ಬೆಂಗಳೂರು [ಆ.24]:  ಬೆಂಗಳೂರಿನ ಹಲವೆಡೆ ಸುರಿದ ಮಳೆಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಕೆಲ ಕಾಲ ಪರದಾಡಿದರು.

ನಗರದ ಕೇಂದ್ರ ಪ್ರದೇಶವಾದ ಮೆಜೆಸ್ಟಿಕ್‌, ಶಿವಾನಂದ ವೃತ್ತ, ಕೆ.ಜಿ.ರಸ್ತೆ, ಶೇಷಾದ್ರಿ ರಸ್ತೆ, ಕೆ.ಆರ್‌.ವೃತ್ತ, ಕಾರ್ಪೊರೇಷನ್‌ ಸರ್ಕಲ್‌ ಸೇರಿದಂತೆ ಹಲವೆಡೆ ಮಳೆಯಾಯಿತು. ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇತ್ತಾದರೂ ಸಂಜೆ ವೇಳೆಗೆ ಮಳೆ ಬಿದ್ದಿತು. ಕೆಲಸ ಕಾರ್ಯ ಮುಗಿಸಿ ಮನೆಗಳತ್ತ ಹೊರಟ್ಟಿದ್ದ ಪಾದಚಾರಿಗಳು ಹಾಗೂ ವಾಹನ ಸವಾರರು ಮಳೆಯಿಂದ ಮಾರ್ಗ ಮಧ್ಯೆ ಪರದಾಡಿದರು. ಬಸ್‌ ನಿಲ್ದಾಣ, ಅಂಗಡಿ ಮುಂಗಟ್ಟುಗಳು, ಮರಗಳ ಕೆಳಗೆ ನಿಂತು ಆಶ್ರಯ ಪಡೆದರು. ಅಲ್ಲದೆ, ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಕೆಲವು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಮಳೆಯ ನಡುವೆಯೂ ಸಂಚಾರ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದ ದೃಶ್ಯಗಳು ಕಾಣಸಿಕ್ಕವು.

ರಾಜಾನುಕುಂಟೆ 18 ಮಿ.ಮೀ., ಯಲಹಂಕ 11 ಮಿ.ಮೀ., ಅಟ್ಟೂರು 10.5 ಮಿ.ಮೀ., ಎಚ್‌ಎಎಲ್‌ ಏರ್‌ಪೋರ್ಟ್‌ 4.5 ಮಿ.ಮೀ, ರಾಮಮೂರ್ತಿನಗರ 4.5 ಮಿ.ಮೀ., ಕೆಂಗೇರಿ 3.5 ಮಿ.ಮೀ., ದಾಸನಪುರ 2.5 ಮಿ.ಮೀ., ಕೆ.ಜಿ.ಹಳ್ಳಿ, ಲಾಲ್‌ಬಾಗ್‌ 2 ಮಿ.ಮೀ., ಇಂದಿರಾನಗರ, ಕಾರ್ಪೊರೇಶನ್‌, ಅಗ್ರಹಾರ ದಾಸರಹಳ್ಳಿ 1.5 ಮಿ.ಮೀ, ಎಚ್‌ಬಿಆರ್‌ ಲೇಔಟ್‌ 1 ಮಿ.ಮೀ. ಸೇರಿದಂತೆ ಹಲವೆಡೆ ಮಳೆಯಾಯಿತು.