ಮೈಸೂರು [ಮಾ.02]:  ಕೆಪಿಸಿಸಿ ಅಧ್ಯಕ್ಷ ಗಾದಿ ವಿಚಾರವಾಗಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌, ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ, ಹೈಕಮಾಂಡ್‌ ಅಥವಾ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನೇ ಕೇಳಿ ಎಂದು ತಿಳಿಸಿದ್ದಾರೆ.

 ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ವಿಚಾರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ಕಾಂಗ್ರೆಸ್‌ ಕಾರ್ಯಕರ್ತ. ನಾನು ಕಾಂಗ್ರೆಸ್‌ ಕೆಲಸ ಮಾಡುತ್ತಿದ್ದೇನೆ. ಅಷ್ಟುಬಿಟ್ಟರೆ ನನಗೆ ಮತ್ತೇನು ಗೊತ್ತಿಲ್ಲ ಎಂದರು. ಇನ್ನು ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ವಿಚಾರವನ್ನು ಹೈಕಮಾಂಡ್‌ಗೆ ಅಥವಾ ನಮ್ಮ ಅಧ್ಯಕ್ಷರಾದ ದಿನೇಶ್‌ ಗುಂಡೂರಾವ್‌ ಅವರನ್ನು ಕೇಳಿ ಎಂದು ಹೇಳಿದರು.

ಮೂಲ, ಹೊಸಬ ಎಂಬುದಿಲ್ಲ:

ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರು ದೂರು ನೀಡಿದ್ದಾರೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಮೂಲ, ಹೊಸಬ ಎಂಬುದಿಲ್ಲ. ಇಲ್ಲಿ ಯಾರು ಕೂಡ ಬ್ರಾಂಡ್‌ ಇಲ್ಲ. ಅದರ ಹಣೆ ಪಟ್ಟಿಯನ್ನ ಮಾಧ್ಯಮದವರು ಮಾಡಿರೋದು. ರಾಜಕೀಯದಲ್ಲಿ ನಮ್ಮ ನೆರಳು ನಾವೇ ನಂಬುವುದಕ್ಕೆ ಆಗುವುದಿಲ್ಲ. 30 ರಿಂದ 40 ವರ್ಷ ಇದ್ದವರೂ ಬೇರೆ ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ. ಹೊಸಬರನ್ನು ಬೆಳೆಸುತ್ತಿದ್ದಾರೆ. ಹಳಬರು ಕೂತಿದ್ದಾರೆ. ಹೀಗಾಗಿ ಮುಂದೆ ಏನಾಗಲಿದೆ ಎಂದು ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

-ಹೈಕಮಾಂಡ್‌ ಅಥವಾ ದಿನೇಶ್‌ ಗುಂಡೂರಾವ್‌ ಅವರನ್ನೇ ಕೇಳಿ