ಟಿ. ನರಸೀಪುರ [ಅ.03] : ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಕನ್ನಹಳ್ಳಿಯಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಆರಕ್ಕೂ ಅಧಿಕ ಮನೆಗಳ ಗೋಡೆ ಕುಸಿದಿದ್ದರೆ, ಹದಿಮೂರಕ್ಕೂ ಹೆಚ್ಚು ಮನೆಗಳು ಶಿಥಿಲಗೊಂಡಿವೆ. ಅಲ್ಲದೆ 25 ಎಕರೆಗೆ ಹೆಚ್ಚು ಪ್ರದೇಶದಲ್ಲಿನ ಬಿತ್ತನೆ ಮಾಡಲಾಗಿದ್ದ ಭತ್ತದ ಬೆಳೆ ಜಲಾವೃತವಾಗಿದೆ.

ತಾಲೂಕಿನಾದ್ಯಂತ ಸಿಡಿಲು ಸಹಿತ ರಾತ್ರಿಯಿಡೀ ಸುರಿದ ಭಾರಿ ಮಳೆ ಅವಾಂತರಕ್ಕೆ ಕಾರಣವಾಗಿದ್ದು, ಕನ್ನಹಳ್ಳಿಯಲ್ಲಿ ಅಪಾರ ಪ್ರಮಾಣದ ಆಸ್ತಿ ಮತ್ತು ಬೆಳೆ ನಾಶವಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಳೆ ನೆರೆ ಹಾವಳಿ ಸ್ವರೂಪವನ್ನು ತಾಳಿದ ಪರಿಣಾಮ ಹತ್ತೊಂಬತ್ತಕ್ಕೂ ಹೆಚ್ಚು ಕುಟುಂಬಗಳು ವಾಸದ ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.

ಕನ್ನಹಳ್ಳಿ ಗ್ರಾಮದಲ್ಲಿ ಮಳೆಯ ಆವಂತರಕ್ಕೆ ಸೂರು ಕಳೆದುಕೊಂಡು ಸಂತ್ರಸ್ತರಾದ ಕುಟುಂಬಗಳಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಆಶ್ರಯ ಕಲ್ಪಿಸಲಾಗಿದೆ. ವಾಸಕ್ಕಿದ್ದ ಮನೆಯನ್ನು ಕಳೆದುಕೊಂಡ ನಿವಾಸಿಗಳಿಗೆ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಪರಿಹಾರ ಕೇಂದ್ರ ತೆರೆದು ಕುಟುಂಬಗಳನ್ನು ತಾಲೂಕು ಆಡಳಿತ ಸ್ಥಳಾಂತರಿಸಿದೆ.

ತಹಸೀಲ್ದಾರ್‌ ಪಿ.ಎನ್‌. ನಾಗಪ್ರಶಾಂತ್‌, ಕಾವೇರಿ ನೀರಾವರಿ ನಿಗಮದ ಇಇ ಶಿವಮಾದಯ್ಯ, ಎಇಇ ಪಿ. ಲಕ್ಷ್ಮಣರಾವ್‌, ಎಇಗಳಾದ ಮಂಜುನಾಥ್‌, ರೇಣುಕಾಚಾರ್ಯ, ಸಹಾಯಕ ಕೃಷಿ ನಿರ್ದೇಶಕಿ ಸುಂದರಮ್ಮ, ಉಪ ತಹಸೀಲ್ದಾರ್‌ ನರಸಿಂಹಯ್ಯ, ಗ್ರಾಪಂ ಸದಸ್ಯ ಲಕ್ಷ್ಮಣ, ಮಾಜಿ ಅಧ್ಯಕ್ಷ ವಿರೇಶ್‌, ಮಾಜಿ ಸದಸ್ಯ ಕೆ.ಎಂ. ಶಿವಕುಮಾರ್‌, ಮುಖಂಡ ಪಾಪಣ್ಣ ಹಾಗೂ ಇತರರು ಇದ್ದರು.

ನಿವಾಸಿಗಳಿಗೆ ಸ್ಥೈರ್ಯ

ಘಟನೆ ವಿಚಾರ ತಿಳಿದು ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಶಾಸಕ ಎಂ. ಅಶ್ವಿನ್‌ ಕುಮಾರ್‌ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಮನೆ ಕಳೆದುಕೊಂಡು ಕಂಗಾಲಾದ ಕನ್ನಹಳ್ಳಿ ಗ್ರಾಮದ ನಿವಾಸಿಗಳಿಗೆ ಸ್ಥೈರ್ಯ ತುಂಬಿದರು. ಹಾನಿ ಪ್ರಮಾಣವನ್ನು ಅಂದಾಜಿಸಿ, ಸಂತ್ರಸ್ತ ಕುಟುಂಬಗಳಿಗೆ ತುರ್ತು ಕ್ರಮ ಕೈಗೊಂಡು ಪರಿಹಾರ ಕಲ್ಪಿಸಬೇಕು. ಪರ್ಯಾಯ ವ್ಯವಸ್ಥೆ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪರಿಶೀಲನೆ ನಂತರ ಶಾಸಕ ಎಂ. ಅಶ್ವಿನ್‌ಕುಮಾರ್‌ ಮಾತನಾಡಿ, ರಾತ್ರಿ ಅಪಾರ ಪ್ರಮಾಣದ ಮಳೆ ಧಾರಾಕಾರವಾಗಿ ಸುರಿದ ಪರಿಣಾಮ 19ಕ್ಕೂ ಹೆಚ್ಚು ಮನೆಗಳ ಗೋಡೆ ಕುಸಿದು ಬಿದ್ದಿದೆ. ಮನೆ ಕಳೆದುಕೊಂಡಂತ ಕುಟುಂಬಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕ್ರಮವಹಿಸಲು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಅಧಿಕಾರಿಗಳು ಕೂಡ ರಾತ್ರಿಯಿಂದಲೇ ಬೀಡುಬಿಟ್ಟಿದ್ದಾರೆ. ಮಳೆ ಹಾನಿಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.