ಬೆಂಗಳೂರು [ಜು.16]: ನಗರದ ಕೆಲವೆಡೆ ಸೋಮವಾರ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಬೇಕಾಯಿತು.

ಸೋಮವಾರ ಸಂಜೆ 7ರ ಸುಮಾರಿಗೆ ಬೆಂಗಳೂರಿನ ವಿವಿಧ ಭಾಗದಲ್ಲಿ ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಧಾರಕಾರವಾಗಿ ಮಳೆ ಸುರಿದಿದೆ. ಇದರಿಂದ ರಸ್ತೆ, ಅಂಡರ್‌ ಪಾಸ್‌ ಮತ್ತು ಪ್ಲೈಓವರ್‌ಗಳಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು. ಮಳೆಗೆ ಮರದ ಕೊಂಬೆ ಹಾಗೂ ಮನೆಗಳಿಗೆ ನೀರು ನುಗ್ಗಿದ ಬಗ್ಗೆ ದೂರು ಬಂದಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಸರಾಸರಿ 24 ಮಿ.ಮೀ ಮಳೆಯಾದ ವರದಿಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿರೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ. 

ಉಳಿದಂತೆ ಮಾದವಾರದಲ್ಲಿ 16 ಮಿ.ಮೀ ಮಳೆ ಆಗಿದೆ. ಮಾದನಾಯಕನಹಳ್ಳಿ 14.5, ದೊಡ್ಡ ತೂಗೂರು 14, ಚನ್ನೇನಹಳ್ಳಿ 9.5, ಹೆಬ್ಬಗುಡಿ 8.5, ಗಾಳಿ ಆಂಜನೇಯ ದೇವಸ್ಥಾನ 7, ಎಚ್‌.ಗೊಲ್ಲಹಳ್ಳಿ 4 ಆಗ್ರಹಾರ ದಾಸರಹಳ್ಳಿ 3.5 ಹಾಗೂ ಎಚ್‌ಎಎಲ್‌ ವಿಮಾನ ನಿಲ್ದಾಣ 3 ಮಿ.ಮೀ ಮಳೆಯಾದ ವರದಿ ಆಗಿದೆ.