ರಾಣಿಬೆನ್ನೂರಲ್ಲಿ ಕುಂಭದ್ರೋಣ ಮಳೆಗೆ ಅನಾಹುತ ಸೃಷ್ಟಿ
* ನಗರ, ಗ್ರಾಮೀಣ ಭಾಗದಲ್ಲಿ ಕೆಲ ಪ್ರದೇಶಗಳು ಜಲಾವೃತ
* ಕೆರೆ ಭರ್ತಿಯಾಗಿ ಮನೆಗಳಿಗೆ ನುಗ್ಗಿದ ನೀರು
* ಭಾರಿ ಗಾತ್ರದ ಮರವೊಂದು ಬಿದ್ದು ಸಂಚಾರಕ್ಕೆ ಅಡ್ಡಿ
ರಾಣಿಬೆನ್ನೂರು(ಮೇ.23): ನಗರ ಹಾಗೂ ತಾಲೂಕಿನ ಗ್ರಾಮೀಣ ಭಾಗದಲ್ಲಿ ಶುಕ್ರವಾರ ಸಂಜೆಯಿಂದ ರಾತ್ರಿ ವರೆಗೆ ಸುರಿದ ಕುಂಭದ್ರೋಣ ಮಳೆಗೆ ಹಲವಾರು ಪ್ರದೇಶಗಳು ಜಲಾವೃತಗೊಂಡು ಕೆಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಇಲ್ಲಿನ ಈಶ್ವರ ನಗರ, ಬನಶಂಕರಿ ನಗರಗಳಲ್ಲಿ ಮಳೆಯಿಂದಾಗಿ ಚರಂಡಿಗಳು ಭರ್ತಿಯಾಗಿ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಚಿದಂಬರ ನಗರ, ಎಸ್‌ಆರ್‌ಕೆ ಲೇಔಟ್‌ಗಳಲ್ಲಿನ ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಮೆಡ್ಲೇರಿ ರಸ್ತೆ ಗಂಗಾಜಲ ಚೌಡೇಶ್ವರಿ ದೇವಸ್ಥಾನದ ಬಳಿ ರಾಜ ಕಾಲುವೆ ತುಂಬಿ ರಸ್ತೆಯ ಮೇಲೆ ನೀರು ಹರಿಯಿತು. ಹಳೆ ಪಿ.ಬಿ. ರಸ್ತೆಯ ಟ್ರೆಂಡ್ ಶೋರೂಂ ಮುಂಭಾಗದಲ್ಲಿ ಭಾರಿ ಗಾತ್ರದ ಮರವೊಂದು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ನಗರಸಭೆ ಸಿಬ್ಬಂದಿ ಶನಿವಾರ ಜೆಸಿಬಿ ಯಂತ್ರದ ನೆರವಿನಿಂದ ಮರವನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.
ಭೀಕರವಾಗಿ ಅಪ್ಪಳಿಸೋ ಸೈಕ್ಲೋನ್ ಯಾಸ್ ಹೆಸರಿನ ಅರ್ಥ ಮಾತ್ರ ಸುಂದರ..!
ತಾಲೂಕಿನ ಹಲಗೇರಿ, ಕಮದೋಡ, ಮಾಗೋಡ ಕೆರೆಗಳು ಭರ್ತಿಯಾಗಿವೆ. ಮಾಗೋಡ ಗ್ರಾಮದಲ್ಲಿನ ಕೆರೆ ಭರ್ತಿಯಾಗಿ ನೀರು ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳೆಲ್ಲ ನೀರು ಪಾಲಾದ ಘಟನೆ ನಡೆಯಿತು. ಮಳೆಯಿಂದ ಹಾನಿಗಿಡಾದ ನಗರ ಹಾಗೂ ಗ್ರಾಮೀಣ ಭಾಗದ ಪ್ರದೇಶಗಳಿಗೆ ಶಾಸಕ ಅರುಣಕುಮಾರ ಪೂಜಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.