ಬೆಂಗಳೂರು (ಸೆ.13): ನಗರದಲ್ಲಿ ನಿರಂತವಾಗಿ ಮಳೆಯಾಗುತ್ತಿರುವುದರಿಂದ ಶನಿವಾರ ಸುರಿದ ಸಣ್ಣ ಮಳೆಗೂ ಬಾಪೂಜಿನಗರ ಸೇರಿದಂತೆ ವಿವಿಧ ಭಾಗದಲ್ಲಿ ಮಳೆ ನೀರು ಚರಂಡಿ ತುಂಬಿ ರಸ್ತೆಗೆ ಹರಿಯಿತು.

ಕಳೆದ ಒಂದು ವಾರದಿಂದ ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಶನಿವಾರವೂ ಮಳೆ ಮುಂದುವರೆದಿದ್ದು, ಪರಿಣಾಮ ಬಾಪೂಜಿನಗರದಲ್ಲಿ ಚರಂಡಿ ತುಂಬಿದ ಮಳೆ ನೀರು ರಸ್ತೆಗೆ ಹರಿಯಿತು. ಇದರಿಂದ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸಬೇಕಾಯಿತು. ಇನ್ನು ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿ ಮರ ಧರೆಗುರುಳಿದೆ.

ಉಳಿದಂತೆ ಓಕಳಿಪುರಂ, ಕೆ.ಆರ್‌.ವೃತ್ತ, ಆನಂದರಾವ್‌ ವೃತ್ತ, ಬಸವೇಶ್ವರ ವೃತ್ತ, ಶಿವಾನಂದ ವೃತ್ತ ಮತ್ತು ರೈಲ್ವೆ ಅಂಡರ್‌ ಪಾಸ್‌, ಮಲ್ಲೇಶ್ವರದ ಮಂತ್ರಿ ಮಾಲ್‌ ಮುಂಭಾಗ ರಸ್ತೆ ಮೇಲೆ ಮಳೆ ನೀರು ನಿಂತಿದ್ದು, ಸವಾರರು ತೊಂದರೆ ಅನುಭವಿಸಬೇಕಾಯಿತು.

ಇನ್ನು ಶನಿವಾರ ಇಡೀ ದಿನ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ರೂಪಗೊಂಡಿತ್ತು. ಮಧ್ಯಾಹ್ನ 2.30ರ ಸುಮಾರಿಗೆ ಬಿಸಿಲಿನ ವಾತಾರಣ ಕಂಡಿತಾರೂ ಮತ್ತೆ ಸೂರ್ಯ ಮೋಡದ ಮರೆಗೆ ಸರಿದ. ಸಂಜೆ ವೇಳೆ ನಗರದ ಹಲವು ಭಾಗದಲ್ಲಿ ಮಳೆಯಾಗಿದೆ.

ನಗರದಲ್ಲಿ ಶನಿವಾರ ಸರಾಸರಿ 6.63. ಮಿ.ಮೀ. ಮಳೆಯಾಗಿದೆ. ಮಾರುತಿ ಮಂದಿರದಲ್ಲಿ ಅತೀ ಹೆಚ್ಚು 25.5 ಮಿ.ಮೀ. ಮಳೆಯಾದ ವರದಿಯಾಗಿದೆ. ಇನ್ನು ಚಾಮರಾಜಪೇಟೆಯಲ್ಲಿ 25, ಸಂಪಂಗಿ ರಾಮನಗರ, ಜ್ಞಾನಭಾರತಿ 22, ವಿಶ್ವೇಶ್ವರಪುರ 21, ಅಗ್ರಹಾರ ದಾಸರಹಳ್ಳಿ , ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಬಸವನಗುಡಿ 20, ಲಕ್ಕಸಂದ್ರ 16, ಸಾರಕ್ಕಿ 15, ನಂದಿನಿಲೇಔಟ್‌ 10, ಹಂಪಿನಗರ, ಬೇಗೂರಲ್ಲಿ 8 ಮಿ.ಮೀ ಮಳೆಯಾಗಿದೆ.