ಬೆಂಗಳೂರಿನಲ್ಲಿ ಎಲ್ಲೆಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಉಗ್ರರ ದಾಳಿ ಶಂಕೆ ಹಿನ್ನೆಲೆ ಬಿಗಿ ಭದ್ರತೆ ಕೈ ಗೊಳ್ಳಲಾಗಿದೆ. 

ಬೆಂಗಳೂರು [ಆ.19]: ರಾಜಧಾನಿಯಲ್ಲಿ ಹೈ ಅಲರ್ಟ್‌ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌, ರೈಲು ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಭಾನುವಾರವೂ ಕಟ್ಟೆಚ್ಚರ ವಹಿಸಲಾಗಿದೆ.

ಕೆಎಸ್‌ಆರ್‌ಟಿಸಿ ಮೈಸೂರು ರಸ್ತೆಯ ಸ್ಯಾಟ್‌ಲೆಟ್‌ ಬಸ್‌ ನಿಲ್ದಾಣ, ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣ, ಬಿಎಂಟಿಸಿಯ ಶಾಂತಿನಗರ, ಜಯನಗರ, ವಿಜಯನಗರ, ಕೆ.ಆರ್‌.ಪುರಂ, ಕೆಂಗೇರಿ ಸೇರಿದಂತೆ ಟಿಟಿಎಂಸಿಗಳಲ್ಲಿ ಪೊಲೀಸರ ಜತೆಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಭದ್ರತೆ ಮತ್ತು ಜಾಗೃತ ದಳದ ಸಿಬ್ಬಂದಿ ಪ್ರಯಾಣಿಕರ ತಪಾಸಣೆ ಬಿಗಿಗೊಳಿಸಿದ್ದರು. ಬಸ್‌ ನಿಲ್ದಾಣಗಳಿಂದ ನಿರ್ಗಮಿಸುವ ಹಾಗೂ ಆಗಮಿಸುವ ಪ್ರಯಾಣಿಕರ ಲಗೇಜುಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಪೊಲೀಸ್‌ ಇಲಾಖೆಯ ಶ್ವಾನದಳ, ಬಾಂಬ್‌ ನಿಷ್ಕಿ್ರಯ ದಳದ ತಂಡಗಳು ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂತರ್‌ ನಗರಗಳಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿಯ ಫ್ಲೈ ಬಸ್‌ಗಳು ಹಾಗೂ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಬಿಎಂಟಿಸಿಯ ವಾಯು ವಜ್ರ ಬಸ್‌ಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದರು. ಭದ್ರತಾ ಸಿಬ್ಬಂದಿ ಬಸ್‌ ನಿಲ್ದಾಣಗಳಲ್ಲೇ ಮೊಕ್ಕಾಂ ಹೂಡಿದ್ದರು.