ಬೆಂಗಳೂರು [ಸೆ.02]:  ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ನಿಶಬ್ದ ವಲಯಗಳನ್ನು ರಚಿಸುವಂತೆ ನಿರ್ದೇಶಿಸಿ ಈ ಹಿಂದೆ ಹೊರಡಿಸಿದ್ದ ಆದೇಶ ಪಾಲಿಸದ ಸರ್ಕಾರದ ವಿರುದ್ಧ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿತು.

ಪಬ್‌ ಹಾಗೂ ಬಾರ್‌ಗಳಿಂದ ಇಂದಿರಾನಗರದಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಮತ್ತು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ನಿಶಬ್ದ ವಲಯಗಳನ್ನು ರಚಿಸಲು ಸೂಚಿಸಿ ಜುಲೈ 23ರಂದು ನೀಡಿದ್ದ ಆದೇಶವನ್ನು ಸರ್ಕಾರ ಪಾಲಿಸದಿರುವುದು ನ್ಯಾಯಪೀಠದ ಗಮನಕ್ಕೆ ಬಂದಿತ್ತು.

ಇದರಿಂದ ಸರ್ಕಾರದ ವಿರುದ್ಧ ಬೇಸರಗೊಂಡ ಮುಖ್ಯ ನ್ಯಾಯಮೂರ್ತಿಗಳು, ನಿಶಬ್ದ ವಲಯಗಳನ್ನು ರಚಿಸಲು ಹಾಗೂ ಶಬ್ಧ ಮಾಲಿನ್ಯ ಉಪಕರಣಗಳ ಖರೀದಿಸಲು ನ್ಯಾಯಾಲಯವು ಆದೇಶಿಸಿ ಒಂದು ತಿಂಗಳು ಕಳೆದಿದೆ. ಆದರೆ, ಸರ್ಕಾರ ಮಾತ್ರ ನ್ಯಾಯಾಲಯದ ಆದೇಶ ಪಾಲಿಸಿಲ್ಲ. ಈ ಕ್ರಮ ಸರಿಯಲ್ಲ ಮತ್ತು ರಾಜ್ಯ ಸರ್ಕಾರದ ವೈಫಲ್ಯವನ್ನು ತೋರುತ್ತದೆ ಎಂದು ಚಾಟಿ ಬೀಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ, ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ ಜಾರಿಗೆ ಬಂದು 18 ವರ್ಷ ಕಳೆದಿವೆ. ಆದರೂ ಸರ್ಕಾರವು ಕಾಯ್ದೆಯ ಜಾರಿಗೆ ಮೀನಾಮೇಷ ಎಣಿಸುತ್ತಿದೆ. ಇಂತಹ ಧೋರಣೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಮುಂದಿನ ವಿಚಾರಣೆ ವೇಳೆಗೆ ಸರ್ಕಾರ ಈ ಕುರಿತು ಸೂಕ್ತ ವಿವರಣೆ ನೀಡಬೇಕು. ತಪ್ಪಿದರೆ ನ್ಯಾಯಾಲಯವು ತನ್ನದೇ ಆದ ಸೂಕ್ತ ಆದೇಶ ಹೊರಡಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಎಚ್ಚರಿಸಿದರು.

ಇಂದಿರಾನಗರದಲ್ಲಿ ಪಬ್‌ ಮತ್ತು ಬಾರ್‌ಗಳಿಂದ ಆಗುತ್ತಿರುವ ಶಬ್ದ ಮಾಲಿನ್ಯ ತಡೆಯಲು ನಡೆಸುತ್ತಿರುವ ತಪಾಸಣೆ ಮುಂದುವರಿಸುವಂತೆ ಸ್ಥಳೀಯ ಪೊಲೀಸರಿಗೆ ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿತು.