್ನು ನೀಡ ಬೇಕಿದೆ. ಪ್ರವಾಹದಿಂದಾಗಿ 25 ಕೋಟಿಯಷ್ಟು ರಸ್ತೆ ಸೇತುವೆಗಳು ಹಾನಿಯಾಗಿದ್ದು ಅವುಗಳ ದುರಸ್ತಿಗೆ

ಹೆಚ್ಚಿನ ಅನುದಾನ ಬೇಕಿದೆ. 

ಪ್ರವಾಹ ಪೀಡಿತ ಗ್ರಾಮ ಗಳನ್ನು ಹೊರತು ಪಡಿಸಿ ಇನ್ನುಳಿದ ಗ್ರಾಮಗಳಲ್ಲಿಯೂ ಸತತವಾಗಿ ಸುರಿದ ಕುಂಭ ದ್ರೋಣ ಮಳೆಗೆ ಸಾವಿ ರಾರು ಕುಟುಂಬಗಳು ಮನೆಗಳನ್ನು ಭಾಗಶಃ ಕಳೆದು ಕೊಂಡಿದ್ದು ಅವರಿಗೂ ಸೂರು ಕಲ್ಪಿಸುವ ಮಹತ್ತರ ಜವಾಬ್ದಾರಿಯನ್ನು ಸರ್ಕಾರ ನಿಭಾಯಿಸಬೇಕಿದೆ. 

ಶೈಕ್ಷಣಿಕ ಕ್ಷೇತ್ರದಲ್ಲೂ ಬೇಕಿದೆ ಪ್ರಗತಿ:

ಗದಗ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನು ಸಾಕಷ್ಟು ಪ್ರಗತಿ ಕಾಣಬೇಕಿದ್ದು, ಎಸ್.ಎಸ್.ಎಲ್ ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಮೊದಲ 10 ಸ್ಥಾನದಲ್ಲಿ ಇದುವರೆಗೂ ಸ್ಥಾನ ಪಡೆ ಯಲು ಆಗಿಲ್ಲ, ಈ ಬಾರಿಯಾದರೂ ಶಿಕ್ಷಣ ಇಲಾಖೆ ಈ ಕುರಿತು ವಿಶೇಷ ಗಮನ ನೀಡಿ, ರಾಜ್ಯ ಮಟ್ಟದಲ್ಲಿ ಗದಗ ಜಿಲ್ಲೆಯ ಶಿಕ್ಷಣ ಮಟ್ಟವನ್ನು ಹೆಚ್ಚಿಸುವ ಪ್ರಯತ್ನವಾಗಬೇಕಿದೆ. ಕ್ರೀಡಾ ಕ್ಷೇತ್ರದಲ್ಲಿ ಕೊಂಚ ಸಮಾಧಾನ ತರುವ ರೀತಿಯಲ್ಲಿ ಕ್ರೀಡಾಪಟುಗಳು ಸಾಧನೆ ಮಾಡುತ್ತಿದ್ದರೂ ಅಂತಾರಾಷ್ಟ್ರಿಯ ಮಟ್ಟದಲ್ಲಿ ಗದಗ ಜಿಲ್ಲೆಯ ಕೀರ್ತಿಯನ್ನು ಬೆಳಗಿಸುವ ಪ್ರಯತ್ನವಾಗಬೇಕಿದೆ. 

ಜಿಲ್ಲೆಯ ಅಭಿವೃದ್ಧಿಗೆ ಬೇಕು ಹೊಸ ಪರ್ವ

ಜಿಲ್ಲೆಯಲ್ಲಿ ಇದುವರೆಗೂ ರಾಜ್ಯವೇ ಗಮನಿಸುವಂತ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ, ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದ ವೇಳೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ನದಿ ಮೂಲದ ನೀರು ಪೂರೈಕೆ ಯೋಜನೆ ಜಾರಿ ಮಾಡಿದ್ದು, ಗ್ರಾಮೀಣಾಭಿವೃದ್ಧಿ ವಿವಿ ಸ್ಥಾಪನೆ ಮಾಡಿದ್ದೇ ಕೊನೆ, ಮುಂದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದಾಗಿನಿಂದಲೂ ಗದಗ ಜಿಲ್ಲೆ ರಾಜಕೀಯ ಸೇರಿದಂತೆ ಎಲ್ಲಾ ವಿಭಾಗದಲ್ಲೂ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸಧ್ಯದ ಸರ್ಕಾರ ಅದನ್ನು ಹೋಗಲಾಡಿಸಿ ಹೊಸ ಯೋಜನೆಗಳನ್ನು ಮಂಜೂರು ಮಾಡುವ ಮೂಲಕ ಅಭಿವೃದ್ಧಿಗೆ ಹೊಸ ಪರ್ವವನ್ನೇ ಬರೆಯಬೇಕಾದ ಅವಶ್ಯಕತೆ ಇದೆ.

ಅಧಿಕಾರಿಗಳಿಗೆ ಬಿಸಿ ಬೇಕಿದೆ

ರಾಜ್ಯದಲ್ಲಿ ಕಳೆದ 18 ತಿಂಗಳ ಅವಧಿಯಲ್ಲಿ 2 ಸರ್ಕಾರಗಳು ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ರಾಜಕೀಯ ನಾಯಕರ ಹಿಡಿತವೇ ಇಲ್ಲದಂತಾಗಿದೆ. ಗದಗ ಜಿಲ್ಲೆಯಲ್ಲಿ ಕೆಲಸ ಮಾಡುವ ಬಹುತೇಕ ಇಲಾಖೆ ಅಧಿಕಾರಿಗಳು ಬೇರೆ ಬೇರೆ ಜಿಲ್ಲೆಯಲ್ಲೂ ಪ್ರಭಾರ ಅಧಿಕಾರಿಗಳಾಗಿದ್ದು, ಗದಗ ಜಿಲ್ಲೆಯಲ್ಲಿ ಕೆಲಸವನ್ನೇ ಮಾಡುವುದಿಲ್ಲ, ಇನ್ನು ರಾಜಕೀಯ ನಾಯಕರು ಅಷ್ಟೇ, ತಮ್ಮ ಸರ್ಕಾರ ಬಂದಾಗ ತಮ್ಮವರೇ ಅಧಿಕಾರಿಗಳು ಬೇಕು ಎನ್ನುವ ಕಾರಣಕ್ಕಾಗಿ ವರ್ಗಾವಣೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಆಡಳಿತ ವೈಖರಿ ನಿಂತ ನೀರಾಗಿದ್ದು ಇದಕ್ಕೆ 2020 ರಲ್ಲಾದರೂ ಜಿಲ್ಲಾ ಉಸ್ತುವಾರಿ ಸಚಿವರು ಬಿಸಿ ಮುಟ್ಟಿಸಿ, ಅಧಿಕಾರಿಗಳಿಂದ ಕೆಲಸ ಮಾಡಿಸುವ ಪ್ರಯತ್ನ ಮಾಡಬೇಕಿದೆ.

ಈರುಳ್ಳಿಗೆ ಶೈತ್ಯಾಗಾರ ನಿರ್ಮಿಸಿ

ರಾಜ್ಯದಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆವ ಜಿಲ್ಲೆ ಎನ್ನುವ ಹೆಗ್ಗಳಿಕೆ ಹೊಂದಿರುವ ಗದಗ ಜಿಲ್ಲೆಯಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಬೃಹತ್ ಪ್ರಮಾಣದ ಈರುಳ್ಳಿ ಶೈತ್ಯಾಗಾರ ನಿರ್ಮಾಣವಾಗಬೇಕು ಎನ್ನುವುದು ಜಿಲ್ಲೆಯ ರೈತರ ಬಹುದಿನದ ಬೇಡಿಕೆಯಾಗಿದೆ. 

ಇನ್ನು ಮೆಣಸಿನಕಾಯಿಯನ್ನು ಸಂಗ್ರಹಿಸಲು ಅತ್ಯಾಧುನಿಕ ಸೌಲಭ್ಯವುಳ್ಳ ಗೋದಾಮುಗಳ ನಿರ್ಮಾಣ ವಾಗಬೇಕಿದೆ. ಗದಗ ಜಿಲ್ಲೆಯಲ್ಲಿಯೇ ಕೃಷಿ ಆಧಾರಿತವಾದ ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಹೇಳುತ್ತಲೇ ಬರುತ್ತಿದ್ದಾರೆ ಆದರೆ, ಇದುವರೆಗೂ ಅದು ಪ್ರಾರಂಭವಾಗಿಲ್ಲ, ಇನ್ನು ಗದಗ ಜಿಲ್ಲೆಯನ್ನು ಬೇರೆ ಪ್ರವಾಸಿ ಜಿಲ್ಲೆಗಳೊಂದಿಗೆ ಸೇರಿಸಿ ಹಬ್ ಮಾಡಲು ಅನುಕೂಲವಾಗುವ ರಸ್ತೆಗಳ ನಿರ್ಮಾ ಣಕ್ಕೆ ಆದ್ಯತೆ ನೀಡಬೇಕಿದೆ. ಇನ್ನು ಪ್ರವಾಸೋದ್ಯಮ ವಿಷಯದಲ್ಲಿ ಗದಗ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು ಅದನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಇನ್ನು ಹೆಚ್ಚಿನ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ ಇದ್ದಾರೆ.