ಮಂಡ್ಯದಲ್ಲಿ ಮಹಾ ಮಳೆ : ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಬಂದ್‌

ರಾಜ್ಯದ ವಿವಿಧೆಡೆ ಶನಿವಾರವೂ ಮಳೆಯಾಗಿದ್ದು, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ವರುಣನ ಆರ್ಭಟ ಜೋರಾಗಿತ್ತು.

Heavy rains in Mandya  Bengaluru  Mysore highway blocked snr

ಮಂಡ್ಯ (ಅ.16): ರಾಜ್ಯದ ವಿವಿಧೆಡೆ ಶನಿವಾರವೂ ಮಳೆಯಾಗಿದ್ದು, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ವರುಣನ ಆರ್ಭಟ ಜೋರಾಗಿತ್ತು.

ಮಹಾಮಳೆಗೆ (Rain)  ಮಂಡ್ಯ (Mandya)  ಜಿಲ್ಲೆ ತತ್ತರಿಸಿದ್ದು, ಮಳೆಯಿಂದಾಗಿ ಮಂಡ್ಯ ತಾಲೂಕಿನ ಬೂದನೂರು ಕೆರೆ ಕೋಡಿ ಒಡೆದ ಪರಿಣಾಮ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿತ್ತು. ಹೀಗಾಗಿ, ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಮಧ್ಯಾಹ್ನದವರೆಗೆ ಬಂದ್‌ ಮಾಡಲಾಗಿತ್ತು. ಮಂಡ್ಯಜಿಲ್ಲೆ ಪಾಂಡವಪುರದ ಪ್ರಸಿದ್ಧ ಪ್ರವಾಸಿತಾಣ ಕೆರೆ ತೊಣ್ಣೂರಿನಲ್ಲಿ ಕೆರೆ ಭರ್ತಿಯಾಗಿ ನೀರು ಗ್ರಾಮಕ್ಕೆ ನುಗ್ಗಿದ್ದರಿಂದ ಜನ ಪರದಾಡುವಂತಾಯಿತು.

ಈ ಮಧ್ಯೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಇಡಗೂರು ಬಳಿ ಶುಕ್ರವಾರ ರಾತ್ರಿ ಕುಮದ್ವತಿ ನದಿ ಸೇತುವೆ ಮೇಲೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಕೂಲಿ ಕಾರ್ಮಿಕರಿಬ್ಬರು ಕೊಚ್ಚಿ ಹೋಗಿದ್ದು, ಆ ಪೈಕಿ ಗೌರಿಬಿದನೂರಿನ ಆನೂಡಿ ಗ್ರಾಮದ ಪ್ರಶಾಂತ್‌ ಎಂಬುವರನ್ನು ರಕ್ಷಿಸಲಾಗಿದೆ. ತುಮಕೂರು ಜಿಲ್ಲೆಯ ಶಿರಾ ಮೂಲದ ಬಸವರಾಜ್‌ ಎಂಬುವರ ಮೃತದೇಹ ಶನಿವಾರ ಬೆಳಗ್ಗೆ ಪತ್ತೆಯಾಗಿದೆ. ಮಳೆಯಿಂದಾಗಿ ಕನಕಪುರ ತಾಲೂಕಿನ ಹಾರೋಬಲೆ ಬಳಿಯಿರುವ ಅರ್ಕಾವತಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ನದಿ ಪಾತ್ರದ ಜನರು ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.

ಜನಜೀವನ ತತ್ತರ

ಶುಕ್ರವಾರ ರಾತ್ರಿ ಜಿಲ್ಲೆಯ ವಿವಿಧೆಡೆ ಸುರಿದ ಮಹಾಮಳೆಗೆ ಮಂಡ್ಯ ಜಿಲ್ಲೆಯ ಜನರು ತತ್ತರಿಸಿಹೋಗಿದ್ದಾರೆ. ಕೆರೆ-ಕಟ್ಟೆಗಳು ತುಂಬಿ ಕೋಡಿ ಹರಿದಿದ್ದರೆ, ಹಳ್ಳಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ನೂರಾರು ಎಕರೆ ಜಮೀನುಗಳು ಜಲಾವೃತಗೊಂಡು ಅಪಾರ ಹಾನಿ ಸಂಭವಿಸಿದೆ.

ತಾಲೂಕಿನ ಬೂದನೂರು ಕೆರೆ ಕೋಡಿ ಮತ್ತೆ ಒಡೆದಿದೆ. ಇದರಿಂದ ಅಪಾರ ಪ್ರಮಾಣದ ನೀರು ಅಕ್ಕ-ಪಕ್ಕದ ಜಮೀನುಗಳಿಗೆ ನುಗ್ಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡ ಪರಿಣಾಮ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಮಧ್ಯಾಹ್ನದವರೆಗೆ ಬಂದ್‌ ಆಗಿತ್ತು.

ಬೂದನೂರು ಕೆರೆ ಏರಿ ಶಿಥಿಲ:

ಕಳೆದ ಆಗಸ್ಟ್‌ 1ರಂದು ಸುರಿದ ಧಾರಾಕಾರ ಮಳೆಗೆ ಆ.2ರ ಮುಂಜಾನೆ ಬೂದನೂರು ಕೆರೆ ಒಡೆದು ಹೆದ್ದಾರಿ ಸೇರಿದಂತೆ ಅಕ್ಕ-ಪಕ್ಕದ ಜಮೀನುಗಳಿಗೂ ನೀರು ನುಗ್ಗಿತ್ತು. ನಂತರದಲ್ಲಿ ಕೋಡಿ ಒಡೆದ ಜಾಗಕ್ಕೆ ಮರಳಿನ ಮೂಟೆಗಳನ್ನು ಜೋಡಿಸಿ ಭದ್ರತೆ ಒದಗಿಸಲಾಗಿತ್ತು. ಇದೀಗ ಮತ್ತೊಂದೆಡೆ ಕೆರೆಯ ಕೋಡಿ ಒಡೆದು ಅನಾಹುತ ಸಂಭವಿಸಿದೆ. ಕೆರೆಯ ಏರಿ ಶಿಥಿಲವಾಗಿರುವುದು ಹಾಗೂ ಕೋಡಿ ಹರಿದ ನೀರು ಸರಾಗವಾಗಿ ಹರಿಯುವುದಕ್ಕೆ ವ್ಯವಸ್ಥೆಗಳಿಲ್ಲದಿರುವುದೇ ಪದೇ ಪದೇ ಏರಿ ಒಡೆಯಲು ಕಾರಣ ಎನ್ನುವುದು ಗ್ರಾಮಸ್ಥರು ಹೇಳುವ ಮಾತಾಗಿದೆ. ಕೋಡಿ ಹರಿದ ನೀರು ಜಮೀನುಗಳಿಗೆ ನುಗ್ಗಿ ಸುಮಾರು 25 ಎಕರೆಯಷ್ಟುಭತ್ತದ ಫಸಲು ನಾಶವಾಗಿದೆ.

ಮಧ್ಯಾಹ್ನದವರೆಗೆ ಹೆದ್ದಾರಿ ಸಂಚಾರ ಬಂದ್‌:

ನೀರು ಹೆದ್ದಾರಿಯಲ್ಲಿ ಹರಿಯುತ್ತಿದ್ದುದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಸಂಚಾರವನ್ನು ಮಧ್ಯಾಹ್ನದವರೆಗೆ ಸ್ಥಗಿತಗೊಳಿಸಲಾಗಿತ್ತು. ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳನ್ನು ಸಕ್ಕರೆ ವೃತ್ತದಲ್ಲೇ ಮಾರ್ಗ ಬದಲಿಸಿ ಬೈಪಾಸ್‌ ರಸ್ತೆಯ ಕೆಳಭಾಗದಲ್ಲಿರುವ ಸವೀರ್‍ಸ್‌ ರಸ್ತೆಯ ಮೂಲಕ ಉಮ್ಮಡಹಳ್ಳಿ-ಕೀಲಾರ-ಈಚಗೆರೆ-ಬೆಸಗರಹಳ್ಳಿ ಮಾರ್ಗವಾಗಿ ಮದ್ದೂರಿಗೆ ಕಳುಹಿಸಲಾಗುತ್ತಿದೆ. ಅದೇ ರೀತಿ ಬೆಂಗಳೂರಿನಿಂದ ಮೈಸೂರಿಗೆ ಬರುವ ವಾಹನಗಳನ್ನು ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಗ್ರಾಮೀಣ ಭಾಗಗಳ ರಸ್ತೆ ಸಂಪರ್ಕ ಕಡಿತ:

ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ನಗರದಿಂದ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನೀರು ಹರಿದಿದ್ದರಿಂದ ಹಾಗೂ ಸೇತುವೆ ರಸ್ತೆ ಕುಸಿದಿದ್ದರಿಂದ ಸಂಪರ್ಕ ಕಡಿತಗೊಂಡಿತ್ತು. ಮರಕಾಡುದೊಡ್ಡಿ ಮೂಲಕ ಗುತ್ತಲು ಸಂಪರ್ಕಿಸುವ ರಸ್ತೆ, ತಾವರೆಗೆರೆಯಿಂದ ಚೀರನಹಳ್ಳಿ-ಹಳುವಾಡಿ-ತಗ್ಗಹಳ್ಳಿ ಹೋಗುವ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದರಿಂದ ರಸ್ತೆ ಎಲ್ಲಿದೆ ಎನ್ನುವುದೇ ಕಾಣುತ್ತಿರಲಿಲ್ಲ. ಹೀಗಾಗಿ ಈ ಗ್ರಾಮಗಳಿಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ನಗರದ ಗುತ್ತಲು ರಸ್ತೆ ಮಾರ್ಗವಾಗಿ ಭೂತನಹೊಸೂರಿಗೆ ತೆರಳುವ ಮಾರ್ಗದಲ್ಲಿರುವ ಅಬೀಬ್‌ ಆಯಿಲ್‌ ಫ್ಯಾಕ್ಟರಿ ಬಳಿ ಭಾರೀ ಪ್ರಮಾಣದ ನೀರು ಹರಿದು ರಸ್ತೆ ಸೇತುವೆಯನ್ನೇ ಅರ್ಧಭಾಗ ಕೊರೆದಿತ್ತು. ಇದರಿಂದ ಕೆ.ಎಂ.ದೊಡ್ಡಿ-ಮಳವಳ್ಳಿ ರಸ್ತೆ ಸಂಪರ್ಕವನ್ನು ಬಂದ್‌ ಮಾಡಲಾಗಿತ್ತು.

ಕುಸಿಯುವ ಹಂತದಲ್ಲಿ ರಸ್ತೆ:

ಕಾರಸವಾಡಿ, ಬೇವಿನಹಳ್ಳಿ, ಕೊತ್ತತ್ತಿ, ಸಂತೆಕಸಲಗೆರೆ ಭಾಗದಲ್ಲಿ ಬಿದ್ದ ಮಳೆಯಿಂದ ಕೆರೆಗಳು ಕೋಡಿ ಬಿದ್ದು ಕಾಲುವೆಗಳ ಮೂಲಕ ಅಪಾರ ಪ್ರಮಾಣದ ನೀರು ಹರಿದುಬಂದಿದ್ದರಿಂದ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿತ್ತು. ಎರಡೂ ಭಾಗದಲ್ಲೂ ರಸ್ತೆ ನೀರಿನ ರಭಸಕ್ಕೆ ಕೊರಕಲು ಉಂಟಾಗಿ ಕುಸಿಯುವ ಹಂತದಲ್ಲಿದೆ. ಈ ಸೇತುವೆ ರಸ್ತೆಯ ಅಕ್ಕ-ಪಕ್ಕದ ಜಮೀನುಗಳು, ಭತ್ತದ ಗದ್ದೆ, ಕಬ್ಬಿನ ಗದ್ದೆ, ಬಾಳೆತೋಟಗಳಿಗೂ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಸುಮಾರು 50 ಎಕರೆಗೂ ಹೆಚ್ಚು ಜಮೀನು ಜಲಾವೃತವಾಗಿದೆ. ಕೆಲವೆಡೆ ವಿದ್ಯುತ್‌ ಕಂಬಗಳು ಧರೆಗುರುಳಿ ಹಾನಿ ಸಂಭವಿಸಿದೆ. ರಾತ್ರಿ ಸುರಿದ ಭಾರೀ ಮಳೆಗೆ ಗುತ್ತಲು ಕೆರೆ ಕೋಡಿ ಬಿದ್ದ ಪರಿಣಾಮ ಬಡಾವಣೆಯ 4 ಮನೆಗಳ ಗೋಡೆ ಕುಸಿತವಾಗಿದೆ.

ಮನೆಗಳಿಗೆ ನುಗ್ಗಿದ ನೀರು:

ರಾತ್ರಿಯಿಡೀ ಸುರಿದ ಮಳೆಯಿಂದ ಹಾಲಹಳ್ಳಿ ಕೆರೆ, ಮುಸ್ಲಿಂ ಕಾಲೋನಿ ನಡುವೆ ಬರುವ ರಾಜಕಾಲುವೆ ತುಂಬಿ ಒಳಚರಂಡಿ ಪೈಪುಗಳ ಮೂಲಕ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ ಸುಮಾರು 12 ರಿಂದ 1.30ರ ಸಮಯದಲ್ಲಿ ಮನೆಗಳಿಗೆ ಚರಂಡಿ ನೀರು ಹಾಗೂ ಮಳೆ ನೀರು ನುಗ್ಗಿದ್ದು ರಾತ್ರಿ ಮನೆಯಲ್ಲಿ ಮಕ್ಕಳು ಹಾಗೂ ಮಹಿಳೆಯರು ನಿದ್ದೆಗೆಟ್ಟು ಜೀವಭಯದಲ್ಲಿ ಬೆಳಗಿನವರೆಗೆ ಕಾಲ ಕಳೆದಿದ್ದಾರೆ. ರಾತ್ರಿ ಏಕಾಏಕಿ ಪೈಪುಗಳ ಮುಖಾಂತರ ನೀರು ನುಗ್ಗಿದ್ದರಿಂದ ಮನೆಯಲ್ಲಿರುವ ವಸ್ತುಗಳನ್ನು ರಕ್ಷಿಸಿಡಲು ಸಾಧ್ಯವಾಗಿಲ್ಲ. ಅಡುಗೆ ಸಾಮಗ್ರಿಗಳು, ಪಾತ್ರೆಗಳು, ಬಟ್ಟೆಗಳು ಎಲ್ಲವೂ ನೀರಿನಲ್ಲಿ ತೇಲುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳ್ಳಂಬೆಳಗ್ಗೆ ಎದ್ದು ಮನೆಯ ಮಾಲೀಕರು ಹಾಗೂ ಅಕ್ಕ-ಪಕ್ಕದವರು ಸೇರಿ ಮನೆಗಳನ್ನು ಶುಚಿ ಮಾಡಿದರು.

ಸತತ ಮಳೆಯಿಂದಾಗಿ ತುಮಕೂರಿನ ದೇವರಾಯಪಟ್ಟಣ ಕೆರೆ 35 ವರ್ಷಗಳ ನಂತರ ಕೋಡಿ ಬಿದ್ದಿದ್ದು, ಗ್ರಾಮದ ತೋಟಗಳು ಜಲಾವೃತಗೊಂಡಿವೆ. ಗುಬ್ಬಿ ತಾಲೂಕಿನಲ್ಲಿ ಮಳೆಗೆ 57 ಮನೆಗಳು ಕುಸಿದು ಬಿದ್ದಿವೆ.

ಎಲ್ಲೆಲ್ಲಿ ಎಷ್ಟುಮಳೆ?

ಮಂಡ್ಯದಲ್ಲಿ 17 ಸೆಂ.ಮೀ., ಮಂಡ್ಯ ಕೆವಿಕೆ 15, ಮೈಸೂರಿನ ಟಿ.ನರಸೀಪುರ, ಚಾಮರಾಜನಗರದ ಕೊಳ್ಳೆಗಾಲ ತಲಾ 9, ಬೀದರ್‌ನ ಮಂಠಾಳ, ಕಲಬುರಗಿಯ ಯಡ್ರಾಮಿ, ರಾಮನಗರದ ಕನಕಪುರ, ಕೋಲಾರದ ಮಾಲೂರಿನಲ್ಲಿ 8 ಸೆಂ.ಮೀ ಮಳೆಯಾಗಿದೆ.

Latest Videos
Follow Us:
Download App:
  • android
  • ios