ಬೆಂಗಳೂರು(ಜ.27): ನಗರದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ಧ್ವಜಾರೋಹಣದ ವೇಳೆ ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಟಿ ಮಾಡುವಾಗ ಮೈದಾನದಲ್ಲಿ ಧೂಳು ತುಂಬಿದ್ದಕ್ಕೆ ರಾಜ್ಯಪಾಲ ವಾಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. 

ರಾಜ್ಯಪಾಲ ವಜುಭಾಯಿ ವಾಲಾ ಧ್ವಜಾರೋಹಣ ಮಾಡುವ ವೇಳೆ ವಾಯುಸೇನೆಯ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಈ ವೇಳೆ ಹೆಲಿಕಾಪ್ಟರ್‌ ಕೊಂಚ ಕೆಳಭಾಗದಲ್ಲಿ ಹಾರಿದ ಪರಿಣಾಮ ವೇದಿಕೆ ಮುಂಭಾಗವೂ ಸೇರಿದಂತೆ ಬಹುತೇಕ ಮೈದಾನದಲ್ಲಿ ಧೂಳು ತುಂಬಿಕೊಂಡಿತು. ಹೆಲಿಕಾಪ್ಟರ್‌ ಹಾರಾಟದ ರಭಸಕ್ಕೆ ಸಾರ್ವಜನಿಕರ ಗ್ಯಾಲರಿ ಕಡೆಗೂ ಧೂಳು ಹಾರಿತು. ಈ ವೇಳೆ ಗಣ್ಯರಾದಿಯಾಗಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು. ಈ ಬಗ್ಗೆ ರಾಜ್ಯಪಾಲ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರು, ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಟಿಮಾಡಲು ಬರುವಾಗ ಆಗಸದಲ್ಲಿ ಪಕ್ಷಿಗಳು ಹಾರಾಡಿದ ಪರಿಣಾಮ ಪೈಲಟ್‌ ಹೆಲಿಕಾಪ್ಟರನ್ನು ಕೊಂಚ ಕೆಳಮಟ್ಟಕ್ಕೆ ಇಳಿಸಿದರು ಎನ್ನಲಾಗುತ್ತಿದೆ. ಹೀಗಾಗಿ ವಿವರಣೆ ಕೋರಿ ಸೇನೆಗೆ ಪತ್ರ ಬರೆಯಲಾಗುತ್ತದೆ. ಈ ಬಗ್ಗೆ ಸೇನಾ ಹಿರಿಯ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.