Asianet Suvarna News Asianet Suvarna News

ಬೆಂಗಳೂರು: 8 ಬಿಡಿಎ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ನಿರ್ದೇಶನ

ಸರ್ಕಾರಿ ಜಾಗದ ಒತ್ತುವರಿಯಾಗಿರುವ ಭಾಗವನ್ನು ಮುಂದಿನ 15 ದಿನಗಳಲ್ಲಿ ತೆರವು ಗೊಳಿಸಬೇಕು ಎಂದು ಯಲಹಂಕ ತಹಸೀಲ್ದಾರ್‌ ಅವರಿಗೆ ನಿರ್ದೇಶನ ನೀಡಿದ ಹೈಕೋರ್ಟ್‌

High Court Directs Action Against 8 BDA Officials in Bengaluru grg
Author
First Published Jan 11, 2023, 11:59 AM IST

ಬೆಂಗಳೂರು(ಜ.11): ನಗರದ ಕೊಡಿಗೇಹಳ್ಳಿ ಮತ್ತು ಕೋತಿಹೊಸಹಳ್ಳಿಯಲ್ಲಿ ಖಾಸಗಿ ಕಂಪನಿಗಳು ಸರ್ಕಾರಿ ಜಮೀನು ಒತ್ತುವರಿ ಮಾಡಿ ವಸತಿ ಸಮುಚ್ಛಯ ನಿರ್ಮಿಸಲು ಅವಕಾಶ ಕಲ್ಪಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಟು ಮಂದಿ ಅಧಿಕಾರಿಗಳ ವಿರುದ್ಧ ಕಾನೂನು ಮತ್ತು ಸೇವಾ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಬಿಡಿಎ ಆಯುಕ್ತರಿಗೆ ನಿರ್ದೇಶಿಸಿದೆ. ಅಲ್ಲದೆ, ಸರ್ಕಾರಿ ಜಾಗದ ಒತ್ತುವರಿಯಾಗಿರುವ ಭಾಗವನ್ನು ಮುಂದಿನ 15 ದಿನಗಳಲ್ಲಿ ತೆರವು ಗೊಳಿಸಬೇಕು ಎಂದು ಯಲಹಂಕ ತಹಸೀಲ್ದಾರ್‌ ಅವರಿಗೆ ನಿರ್ದೇಶನ ನೀಡಿದೆ.

ಖಾಸಗಿ ಕಂಪನಿ ಮಾಡಿರುವ ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೊಡಿಗೆಹಳ್ಳಿಯ ನಿವಾಸಿ ಅಶ್ವತ್ಥ ನಾರಾಯಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಬೆಂಗಳೂರು: ಬಿಡಿಎ ವಿಲ್ಲಾ ಮಾರ್ಚ್‌ಗೆ ಸಿದ್ಧ..!

ಈ ಸಂದರ್ಭದಲ್ಲಿ ವಿವಾದಿತ ವಸತಿ ಸಮುಚ್ಛಯದಲ್ಲಿ ಫ್ಲಾಟುದಾರರ ಪರ ವಕೀಲರು ಹಾಜರಾಗಿ, ತಕ್ಷಣ ಒತ್ತುವರಿ ತೆರವು ಮಾಡಿದರೆ ತಮ್ಮ ಕಕ್ಷಿದಾರರಿಗೆ ತೊಂದರೆಯಾಗಲಿದೆ. ಹೀಗಾಗಿ, ಒತ್ತುವರಿ ಪ್ರಕ್ರಿಯೆ ಮುಂದೂಡಲು ನಿರ್ದೇಶಿಸುವಂತೆ ಕೋರಿದರು.

ಅದಕ್ಕೆ ತೀವ್ರ ಅಸಮಾಧಾನಗೊಂಡ ನ್ಯಾಯಪೀಠ, ಒತ್ತುವರಿ ತೆರವು ಮಾಡಬಾರದು ಎಂದಾದರೆ ನ್ಯಾಯಾಲಯದ ಆದೇಶಕ್ಕೆ ಬೆಲೆ ಏನಿದೆ? ಸರ್ಕಾರಿ ಜಮೀನಿನ ಒತ್ತುವರಿ ಜಾಗದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಮನೆ ಪಡೆದಿರುವವರಿಗೆ ಈ ಕುರಿತು ಜವಾಬ್ದಾರಿ ಇಲ್ಲವೇ? ನಿಮ್ಮ ಅಹವಾಲು ಏನೇ ಇದ್ದರೂ ತಹಸೀಲ್ದಾರ್‌ ಮುಂದೆ ಸಲ್ಲಿಸುವಂತೆ ಸೂಚಿಸಿತು.

ಇದಕ್ಕೂ ಮುನ್ನ ಸರ್ಕಾರಿ ವಕೀಲರಾದ ಪ್ರತಿಮಾ ಹೊನ್ನಾಪುರ, ಅರ್ಜಿ ಸಂಬಂಧ ಹೈಕೋರ್ಟ್‌ ನಿರ್ದೇಶನದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಒತ್ತುವರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಲ್ಲಿಸಿರುವ ವರದಿ ಮತ್ತು ಯಲಹಂಕ ತಹಸೀಲ್ದಾರ್‌ ಅವರು ನೀಡಿರುವ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಒದಗಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಪ್ರಕರಣದಲ್ಲಿನ ತಪ್ಪಿತಸ್ಥ ಬಿಡಿಎ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಆಯುಕ್ತರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಫೆ.2ಕ್ಕೆ ಮುಂದೂಡಿತು.

Follow Us:
Download App:
  • android
  • ios