ಬೆಂಗಳೂರು [ಅ.02]:  ನಗರದಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ಎಂಟಕ್ಕೂ ಹೆಚ್ಚು ಮರ ಧರೆಗುರುಳಿದ್ದು, ಟಿನ್‌ ಫ್ಯಾಕ್ಟರಿ ಮುಖ್ಯರಸ್ತೆ, ಹೆಬ್ಬಾಳ ಸೇರಿದಂತೆ ನಗರದ ವಿವಿಧೆಡೆ ರಸ್ತೆಯಲ್ಲಿ ಭಾರೀ ಪ್ರಮಾಣ ನೀರು ನಿಂತು ವಾಹನ ಸವಾರರು ಪರದಾಡಿದರು.

ಕೇರಳ ಮತ್ತು ತಮಿಳುನಾಡು ಭಾಗದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನಗರದಲ್ಲೂ ಕೆಲವೆಡೆ ಭಾರೀ ಪ್ರಮಾಣದ ಮಳೆ ಸುರಿದಿದೆ.

ಬಸವನಗುಡಿಯ ರಾಮಕೃಷ್ಣ ಆಶ್ರಮದ ಬಳಿ ಎರಡು ಮರ, ಕೋರಮಂಗಲದ ಜ್ಯೋತಿನಿವಾಸ ಕಾಲೇಜು ಬಳಿ ಮತ್ತು ಜೆ.ಪಿ.ನಗರ ಆರ್‌ಬಿಐ ಲೇಔಟ್‌ನಲ್ಲಿ ತಲಾ ಒಂದು ಮರ ಸೇರಿದಂತೆ ಒಟ್ಟು ಎಂಟಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಬಿದ್ದ ವರದಿಯಾಗಿದೆ. ಮನೆಗಳಿಗೆ ನೀರು ನುಗ್ಗಿದ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಟಿನ್‌ಫ್ಯಾಕ್ಟರಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಗಳು ಅಕ್ಷರಶಃ ಹೊಳೆಗಳಾಗಿ ರೂಪಗೊಂಡಿದ್ದವು. ನಗರದ ಕೇಂದ್ರ ಭಾಗದ ಶಿವಾನಂದ ವೃತ್ತ, ಓಕಳಿಪುರ ಅಂಡರ್‌ ಪಾಸ್‌, ಕೆ.ಆರ್‌.ಮಾರುಕಟ್ಟೆ, ಚಾಮರಾಜಪೇಟೆ, ಆನಂದ್‌ ರಾವ್‌ ವೃತ್ತ, ಕೆ.ಆರ್‌.ವೃತ್ತ, ನೃಪತುಂಗ ರಸ್ತೆ, ಮೆಜೆಸ್ಟಿಕ್‌, ಮಲ್ಲೇಶ್ವರಂ ಮಂತ್ರಿ ಮಾಲ್‌ ಮುಂಭಾಗ ರಸ್ತೆಯಲ್ಲಿ ನೀರು ನಿಂತು ಕೊಂಡಿತ್ತು. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.