ಬೆಂಗಳೂರು [ಸೆ.09]:  ಮಹಾರಾಷ್ಟ್ರ, ಬೆಳಗಾವಿಯ ಖಾನಾಪುರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಐದು ಜಿಲ್ಲೆಗಳ ಕೃಷ್ಣಾ, ಮಲಪ್ರಭಾ ನದಿ ಪಾತ್ರದ ಹಳ್ಳಿಗಳಲ್ಲಿ ನಡುಕ ಶುರುವಾಗಿದೆ. ಮಹಾರಾಷ್ಟ್ರದ ಡ್ಯಾಂಗಳಿಂದ ಕೃಷ್ಣೆಗೆ ಸರಿಸುಮಾರು 1.80 ಲಕ್ಷ ಕ್ಯುಸೆಕ್‌ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ, ಬೆಳಗಾವಿ ಜಿಲ್ಲೆ ವ್ಯಾಪ್ತಿಯ 70ಕ್ಕೂ ಹೆಚ್ಚು ಗ್ರಾಮಗಳಿಗೆ ಮತ್ತೆ ನೀರು ನುಗ್ಗಿದೆ. 23 ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ. ಗದಗದಲ್ಲೂ ಮಲಪ್ರಭಾ ಪ್ರವಾಹದಿಂದಾಗಿ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾದಾತಂಕ ಶುರುವಾಗಿದೆ. ಇನ್ನು ಲಿಂಗನಮಕ್ಕಿ, ಸುಪಾ, ಕದ್ರಾ, ಗೇರುಸೊಪ್ಪಾ ಡ್ಯಾಂಗಳಿಂದ ಹೊರಬಿಡುತ್ತಿರುವ ನೀರಿನಿಂದಾಗಿ ಉತ್ತರ ಕನ್ನಡದ ಕಾಳಿ, ಶರವಾತಿ ನದಿ ವ್ಯಾಪ್ತಿಯಲ್ಲಿ ಹಲವು ಮನೆಗಳು ಜಲಾವೃತವಾಗಿವೆ. ಏತನ್ಮಧ್ಯೆ, ಚಿಕ್ಕಮಗಳೂರಲ್ಲಿ ಕಳೆದ ಹಲವು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೂಡಿಗೆರೆಯಲ್ಲಿ ಮತ್ತೆಗುಡ್ಡ ಕುಸಿದು 2 ಎಕ್ರೆ ಕಾಫಿ ತೋಟಕ್ಕೆ ಹಾನಿಯಾಗಿದೆ. ರಾಜ್ಯದಲ್ಲಿ ಮಳೆಗೆ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ.

ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನವಿಲುತೀರ್ಥ ಡ್ಯಾಂನಿಂದ 22 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ಹರಿಬಿಡುತ್ತಿದ್ದು, ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕುಗಳ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಮುಂದುವರಿದಿದೆ. ನರಗುಂದ ತಾಲೂಕಿನ ಲಖಮಾಪುರದಲ್ಲಿ 8 ಮಂದಿ ಪ್ರವಾಹದಲ್ಲಿ ಸಿಕ್ಕಿಕೊಂಡಿದ್ದು, ರಕ್ಷಣೆಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 60ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಪರಿಸ್ಥಿತಿ ಬಿಗಡಾಯಿಸಿದರೆ ಮತ್ತಷ್ಟುಕುಟುಂಬಗಳ ಸ್ಥಳಾಂತರ ಅನಿವಾರ್ಯವಾಗಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಹಾರಾಷ್ಟ್ರ, ಖಾನಾಪುರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ತೀರದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 8 ಸೇತುವೆಗಳು ಮುಳುಗಡೆಯಾಗಿವೆæ. 60ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ. 3 ಎನ್‌ಡಿಆರ್‌ಎಫ್‌ ತಂಡ, 60ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು ಬಾಗಲಕೋಟೆಯಲ್ಲಿ 15 ಸೇತುವೆಗಳು ಮುಳುಗಡೆಯಾಗಿದ್ದು, 2 ಎನ್‌ಡಿಆರ್‌ಎಫ್‌ ತಂಡವನ್ನು ಕರೆಸಿಕೊಳ್ಳಲಾಗಿದೆ. ಜಮಖಂಡಿಯಲ್ಲಿ ಜಲಾವೃತವಾಗಿರುವ 6 ಗ್ರಾಮಗಳಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಮಹಾರಾಷ್ಟ್ರದಿಂದ ಮತ್ತೆ 2 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ಬಿಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನದಿಪಾತ್ರದ ಗ್ರಾಮಗಳ ನಿವಾಸಿಗಳಲ್ಲಿ ಮತ್ತೆ ನಡುಕ ಶುರುವಾಗಿದೆ.

ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಆಲಮಟ್ಟಿಡ್ಯಾಂಗೆ 1.83 ಲಕ್ಷ ಕ್ಯುಸೆಕ್‌ ಹೊರಹರಿವಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 2 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಇನ್ನು ಬಸವಸಾಗರ ಜಲಾಶಯಕ್ಕೆ 2.10 ಲಕ್ಷ ಒಳಹರಿವಿದ್ದು, 2.19 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ.

ಕಾಳಿ, ಶರಾವತಿ ಪ್ರವಾಹ: ಶರಾವತಿ, ಕಾಳಿ ನದಿ ವ್ಯಾಪ್ತಿಯ ಲಿಂಗನಮಕ್ಕಿ, ಕದ್ರಾ, ಗೇರುಸೊಪ್ಪ ಡ್ಯಾಂಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡುತ್ತಿದ್ದು, ಹಳೆ ದಾಂಡೇಲಿ, ಬೈಲಪಾರ, ಕೋಗಿಲಬನ ಮತ್ತಿತರ ಕಡೆ ನೀರು ನುಗ್ಗಿದೆ.

ಹಂಪಿ ಸ್ಮಾರಕ ಮತ್ತೆ ಮುಳುಗಡೆ: ತುಂಗಭದ್ರಾ ಡ್ಯಾಂನಿಂದ 1 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಹಂಪಿಯ ಅನೇಕ ಸ್ಮಾರಕಗಳು ಮುಳುಗಡೆಯಾಗಿವೆ. ಕಂಪ್ಲಿಯಿಂದ ಕೊಪ್ಪಳ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಮತ್ತೆ ಮಳುಗಡೆಯಾಗುವ ಆತಂಕ ನಿರ್ಮಾಣವಾಗಿದೆ.

ಮಲೆನಾಡಿನಲ್ಲಿ ಮಳೆ: ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರಿದಿದ್ದು, ಮೂಡಿಗೆರೆಯಲ್ಲಿ ಮತ್ತೆ ಭೂಕುಸಿತವಾಗಿದೆ. ಇಲ್ಲಿನ ಹನುಮನಹಳ್ಳಿ ಬಳಿ ಗುಡ್ಡ ಜರಿದು ಸುಮಾರು 2 ಎಕರೆ ಕಾಫಿ ತೋಟಕ್ಕೆ ಹಾನಿಯಾಗಿದೆ. ಚಿಕ್ಕಮಗಳೂರಲ್ಲಿ ಭದ್ರಾ ನದಿ ತುಂಬಿ ಹರಿಯುತ್ತಿದ್ದು, ಕಳಸ-ಹೊರನಾಡು ಸಂಪರ್ಕ ಕಡಿತ ಆತಂಕ ಶುರುವಾಗಿದೆ. ಉಳಿದಂತೆ ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಜೆಸಿಬಿ ಮೂಲಕ ಇಬ್ಬರ ರಕ್ಷಣೆ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಪಕ್ಕ ಹುಬ್ಬಳ್ಳಿ-ಸೊಲ್ಲಾಪುರ ರಸ್ತೆಯಲ್ಲಿ ಬೈಕ್‌ ಚಲಾಯಿಸಿಕೊಂಡು ಹೋಗುವಾದ ಪ್ರವಾಹದಲ್ಲಿ ಸಿಲುಕಿದ ಇಬ್ಬರು ಯುವಕರನ್ನು ಜೆಸಿಬಿ ಮೂಲಕ ರಕ್ಷಣೆ ಮಾಡಿದ ಘಟನೆ ಭಾನುವಾರ ನಡೆದಿದೆ. ಪ್ರವಾಹ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಆದರೂ ಕಲ್ಲಾಪುರದ ಯುವಕರಿಬ್ಬರು ಸಾಹಸ ಮಾಡಲು ಹೋಗಿ ಪ್ರವಾಹದಲ್ಲಿ ಕೊಚ್ಚಿಹೋಗುವ ಸ್ಥಿತಿಯಲ್ಲಿದ್ದರು. ತಕ್ಷಣ ಗ್ರಾಮಸ್ಥರು, ಅಧಿಕಾರಿಗಳು ಜೆಸಿಬಿ ಸಹಾಯದಿಂದ ರಕ್ಷಿಸಿದ್ದಾರೆ.

ಸುಪಾ ಡ್ಯಾಂ ಬಳಿಯ ರಸ್ತೆಯಲ್ಲಿ ಬಿರುಕು, ಆತಂಕ

ಸುಪಾ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಕೆಳದಂಡೆಯಲ್ಲಿರುವ ಕೆಪಿಸಿ ರಸ್ತೆ ಬಿರುಕು ಬಿಟ್ಟಿದ್ದು, ಗಾಳಿ ಸುದ್ದಿಗಳಿಂದಾಗಿ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿತ್ತು. ಆದರೆ, ರಸ್ತೆ ಬಿರುಕು ಬಿಟ್ಟಿದ್ದರಿಂದ ಡ್ಯಾಂಗೆ ಯಾವುದೇ ಆತಂಕ ಇಲ್ಲ, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸುಪಾ ವಿದ್ಯುದಾಗಾರದ ಮುಖ್ಯ ಎಂಜಿನಿಯರ್‌ ಟಿ.ಆರ್‌.ನಿಂಗಣ್ಣ ಸ್ಪಷ್ಟನೆ ನೀಡಿದ್ದಾರೆ.

ಯಾವ ಅಣೆಕಟ್ಟೆಯಿಂದ ಎಷ್ಟುನೀರು ಹೊರಕ್ಕೆ?

ಮಹಾರಾಷ್ಟ್ರ ಡ್ಯಾಂಗಳು-1.8 ಲಕ್ಷ ಕ್ಯುಸೆಕ್‌

ಆಲಮಟ್ಟಿ-2 ಲಕ್ಷ ಕ್ಯುಸೆಕ್‌

ಬಸವಸಾಗರ-2.19 ಲಕ್ಷ ಕ್ಯುಸೆಕ್‌

ತುಂಗಭದ್ರಾ-1 ಲಕ್ಷ ಕ್ಯುಸೆಕ್‌

70 ಗ್ರಾಮಗಳು ಜಲಾವೃತ

23 ಸೇತುವೆಗಳು ಮುಳುಗಡೆ

5 ಮಂದಿ ಮಳೆಗೆ ಬಲಿ