ಬೆಂಗಳೂರು(ಫೆ.26): ಆನಂದ್‌ ಸಿಂಗ್‌ ಅವರನ್ನು ಅರಣ್ಯ ಇಲಾಖೆಗೆ ಸಚಿವರನ್ನಾಗಿ ನೇಮಕ ಮಾಡಿರುವ ಕ್ರಮ ಅಸಿಂಧುಗೊಳಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಈ ಕುರಿತಂತೆ ವಕೀಲ ಕೆ.ಬಿ.ವಿಜಯಕುಮಾರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠವು, ಅರ್ಜಿಯಲ್ಲಿ ಯಾವುದೇ ಮೆರಿಟ್‌ ಇಲ್ಲ. ಆನಂದ್‌ ಸಿಂಗ್‌ ಅವರಿಗೆ ಹಂಚಿಕೆ ಮಾಡಿರುವ ಅರಣ್ಯ ಖಾತೆ ರದ್ದುಗೊಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ವಾಸ್ತವಾಗಿ ಮುಖ್ಯ ಕಾರ್ಯದರ್ಶಿಗಳಿಗೆ ಅಂತಹ ಅಧಿಕಾರ ಇಲ್ಲ. ಹೀಗಾಗಿ, ಅರ್ಜಿ ಊರ್ಜಿತವಾಗುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆನಂದ್‌ ಸಿಂಗ್‌ ಕುಟುಂಬ ಗಣಿಗಾರಿಕೆಯಲ್ಲಿ ಭಾಗಿಯಾಗಿದೆ. ಸಚಿವರ ವಿರುದ್ಧ ಅರಣ್ಯ ಇಲಾಖೆಯೇ 16 ಪ್ರಕರಣಗಳು ದಾಖಲಿಸಿದ್ದು, ಅವು ರಾಜ್ಯ ಹೈಕೋರ್ಟ್‌ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ. ಆ ಬಗ್ಗೆ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಅರಣ್ಯ ಖಾತೆಯನ್ನು ಹಂಚಿಕೆ ಮಾಡಿ ಹೊರಡಿಸಿರುವ ಆದೇಶ ರದ್ದುಗೊಳಿಸಬೇಕು ಮತ್ತು ಅರಣ್ಯ ಸಚಿವರಾಗಿ ಯಾವುದೇ ಕಾರ್ಯನಿರ್ವಹಿಸದಂತೆ ತಡೆ ಹಿಡಿಯಬೇಕು ಎಂದು ಅರ್ಜಿದಾರರು ಕೋರಿದ್ದರು.