ಬೆಂಗಳೂರು (ಸೆ.08): ರಾಜ್ಯದ ಐದು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದಿಚೆಗೆ ಸಾಧಾರಣ ಮಳೆಯಾಗಿದ್ದು, ರಾಯಚೂರಿನಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ ಸೇತುವೆ ಮುಳುಗಡೆಯಾಗಿದೆ.

ರಾಯಚೂರಿನ ದೇವದುರ್ಗ ತಾಲೂಕಿನ ಖಾನಾಪುರದ ರೈತ ನಾಗಪ್ಪ(40) ಹಾಗೂ ಬಾಲಕ ವೆಂಕಟೇಶ(12) ಮೃತಪಟ್ಟಿದ್ದು, ಕುರಿ ಮರಿಯೂ ಸಾವನಪ್ಪಿದೆ. ಘಟನೆಯಲ್ಲಿ ಮತ್ತಿಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದಿನಿಂದ ರಾಜ್ಯದಲ್ಲಿ 3 ದಿನ ಭಾರಿ ಮಳೆ : ಎಲ್ಲೆಲ್ಲಿ..? ...

ಮಲಪ್ರಭ ಅಣೆಕಟ್ಟೆಯಲ್ಲಿ ನೀರಿನ ಹೆಚ್ಚಳವಾದರಿಂದ ಬೆಳಗಾವಿಯ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಹಳೆ ಸೇತುವೆ ಮತ್ತೆ ಮುಳಗಡೆಯಾಗಿದೆ. ಶಿವಮೊಗ್ಗ ನಗರದಲ್ಲಿ ಸುರಿದ ಭಾರೀ ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿದ ತೊಂದರೆಯುಂಟಾಗಿದೆ. ಅಲ್ಲದೇ ಬಸವನಗಂಗೂರಿನ ಕೆರೆಕೋಡಿ ಒಡೆದು ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಚಾಮರಾಜನಗರದ ಹನೂರು ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದ್ದು, ಧಾರವಾಡ, ಕೊಡಗಿನಲ್ಲಿ ಸಾಧಾರಣ ಮಳೆಯಾಗಿದೆ.

ಸಿಡಿಲಿಗೆ 3 ನವಿಲು ಬಲಿ

ಮೂಡುಬಿದಿರೆ: ಇಲ್ಲಿನ ಮೂಡುಕೊಣಾಜೆ ಗ್ರಾಮ ವ್ಯಾಪ್ತಿಯ ಏರೋಡಿ ಬೆಟ್ಟಎಣ್ಮಜೆಯಲ್ಲಿ ಭಾನುವಾರ ಸಿಡಿಲಿನ ಆಘಾತಕ್ಕೆ ಮರವೊಂದರದಲ್ಲಿದ್ದ ಮೂರು ನವಿಲುಗಳು ಬಲಿಯಾಗಿವೆ. ಈ ವೇಳೆ ಮರದಲ್ಲಿದ್ದ ನಾಲ್ಕು ನವಿಲುಗಳ ಪೈಕಿ ಒಂದು ಬಚಾವಾಗಿದ್ದು, ಒಂದು ಗಂಡು ಹಾಗೂ ಎರಡು ಹೆಣ್ಣು ನವಿಲು ಮೃತಪಟ್ಟಿವೆ. ಮರಣೋತ್ತರ ಪರೀಕ್ಷೆ ನವಿಲುಗಳ ದಹನ ಕಾರ್ಯ ನಡೆದಿದೆ.