ಬೆಂಗಳೂರು (ಸೆ.01):  ಕಳೆದ ಎಂಟತ್ತು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಭಾನುವಾರ ತಡರಾತ್ರಿ ಹಾಗೂ ಸೋಮವಾರ ರಾತ್ರಿ ಅಬ್ಬರಿಸಿದ. ಪರಿಣಾಮ ನಗರದ ಬಹುತೇಕ ರಸ್ತೆಗಳು, ಅಂಡರ್‌ ಪಾಸ್‌ಗಳು ಜಾಲವೃತಗೊಂಡು ವಾಹನ ಸವಾರರು ಪರದಾಡಿದರು.

ಭಾನುವಾರ ಏಕಾಏಕಿ ಸುರಿದ ಭಾರಿ ಮಳೆಯಿಂದಾಗಿ ಜಯನಗರದ ಬಸ್‌ ನಿಲ್ದಾಣ ಸಮೀಪ ಹಾಗೂ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿ ತಲಾ ಒಂದು ಮರ ಧರೆಗುರುಳಿವೆ. ಇನ್ನು ಕೆಲವಡೆ ರಾತ್ರಿ ಪೂರ್ತಿ ವಿದ್ಯುತ್‌ ಸ್ಥಗಿತವಾಗಿತ್ತು. ಬಿನ್ನಿಮಿಲ್‌ ಬಳಿ ಆಟೋ ಮೆಲೆ ಮರ ಬಿದ್ದು ಆಟೋ ಜಖಂ ಗೊಂಡಿದ್ದು, ಇಬ್ಬರಿಗೆ ಸಣ್ಣಪುಟ್ಟಗಾಯಗಳಾಗಿವೆ.

ಸಿಂಗನಾಯನಹಳ್ಳಿಯಲ್ಲಿ 23.5 ಮಿ.ಮೀ ಮಳೆ:

ಸೋಮವಾರ ರಾತ್ರಿ 9.30ರಿಂದ ಆರಂಭವಾದ ಮಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಈ ವೇಳೆ ಅತಿ ಹೆಚ್ಚು ಅಂದರೆ ಸಿಂಗನಾಯಕನಹಳ್ಳಿ 23.5 ಮಿ.ಮೀ ಮಳೆಯಾಗಿದೆ.

ಆಗಸ್ಟ್ ತಿಂಗಳಲ್ಲಿ ಸುರಿದ ದಾಖಲೆಯ ಮಳೆ

ಇನ್ನುಳಿದಂತೆ ಸಾತನೂರು 23, ಯಲಹಂಕ 16, ವನ್ನಾರಪೇಟೆ 11.5, ಜಕ್ಕೂರು 10.5, ಪುಲಕೇಶಿನಗರ 9.5, ವಿಶ್ವನಾಥ ನಾಗೇನಹಳ್ಳಿ 8.5, ಗುಟ್ಟಹಳ್ಳಿ 8, ವಿದ್ಯಾರಣ್ಯಪುರ 3.5, ಹೊಯ್ಸಳನಗರ 3, ಮಾರೇನಹಳ್ಳಿ, ಸೊಣ್ಣೇನಹಳ್ಳಿ, ಲಕ್ಕಸಂದ್ರ, ಅರಕೆರೆ ಮತ್ತು ಚಾಮರಾಜಪೇಟೆಯಲ್ಲಿ ತಲಾ 2.5 ಮಿ.ಮೀ. ನಷ್ಟುಮಳೆ ಬಿದ್ದಿದೆ. ನಗರದಲ್ಲಿ ಸರಾಸರಿ 2.26 ಮಿ.ಮೀ. ನಷ್ಟುಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಎರಡು ದಿನ (ಸೆ.1 ಮತ್ತು 2ರವರೆಗೆ ) ನಗರದ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಈ ವೇಳೆ ತಾಪಮಾನ ಗರಿಷ್ಠ 30 ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರ (ಕೆಸ್‌ಎನ್‌ಡಿಎಂಸಿ) ತಿಳಿಸಿದೆ.