ಬೆಂಗಳೂರು [ಆ.19]: ಕಳೆದ ಕೆಲವು ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದ ಹಾಗೂ ತುಂತುರು ಮಳೆಯಾಗುತ್ತಿದ್ದ ನಗರದಲ್ಲಿ ಶನಿವಾರ ರಾತ್ರಿ ತುಸು ಬಿರುಸಿನ ಮಳೆಯಾಗಿದೆ.

ನಗರದ ಹೃದಯ ಭಾಗವಾದ ಮೆಜೆಸ್ಟಿಕ್‌, ಶಿವಾನಂದ ವೃತ್ತ, ಓಕಳಿಪುರ, ರಾಜಾಜಿನಗರ, ಮಲ್ಲೇಶ್ವರ, ಎಂ.ಜಿ. ರಸ್ತೆ, ಶಿವಾಜಿನಗರ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಬೆಂಗಳೂರು ಪೂರ್ವ ವಲಯದ ಕೆ.ಆರ್‌.ಪುರ, ಮಹದೇವಪುರ, ಹಲಸೂರು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಬಸವನಗುಡಿ, ಚಾಮರಾಜಪೇಟೆ, ಬನಶಂಕರಿ, ರಾಜರಾಜೇಶ್ವರಿನಗರ, ವಿಜಯನಗರದ ಅಲ್ಲಲ್ಲಿ ಮಳೆಯಾಗಿದೆ.

ರಾತ್ರಿ 10.30ರ ಸುಮಾರಿಗೆ ಆರಂಭವಾದ ಮಳೆ ಸತತ ಒಂದು ಗಂಟೆ ಸುರಿಯಿತು. ಕೆ.ಆರ್‌.ಪುರ 9.5 ಮಿ.ಮೀ, ರಾಮಮೂರ್ತಿ ನಗರ 5.5 ಮಿ.ಮೀ, ಬಸವನಪುರ 5.5 ಮಿ.ಮೀ, ಬಿದರಹಳ್ಳಿ 12 ಮಿ.ಮೀ, ದೊಡ್ಡ ಗುಬ್ಬಿ 8ಮಿ.ಮೀ, ದೊಡ್ಡ ಬನಹಳ್ಳಿ 10 ಮಿ.ಮೀ, ಆವಲಹಳ್ಳಿ 7.5 ಮಿ.ಮೀ, ಮಂಡೂರು 9 ಮಿ.ಮೀ, ಸಂಪಂಗಿ ರಾಮನಗರ 3.3 ಮಿಮೀ ಮಳೆಯಾಗಿರುವ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಮಳೆಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶನಿವಾರ ರಾತ್ರಿಯಾಗಿದ್ದರಿಂದ ವಾರಾಂತ್ಯದಲ್ಲಿ ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದ ಜನರು ಮೆಜೆಸ್ಟಿಕ್‌ ಸೇರಿದಂತೆ ಜಾಲಹಳ್ಳಿ, ಶಾಂತಿನಗರ, ಮೈಸೂರು ರಸ್ತೆ, ತುಮಕೂರು ರಸ್ತೆ ಹಾಗೂ ಬಳ್ಳಾರಿ ರಸ್ತೆಯಲ್ಲಿ ಪ್ರಮಾಣಿಕರು ವಾಹನ ಸಂಚಾರ ದಟ್ಟಣೆ ಉಂಟಾಗಿ ಪರದಾಡಿದರು. ಕೆಲವೆಡೆ ರಸ್ತೆಗಳಲ್ಲಿ ನೀರು ತುಂಬಿ ಹರಿದಿದ್ದರಿಂದ ದ್ವಿಚಕ್ರ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದರು. ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಮತ್ತು ಆಸ್ತಿ ಪಾಸ್ತಿ ಹಾನಿಯಾಗಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.