ಬೆಂಗಳೂರು(ಅ.11): ಮುಂಗಾರು ಕೊನೆಗೊಳ್ಳುವ ದಿನಗಳು ಸಮೀಪಿಸುತ್ತಿದ್ದಂತೆ ನಗರದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಶನಿವಾರ ಸಹ ನಗರದ ಅನೇಕ ಕಡೆ ಧಾರಾಕಾರವಾಗಿ ಮಳೆ ಸುರಿದಿದೆ. ಗಾಳಿ, ಗುಡುಗಿನೊಂದಿಗೆ ಅಬ್ಬರಿಸಿದ ಮಳೆಯಿಂದಾಗಿ ಕೆಲವು ಕಡೆ ಮರಗಳು ಉರುಳಿ ಬಿದ್ದಿದ್ದರೆ, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಶನಿವಾರ ಸಂಜೆ 7.30ರ ನಂತರ ನಗರಾದ್ಯಂತ ಗಾಳಿ ಸಹಿತ ಧಾರಾಕಾರ ಮಳೆ ಬಿದ್ದಿದ್ದು, ಬೆಂಗಳೂರು ದಕ್ಷಿಣ ಭಾಗದಲ್ಲಿ ಅತೀ ಹೆಚ್ಚು ಮಳೆ ದಾಖಲಾಗಿದೆ. ಸಂಜೆಯ ನಂತರ ಸುರಿದ ಅಬ್ಬರದ ಮಳೆಯಿಂದಾಗಿ ರಸ್ತೆಗಳ ಮೇಲೆ ಚರಂಡಿ ನೀರು ಉಕ್ಕಿ ಹರಿದಿದ್ದು, ಸಂಚಾರ ಅಸ್ತವ್ಯಸ್ತವಾಯಿತು. ಸಂಜೆಯಾಗುತ್ತಲೇ ವ್ಯಾಪಾರಕ್ಕೆ ನಿಲ್ಲುವ ತಳ್ಳುಗಾಡಿಗಳ ಹಾಗೂ ರಸ್ತೆಬದಿ ವ್ಯಾಪಾರಸ್ಥರಿಗೆ ಸಾಕಷ್ಟುತೊಂದರೆ ಉಂಟಾಯಿತು.

ಒಂದು ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಯಿಂದಾಗಿ ಮೆಜೆಸ್ಟಿಕ್‌, ಕೆ.ಆರ್‌.ವೃತ್ತ, ಕೆ.ಆರ್‌. ಮಾರುಕಟ್ಟೆ, ವಿಜಯನಗರ, ರಾಜಾಜಿನಗರ, ಚಾಮರಾಜಪೇಟೆ, ಶಿವಾಜಿನಗರ, ಮೈಸೂರು ರಸ್ತೆ ಸೇರಿ ಅನೇಕ ಕಡೆಗಳಲ್ಲಿ ರಸ್ತೆಗಳು ಜಲಾವೃತವಾದವು. ವಾಹನ ಸವಾರರು ಪರದಾಡಿದರು. ಧಾರಾಕಾರ ಮಳೆಗೆ ರಾಜಭವನ ರಸ್ತೆಯಲ್ಲಿ ಒಂದು ಮರ, ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರ ಮಲ್ಲೇಶ್ವರ ನಿವಾಸದ ಮುಂದೆ ಹಾಗೂ ಶಿವಾಜಿನಗರದ ತಿಮ್ಮಯ್ಯ ರಸ್ತೆಯಲ್ಲಿ ತಲಾ ಒಂದೊಂದು ಮರದ ಕೊಂಬೆಗಳು ಧರೆಗುರುಳಿತು.

ರಾಯಚೂರು: ಸತತ ಮಳೆಯಿಂದ ಮನೆಗಳು ಕುಸಿತ, ಆತಂಕದಲ್ಲಿ ಜನತೆ

ಅಂಡರ್‌ಪಾಸ್‌ನಲ್ಲಿ ನೀರು:

ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಹಾಗೂ ಚರಂಡಿ ನೀರು ತುಂಬಿಕೊಂಡು ವಾಹನ ಸವಾರರು ತೊಂದರೆ ಅನುಭವಿಸಿದರು. ಇತ್ತೀಚೆಗಷ್ಟೆನೀರು ಸರಾಗವಾಗಿ ಹರಿದು ಹೋಗುವಂತೆ ಬಿಬಿಎಂಪಿ ಕ್ರಮ ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಧಾರಾಕಾರ ಮಳೆಗೆ ಮತ್ತೆ ಅಂಡರ್‌ ಪಾಸ್‌ನಲ್ಲಿ ಕೊಳಚೆ ನೀರು ತುಂಬಿಕೊಂಡು ಸಂಚಾರ ಅಸ್ತವ್ಯಸ್ತವಾಯಿತು. ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ತಿಳಿಸಿದೆ.

ಶುಕ್ರವಾರ ಇಡೀ ರಾತ್ರಿ ಮಳೆ

ಶುಕ್ರವಾರ ತಡರಾತ್ರಿಯಿಂದ ಶನಿವಾರ ಬೆಳಗ್ಗೆ ವರೆಗೂ ಅನೇಕ ಬಡಾವಣೆಗಳಲ್ಲಿ ಮಳೆ ಸುರಿಯಿತು. ಜೆ.ಸಿ ನಗರದ ಜಯಮಹಲ್‌, ಎಂಜಿ ರಸ್ತೆ ಮೆಟ್ರೋ ಬಳಿ, ಮಹದೇವಪುರ, ಗ್ರಾಪೈಟ್‌ ಇಂಡಿಯಾ ಲೇಔಟ್‌, ಐಟಿಎ ಲೇಔಟ್‌, ಎಇಸಿಎಸ್‌ಎಲ್‌ ಲೇಔಟ್‌, ಕುಂದಲಹಳ್ಳಿ ಹಾಗೂ ಆರ್‌.ಟಿ ನಗರದಲ್ಲಿ ತಲಾ ಒಂದೊಂದು ಮರ ನೆಲಕಚ್ಚಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ತಿಳಿಸಿದೆ.

ಬೆಂಗಳೂರು ಪೂರ್ವ ಭಾಗದ ಕಾಡುಗೋಡಿಯಲ್ಲಿ ಅತೀ ಹೆಚ್ಚು ಅಂದರೆ 138 ಮಿಮಿ ಮಳೆ ಆಗಿದೆ. ಇನ್ನು ಸಿಗೇಹಳ್ಳಿ 108, ಕೆ.ಆರ್‌.ಪುರಂ 69.5, ದೊಡ್ಡಬನಹಳ್ಳಿ 69, ಹೂಡಿ 58, ಬ್ಯಾಲಾಳು 55.5, ಮಾದೇವಪುರ ಗರುಡಾಚಾರ ಪಾಳ್ಯ 49.5, ಕೆ.ಜಿ ಹಳ್ಳಿ 48.5, ಅರಕೆರೆ 41, ಆರ್‌.ಆರ್‌.ಹೆಮ್ಮಿಗೆಪುರ 39, ಬೇಗೂರು 38.5, ಎಚ್‌ಎಸ್‌ಆರ್‌.ಬಡಾವಣೆ 35, ದೊಮ್ಮಲೂರು ಹಾಗೂ ಕಿತ್ತನಹಳ್ಳಿ ತಲಾ 34.5, ವಿದ್ಯಾಪೀಠ 32.5, ಕೆಂಗೆರಿ 31, ಆರ್‌.ಆರ್‌.ನಗರ (2) 29 ಮಿಮಿ ಮಳೆ ಬಿದ್ದಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

ಬಿದ್ದ ಮಳೆ ಪ್ರಮಾಣ

ರಾಜಮಹಲ್‌ ಗುಟ್ಟಹಳ್ಳಿಯಲ್ಲಿ ಅತೀ ಹೆಚ್ಚು ಅಂದರೆ 71 ಮಿ.ಮೀ ಮಳೆಯಾಗಿದೆ. ಉಳಿದಂತೆ ವಿಶ್ವನಾಥಶೆಟ್ಟಿಹಳ್ಳಿ 57.71 ದಯಾನಂದ ನಗರ 56, ಅಗ್ರಹಾರ ದಾಸರಹಳ್ಳಿ 48.5, ಲಕ್ಕಸಂದ್ರ 43, ಕೊಟ್ಟಿಗೆಪಾಳ್ಯ 42.5, ಮನೋರಾಯನಪಾಳ್ಯ 42, ನಾಗಪುರ 41.5, ಬಸವನಗುಡಿ ಮತ್ತು ಬ್ಯಾಟರಾಯನಪುರ ತಲಾ 41, ಕಾಟನ್‌ಪೇಟೆ, ದೊರೆಸಾನಿಪಾಳ್ಯ, ಸಂಪಂಗಿರಾಮನಗರ ಮತ್ತು ಮಾರಪ್ಪನಪಾಳ್ಯ ತಲಾ 38, ವಿದ್ಯಾಪೀಠ 37, ಎಚ್‌ಎಸ್‌ಆರ್‌ ಬಡಾವಣೆ 35, ಬಿಳೆಕಳ್ಳಿ 34.5, ಆರ್‌.ಆರ್‌.ನಗರ 33.5, ಚೊಕ್ಕಸಂದ್ರ ಹಾಗೂ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ತಲಾ 32.5, ವಿವಿಪುರಂ 32, ದೊಮ್ಮಲೂರು ಮತ್ತು ಕೆಂಗೇರಿ 29.5, ಹಂಪಿನಗರ 28.5 ಸೇರಿದಂತೆ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಒಟ್ಟಾರೆ ನಗರದಲ್ಲಿ ಶನಿವಾರ ಒಟ್ಟಾರೆ ಸರಾಸರಿ 19.82 ಮಿ.ಮೀ ಮಳೆಯಾಗಿದೆ.