ಅರಬ್ಬಿ ಸಮುದ್ರ, ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ| ಬೆಂಗಳೂರಲ್ಲಿ 3.31 ಮಿಮೀ. ಸರಾಸರಿ ಮಳೆ| ಮಳೆಯಿಂದ ಯಾವುದೇ ರೀತಿ ಹಾನಿ ಸಂಭವಿಸಿದ ಬಗ್ಗೆ ದೂರು ದಾಖಲಾಗಿಲ್ಲ|  

ಬೆಂಗಳೂರು(ಸೆ.20): ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸ್ವಲ್ಪ ಬಿಡುವು ನೀಡಿದ ಮಳೆ ಶನಿವಾರ ನಗರದ ಕೆಲವು ಭಾಗದಲ್ಲಿ ಧಾರಾಕಾರವಾಗಿ ಸುರಿದಿದೆ.

ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈಸುಳಿಗಾಳಿ ಪರಿಣಾಮ ನಗರ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿದೆ. ಶನಿವಾರ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಕಂಡು ಬಂದಿತ್ತಾರೂ ಸಂಜೆಯ ವೇಳೆ ಕೆಲ ಹೊತ್ತು ನಗರದಲ್ಲಿ ವ್ಯಾಪಕವಾಗಿ ಮಳೆ ಸುರಿಯಿತು.

ಮುಂದಿನ ವಾರ ಭಾರೀ ಮಳೆ ಸಾಧ್ಯತೆ: ರೆಡ್‌ ಅಲರ್ಟ್‌ ಘೋಷಣೆ

ವಿಜಯನಗರ, ರಾಜಾಜಿನಗರ, ಜಯನಗರ, ಚಾಮರಾಜಪೇಟೆ, ಕೆ.ಆರ್‌.ಮಾರುಕಟ್ಟೆ, ಚಾಮರಾಜಪೇಟೆ, ಶಿವಾನಂದ ರಸ್ತೆ, ಮೆಜೆಸ್ಟಿಕ್‌, ಹೆಬ್ಬಾಳ, ಯಲಹಂಕ, ಮೈಸೂರು ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಸುರಿಯಿತು. ಮಳೆಯಿಂದ ಕೆ.ಆರ್‌.ರಸ್ತೆ, ಶಿವಾನಂದ ವೃತ್ತದ ರಸ್ತೆ, ಆನಂದರಾವ್‌ ವೃತ್ತ, ಬೊಮ್ಮನಹಳ್ಳಿ ಸೇರಿದಂತೆ ಕೆಲವೆಡೆ ರಸ್ತೆಗಳ ಮೇಲೆ ನೀರು ನಿಂತರೆ, ಮತ್ತೆ ಕೆಲವು ರಸ್ತೆಗಳ ಮೆಲೆ ಒಳಚರಂಡಿ ನೀರು ತುಂಬಿ ಹರಿಯಿತು. ಇದರಿಂದ ವಾಹನ ಸಂಚಾರ, ರಸ್ತೆ ಬದಿ ವ್ಯಾಪಾರಕ್ಕೆ ಕಿರಿ ಕಿರಿ ಉಂಟಾಯಿತು. ಮಳೆಯಿಂದ ಯಾವುದೇ ರೀತಿ ಹಾನಿ ಸಂಭವಿಸಿದ ಬಗ್ಗೆ ದೂರು ದಾಖಲಾಗಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಕೇಂದ್ರ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವಿಜ್ಞಾನ ನಗರದಲ್ಲಿ 22.5 ಮಿ.ಮೀ: 

ನಗರದಲ್ಲಿ ಶನಿವಾರ ಸರಾಸರಿ 3.31 ಮಿ.ಮೀ. ಮಳೆಯಾಗಿದೆ. ವಿಜ್ಞಾನ ನಗರದಲ್ಲಿ ಅತಿ ಹೆಚ್ಚು 22.5 ಮಿ.ಮಿ ಮಳೆಯಾಗಿದೆ. ಉಳಿದಂತೆ ದಯಾನಂದ ನಗರ 19 ಮಿ.ಮೀ., ಅಗ್ರಹಾರ ದಾಸರಹಳ್ಳಿ 17.5, ನಾಗಪುರ 16, ಬೆನ್ನಿಗಾನಹಳ್ಳಿ 15, ಹೊಯ್ಸಳ ನಗರ 12.5, ದೇವಸಂದ್ರ 12, ಮಾರುತಿ ಮಂದಿರ 11, ಹೂಡಿಯಲ್ಲಿ 10 ಮಿ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.