ಬೆಂಗಳೂರು[ಸೆ.20]:  ಉತ್ತರ ಕರ್ನಾಟಕದ ಬಯಲು ಸೀಮೆಗಳ ಕೆಲಭಾಗಗಳಲ್ಲಿ ಬುಧವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆ ಸುರಿಯುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇದೇವೇಳೆ ರಾಯಚೂರು ಜಿಲ್ಲೆಯ ಎನ್‌ಆರ್‌ಬಿಸಿ 12ನೇ ಕಾಲುವೆ ಒಡೆದು ಆಸುಪಾಸಿನ ಹೊಲಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ಬೆಳೆಗಳಿಗೆ ಹಾನಿಯಾಗಿದೆ. ಜೊತೆಗೆ ದೇವದುರ್ಗ ಪಟ್ಟಣಕ್ಕೂ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ಮಸ್ಕಿ ತಾಲೂಕುಗಳಲ್ಲಿ ಮಂಗಳವಾರ ರಾತ್ರಿಯಿಂದ ಆರಂಭಗೊಂಡಿರುವ ಮಳೆಯು ಗುರುವಾರ ಮಧ್ಯಾಹ್ನದಿಂದ ರಾತ್ರಿವರೆಗೂ ಸುರಿದಿದ್ದು ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಧಾರಾಕಾರ ಮಳೆಯಿಂದಾಗಿ ರಾಯಚೂರು ತಾಲೂಕಿನ ಮಿಟ್ಟಿಮಲ್ಕಾಪುರ ಗ್ರಾಮದ ಸರ್ಕಾರಿ ಶಾಲೆಗೆ ನೀರು ನುಗ್ಗಿದೆ. ಮಸ್ಕಿ ಪಟ್ಟಣದ ಸರ್ಕಾರಿ ಹಳೆ ಪೌಢಶಾಲೆ ಆವರಣದಲ್ಲಿದ್ದ ಅಂಗನವಾಡಿ ಕೇಂದ್ರದೊಳಗೂ ಮಳೆ ನೀರು ನುಗ್ಗಿ ದವಸ ಧಾನ್ಯ ಹಾಳಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಳ್ಳಾರಿ ನಗರದಲ್ಲೂ ಸತತ ಐದಾರು ತಾಸುಗಳ ಕಾಲ ಸುರಿದ ಮಳೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೂವಿನಹಡಗಲಿ, ಸಿರುಗುಪ್ಪ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರೆ, ಸಂಡೂರು ತಾಲೂಕಿನಲ್ಲಿ ಸಾಧಾರಣ ಮಳೆ ಸುರಿದಿದೆ. ತಾಲೂಕಿನ ರಾರಾವಿ ಗ್ರಾಮದ ಹತ್ತಿರದ ಎಲ್ಲಮ್ಮನ ಹಳ್ಳದಲ್ಲಿ ಗುರುವಾರ ಬೆಳಗಿನ ಜಾವ ಎರಡು ಲಾರಿಗಳು ಆಯತಪ್ಪಿ ಸಿಲುಕಿದ್ದು, ಯಾವುದೇ ಅನಾಹುತವಾಗಿಲ್ಲ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಸುರಿದ ರಭಸದ ಮಳೆಗೆ ಪಟ್ಟಣದ ಕೆಲವು ಬಡಾವಣೆಗಳಲ್ಲಿರುವ ಚರಂಡಿ ನೀರು ತುಂಬಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಚರಂಡಿ ನುಗ್ಗಿದೆ.

ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸಾಮಾನ್ಯ ಮಳೆಯಾಗಿದ್ದರೆ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಜಿಲ್ಲೆಗಳ ಕೆಲವೆಡೆ ಜಿಟಿಜಿಟಿ ಮಳೆಯಾಗಿದೆ.