Asianet Suvarna News Asianet Suvarna News

ಉಡುಪಿ ಜಿಲ್ಲಾಸ್ಪತ್ರೆಗೆ ಹೈಕೋರ್ಟ್ ಜಡ್ಜ್ ದಿಢೀರ್ ಭೇಟಿ; ಇನ್ನು ಕುಡಿಯಲ್ಲವೆಂದು ಕಣ್ಣೀರಿಟ್ಟ ವ್ಯಕ್ತಿ

ಉಡುಪಿ ಜಿಲ್ಲೆಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಹೈಕೋರ್ಟ್ ಜಡ್ಜ್ ಇಂದು ದಿಢೀರ್ ಭೇಟಿ. ಕುಡಿತದ ಚಟ ಹೊಂದಿದ್ದ ವ್ಯಕ್ತಿಗೆ ಬುದ್ಧಿವಾದ. ಜಡ್ಜ್ ಕಾಲಿಗೆ ಬಿದ್ದು ಕಣ್ಣೀರಿಟ್ಟ ವ್ಯಕ್ತಿ.

High Court Judge surprise visits to Udupi District Hospital gow
Author
First Published Sep 10, 2022, 4:18 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.10): ಹೈಕೋರ್ಟ್ ಜಡ್ಜ್ ಇಂದು ದಿಡೀರ್ ಉಡುಪಿ ಜಿಲ್ಲೆಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾ.ವೀರಪ್ಪ ಆಸ್ಪತ್ರೆಯ ಪ್ರತಿಯೊಂದು ವಾರ್ಡ್ ಗೆ ಭೇಟಿ ಕೊಟ್ಟು ರೋಗಿಗಳ ಜೊತೆ ಮಾತನಾಡಿದರು. ಸಿಬ್ಬಂದಿಗಳಿಂದ ಮಾಹಿತಿ ಪಡೆದು, ರೋಗಿಗಳಿಗೆ ಸೌಲಭ್ಯ ಸಿಗುತ್ತಿದೆಯಾ ಎಂಬುದನ್ನು ಪರಿಶೀಲಿಸಿದರು. ಪುರುಷರ ವಾರ್ಡಿಗೆ ನ್ಯಾಯಮೂರ್ತಿಗಳು ಭೇಟಿ ಕೊಟ್ಟಾಗ ಕುಡಿತದ ಚಟವಿದ್ದ ರೋಗಿಯೊಬ್ಬರು ಕಾಣಸಿಕ್ಕರು. ಏನಪ್ಪಾ ಯಾಕೆ ಕುಡಿತಿರಿ ಎಲ್ಲವೂ ಕಂಟ್ರೋಲ್ ನಲ್ಲಿ ಇರಬೇಕು ಎಂದು ಬುದ್ಧಿವಾದ ಹೇಳಿದರು. ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿತ್ತು. ನ್ಯಾಯಮೂರ್ತಿಗಳು ಸಮೀಪ ಬರುತ್ತಿದ್ದಂತೆ ಆತ ಜೋರಾಗಿ ನಡುಗುತ್ತಾ, ಅಳುವುದಕ್ಕೆ ಪ್ರಾರಂಭಿಸಿದ್ದ. ಏನಪ್ಪಾ ಯಾವ ಬ್ರ್ಯಾಂಡ್ ನಿಂದು? ಹೇ ಅಣ್ಣ ಯಾಕಪ್ಪ ಅಳುತ್ತೀಯಾ? ಎಂದು ಜಡ್ಜ್ ಕೇಳಿದರು. ಹೀಗನ್ನುತ್ತಿದ್ದಂತೆ ಆತ, ಜಡ್ಜ್ ಕಾಲಿಗೆ ಬಿದ್ದ, ಇನ್ನು ಕುಡಿಯಲ್ಲ ಸರ್, ನನ್ನನ್ನು ಆಸ್ಪತ್ರೆಯಿಂದ ಬಿಟ್ಟುಬಿಡಿ ಎಂದು ಗೊಗರೆಯುವುದಕ್ಕೆ ಶುರು ಮಾಡಿದ. 

ಏನು ನಿನಗೆ ಕುಡಿಯೋಕೆ ಬೇಕಾ ? ಕುಡಿಯೋದು ಬಿಟ್ಟು ಬಿಡು ಗುಡ್ ಎಂದು ಬೆನ್ನು ತಟ್ಟಿದರು. ಚೆನ್ನಾಗಿ ಊಟ ಮಾಡು ಆರೋಗ್ಯ ಕಾಪಾಡಿಕೋ. ಯಾಕೆ ಸುಮ್ಮನೆ ಕುಡಿದು ಹೆಂಡತಿ ಮಕ್ಕಳಿಗೆ ಅನ್ಯಾಯ ಮಾಡ್ತೀಯಾ ಬಿಟ್ಟುಬಿಡು. ಕುಡಿಯೋದು ಬಿಟ್ಟಿದ್ದಿ ಅಂತೀಯಾ ಖುಷಿಪಡು. ಸ್ವಲ್ಪ ಸಮಯ ಕಷ್ಟ ಆಗುತ್ತೆ ಆಮೇಲೆ ಸರಿ ಹೋಗುತ್ತೆ, ಮನಸ್ಸು ಗಟ್ಟಿ ಮಾಡು ಎಂದರು

ಹುಡುಗಿಯರು ಚೆನ್ಬಾಗಿ ನೀರು ಕುಡಿಯಬೇಕು 
ನೋವು ಎಂದು ಬಂದಿದ್ದ ಯುವತಿಯಿಬ್ಬರಿಗೆ ಬುದ್ಧಿವಾದ ಹೇಳಿದ ನ್ಯಾಯಮೂರ್ತಿಗಳು ಹುಡುಗಿಯರು ಸರಿಯಾಗಿ ನೀರು ಕುಡಿಯುವುದಿಲ್ಲ. ಟೈಮ್ ಟು ಟೈಮ್ ನೀರು ಕುಡಿಯಬೇಕು. ಆರೋಗ್ಯ ಚೆನ್ನಾಗಿ ಇಟ್ಕೋಬೇಕು ಎಂದು ಸಲಹೆ ನೀಡಿದರು.

ಆಸ್ಪತ್ರೆ ಬೆಡ್ ನಲ್ಲಿ ಮಲಗಿದ್ದ ಗಾಯಾಳು ಒಬ್ಬನನ್ನ ವಿಚಾರಿಸಿದಾಗ ಆತನಿಗೆ ಹೊಡೆದಾದ ವೇಳೆ ವ್ಯಕ್ತಿಯೊಬ್ಬ ಕಚ್ಚಿರುವ ವಿಚಾರ ಜಡ್ಜ್ ಗಮನಕ್ಕೆ ಬಂತು. ಕಚ್ಚಿದರೆ ಯಾಕೆ ಆಸ್ಪತ್ರೆಗೆ ಬಂದಿದ್ಯಪ್ಪಾ? ಎಂದು ಕೇಳಿದರು. ಇನ್ಫೆಕ್ಷನ್ ಆಗಬಾರದು ಎಂಬ ಕಾರಣಕ್ಕೆ ಇಂಜೆಕ್ಷನ್ ಕೊಟ್ಟಿದ್ದೇವೆ ಎಂದು ವೈದ್ಯರು ತಿಳಿಸಿದರು. ಈ ವಯಸ್ಸಲ್ಲಿ ಹೊಡೆದಾಟ ಮಾಡಲು ಹೋಗಬೇಡ ಎಂದು ಜಡ್ಜ್ ಹೇಳಿದಾಗ, ನನಗೆ ಅವರು ಮಾಟ ಮಂತ್ರ ಮಾಡಿದ್ದಾರೆ ಸರ್ ಎಂದು ರೋಗಿ ಹೇಳಿಕೊಂಡ. ಅದೆಲ್ಲ ಸುಳ್ಳಪ್ಪ ಅದನ್ನು ನಂಬಬೇಡ ಎಂದು ಬುದ್ಧಿವಾದ ಹೇಳಿದರು. ಈ ಬಗ್ಗೆ ಪ್ರಕರಣ ದಾಖಲಾಗಿದ್ಯಾ ಎಂದು ವಿಚಾರಿಸಿ ಜಡ್ಜ್ ಮುಂದಕ್ಕೆ ನಡೆದರು.

ಪೈಲ್ಸ್ ರೋಗಿಯೊಬ್ಬರಿಗೆ ನಿನ್ನ ಫುಡ್ ಹ್ಯಾಬಿಟ್ ಸರಿ ಮಾಡಿಕೊಳ್ಳಪ್ಪ ನೀರು ಚೆನ್ನಾಗಿ ಕೊಡಿ ಎಂದು ಹೇಳಿದರು. ವೃದ್ಧರನ್ನು ನೋಡಿಕೊಳ್ಳಲು ಯಾರು ಬರುವುದಿಲ್ಲ ಅನ್ನೋದು ನ್ಯಾಯಮೂರ್ತಿಗಳ ಗಮನಕ್ಕೆ ಬಂತು. ಗುಣವಾದರೂ ರೋಗಿಗಳನ್ನು ಮನೆಗೆ ಕರೆದೊಯ್ಯಲು ಯಾರೂ ಬರದ ಕಾರಣ ಆಸ್ಪತ್ರೆಯಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂದು ವೈದ್ಯರು ತಿಳಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡುವ ವೇಳೆ ನ್ಯಾಯಮೂರ್ತಿಗಳು ಉಡುಪಿಯಲ್ಲಿ ವೃದ್ಧರು ಅಸಹಾಯಕರನ್ನು ನೋಡಿಕೊಳ್ಳಲು ಒಂದು ಕೇಂದ್ರ ಸ್ಥಾಪಿಸುವ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿಯೂ ತಿಳಿಸಿದರು.

ಇದೇ ವೇಳೆ ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ತರಬೇತಿಗೆ ಬಂದಿರುವ ಯುವ ವೈದ್ಯರ ಜೊತೆ ಮಾತನಾಡಿದ ನ್ಯಾಯಮೂರ್ತಿಗಳು, ಇದನ್ನೊಂದು ಅನುಭವವಾಗಿ ನೀವು ಅರಿತುಕೊಳ್ಳಬೇಕು. ಬಡ ರೋಗಿಗಳ ಸೇವೆ ಮಾಡುವ ಬಗ್ಗೆ ಹೆಮ್ಮೆ ಇರಬೇಕು... ಬಡ ರೋಗಿಗಳ ಸೇವೆ ಮಾಡುವ ಡೆಡಿಕೇಶನ್ ನಿಮ್ಮಲ್ಲಿ ಇರಬೇಕು. ಹಣ ಅಧಿಕಾರ ಯಾವುದು ಶಾಶ್ವತ ಅಲ್ಲ ಬಡವರ ಸೇವೆ ಮಾಡಿ ಎಂದರು.

ಯಾಕಪ್ಪ ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಮಲ್ಕೋ ತೀರಾ, ಈಗಷ್ಟೇ ಸರ್ಜರಿ ಮುಗಿಸಿ ಬಂದಿದ್ದೀರಿ ಮೊಬೈಲ್ ದೂರ ಇಡಿ ಎಂದು ಪೋಸ್ಟ್ ಸರ್ಜರಿ ವಾರ್ಡಿಗೆ ತೆರಳಿದ ವೇಳೆ ನ್ಯಾಯಮೂರ್ತಿಗಳು ರೋಗಿಗಳಿಗೆ ಬುದ್ಧಿವಾದ ಹೇಳಿದರು. ಮೊಬೈಲ್ ಇಟ್ಕೋ ಬಾರದು ಎಂದು ಇನ್ಸ್ಟ್ರಕ್ಷನ್ ಕೊಡಿ ಎಂದು ವೈದ್ಯರಿಗೆ ಸೂಚಿಸಿದರು. ತಲೆ ಪಕ್ಕದಲ್ಲಿ ಮೊಬೈಲ್ ಇಟ್ಟುಕೊಂಡದ್ದನ್ನೆಲ್ಲಾ ತೆಗೆಸಿಬಿಡಿ ಎಂದು ಹೇಳಿದರು. ಸಾಯೋ ತನಕಾನು ನಮಗೆ ಮೊಬೈಲ್ ಬೇಕು ಎಂದು ತಮಾಷೆ ಮಾಡಿದರು.

 

 Chamarajanagar: ಸರ್ಕಾರಿ ವೈದ್ಯನ ಕರ್ತವ್ಯಲೋಪ: ಸಿಎಂ ಬೊಮ್ಮಯಿಗೆ ದೂರು

ಅಪಘಾತಗೊಂಡು ಬೆಡ್ ಮೇಲೆ ಮಲಗಿದ್ದ ಯುವಕರನ್ನು ಭೇಟಿಯಾದ ನ್ಯಾಯಮೂರ್ತಿಗಳು, ನೀವು ಯುವಕರು ಸೈನಿಕರ ತರ ಇರಬೇಕು, ಅಪಘಾತವಾಗಿದೆ ಎಂದು ಖಿನ್ನತೆ ಮಾಡಿಕೊಳ್ಳಬೇಡಿ ಎಂದರು. ದನ ಹೊಡೆದು ಅಪಘಾತಕ್ಕೀಡಾದ ಬೈಕ್ ಸವಾರನ ಜೊತೆ ಮಾತನಾಡಿದ ಜಡ್ಜ್, ಹೆಲ್ಮೆಟ್ ಧರಿಸಿಲ್ಲವಾ ಎಂದು ಕೇಳಿದರು. ಈ ವೇಳೆ ವೈದ್ಯರು ಉಡುಪಿಯಲ್ಲಿ  ಕುಡಿದು ವಾಹನ ಚಲಾಯಿಸಿದ ಪ್ರಕರಣ ಮತ್ತು ಹೆಲ್ಮೆಟ್ ಧರಿಸದ ಪ್ರಕರಣ ಹೆಚ್ಚು ಎಂದು ಹೇಳಿದರು. ಹೆಲ್ಮೆಟ್ ಧರಿಸದ ಯುವಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಈ ಬಗ್ಗೆ ಪೊಲೀಸ್ ಇಲಾಖೆ ಜೊತೆ ಮಾತನಾಡುತ್ತೇನೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

 

 ಮೊಬೈಲ್‌ ನಂಬರ್‌ ಲಿಂಕಾಗಿದ್ದರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ

ಆಸ್ಪತ್ರೆಯ ವ್ಯವಸ್ಥೆಗಳ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

Follow Us:
Download App:
  • android
  • ios