ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು(ಫೆ.16): ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ವಿಷಯದಲ್ಲಿ ನಿಯಮಾಳಿಗಳ ಪಾಲನೆಯಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೇ ಅಂತಿಮ ಪಟ್ಟಿ ಪ್ರಕಟಿಸದಂತೆ ನಗರದ ರಾಷ್ಟ್ರೀಯ ಕಾನೂನು ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶನ ನೀಡಿ ಧಾರವಾಡ ಹೈಕೋರ್ಟ್‌ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.

ಹುದ್ದೆಯ ಆಕಾಂಕ್ಷಿ ಪ್ರತಾಪ್‌ಸಿಂಗ್‌ ಯಾದವ್‌ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು, ಆಯ್ಕೆ ಪ್ರಕ್ರಿಯೆಯನ್ನು ನಡೆಸಬಹುದು. ಆದರೆ, ನ್ಯಾಯಾಲಯದ ಅನುಮತಿ ಇಲ್ಲದೆ ನೇಮಕಾತಿಯನ್ನು ಅಂತಿಮಗೊಳಿಸಬಾರದು ಎಂದು ಆದೇಶಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಾಧ್ಯಾಪಕ, ಅಸೋಸಿಯೇಟ್‌ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಸರಿಯಾದ ಅಧಿಸೂಚನೆ, ಮೀಸಲಾತಿ ಪಾಲನೆಯಾಗಿಲ್ಲ ಎಂದು ಹುದ್ದೆಯ ಆಕಾಂಕ್ಷಿ ಪ್ರತಾಪ್‌ ಸಿಂಗ್‌ ಯಾದವ್‌ ಎಂಬುವವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅರ್ಜಿದಾರರ ಪರವಾಗಿ ವಾದ ಮಂಡನೆ ಮಾಡಿದ ವಕೀಲ ಅನೂಪ್‌ ದೇಶಪಾಂಡೆ, ನೇಮಕಾತಿ ವಿಚಾರದಲ್ಲಿ ನಿಯಮಗಳನ್ನು ಸರಿಯಾಗಿ ಪಾಲನೆಯಾಗಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ವಿಚಾರಣೆ ನಡೆಸಿದ ನ್ಯಾಯಾಲಯ, ಆಯ್ಕೆ ಪ್ರಕ್ರಿಯೆಗೆ ಯಾವುದೇ ಅಡ್ಡಿ ಇಲ್ಲ. ಆದರೆ, ನೇಮಕಾತಿಯನ್ನು ಅಂತಿಮಗೊಳಿಸುವ ಮುನ್ನ ನ್ಯಾಯಾಲಯದ ಗಮನಕ್ಕೆ ತರಬೇಕು ಹಾಗೂ ಬಳಿಕವಷ್ಟೇ ಪಟ್ಟಿಯನ್ನು ಅಂತಿಮಗೊಳಿಸಬೇಕು ಎಂದು ಸೂಚನೆ ನೀಡಿದೆ.

ಈಗಾಗಲೇ ಎರಡು ಬಾರಿ ನೇಮಕ ರದ್ದು:

ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ನೇಮಕಾತಿ ನಡೆಯುತ್ತಿರುವುದು ಇದು ಮೂರನೇ ಬಾರಿ. ಈಗಾಗಲೇ ಎರಡು ಬಾರಿ ನೇಮಕಾತಿ ಪ್ರಕ್ರಿಯೆ ರದ್ದುಗೊಂಡಿದೆ. ಇದೇ ರೀತಿ ನಿಯಮಾವಳಿಗಳನ್ನು ಸರಿಯಾಗಿ ಪಾಲನೆ ಮಾಡದ ಕಾರಣಕ್ಕಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಎರಡು ಬಾರಿ ಮಾಡಿರುವ ತಪ್ಪುಗಳನ್ನೇ ಮೂರನೇ ಬಾರಿಯೂ ಮಾಡಲಾಗುತ್ತಿದೆ. ಮೀಸಲಾತಿಯಲ್ಲಿಯೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ತಮಗೆ ಬೇಕಾದವರನ್ನು ನೇಮಕಾತಿ ಮಾಡಿಕೊಳ್ಳಲು ಇಂತಹ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಕಾರಣಕ್ಕಾಗಿ ನೇಮಕ ಪ್ರಕ್ರಿಯೆಗೆ ಹಿನ್ನೆಡೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಕಾಲೇಜು ಯುಜಿಸಿ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದ್ದು, ಅದರ ನಿಯಮಾವಳಿಗಳನ್ನೇ ಪಾಲನೆ ಮಾಡಬೇಕು. ಆದರೆ, ಕಾಲೇಜಿನ ವಾದವೇ ಬೇರೆಯಾಗಿದೆ. ಕೇಂದ್ರದಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣಕ್ಕಾಗಿ ಯುಜಿಸಿಯ ನಿಯಮಗಳನ್ನು ಪಾಲನೆ ಮಾಡಬೇಕಾಗಿಲ್ಲ ಎಂದು ಹೇಳುತ್ತಿದೆ. ಕಾಲೇಜಿನ ವಾದವನ್ನು ಅಲ್ಲಿನ ಹಿರಿಯ ವಿದ್ಯಾರ್ಥಿಗಳು, ಸಿಬ್ಬಂದಿ ಸರಸಾಗಟಾಗಿ ತಳ್ಳಿಹಾಕುತ್ತಾರೆ. ಕಳೆದ ಎಂಟು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಯು ಸೂಕ್ತವಾಗಿ ನಡೆಯುತ್ತಿಲ್ಲ ಎಂದು ಹೇಳಲಾಗಿದೆ.

ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ, ಅಸೋಸಿಯೇಟ್‌ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಶನಿವಾರ (ಫೆ.15) ಕೊನೆಯ ದಿನವಾಗಿದೆ. ಅರ್ಹತೆಯ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಲು ನಿಯಮಾವಳಿ ಅನ್ವಯ ಕೆಲ ದಿನಗಳ ಕಾಲಾವಕಾಶ ಅಗತ್ಯ ಇದೆ. ಆದರೆ, ರಾಷ್ಟ್ರೀಯ ಕಾನೂನು ಕಾಲೇಜು ಭಾನುವಾರವೇ (ಫೆ.16) ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಲಿದೆ. ಅಲ್ಲದೇ, ಫೆ.18, 19 ಮತ್ತು 20ರಂದು ಸಂದರ್ಶನ ನಡೆಸಿ ನೇಮಕಾತಿ ಪ್ರಕ್ರಿಯೆ ಅಂತಿಮಗೊಳಿಸಲು ಮುಂದಾಗಿದೆ. ತ್ವರಿತಗತಿಯಲ್ಲಿ ನೇಮಕಾತಿ ನಡೆಸುವುದಕ್ಕೆ ಅಪಸ್ವರಗಳು ವ್ಯಕ್ತವಾಗಿದ್ದು, ಯಾವ ಮಾನದಂಡದ ಮೇಲೆ ತ್ವರಿತ ಪ್ರಕ್ರಿಯೆ ನಡೆಸಲಾಗುತ್ತದೆ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಆಕಾಂಕ್ಷಿಗಳ ಪ್ರಶ್ನೆಯಾಗಿದೆ.

ಈ ಬಗ್ಗೆ ಮಾತನಾಡಿದ ವಕೀಲ ಅನೂಪ್‌ ದೇಶಪಾಂಡೆ ಅವರು, ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿಲ್ಲ ಎಂಬ ಆರೋಪ ಹಿನ್ನೆಲೆಯಲ್ಲಿ ನೇಮಕಾತಿಯನ್ನು ಅಂತಿಮಗೊಳಿಸುವ ಮುನ್ನ ನ್ಯಾಯಾಲಯದ ಅನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಿದೆ. ಆದರೆ, ಆಯ್ಕೆ ಪ್ರಕ್ರಿಯೆ ನಡೆಸಬಹುದು. ಅದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಿದ್ದಾರೆ.