ಬೆಂಗಳೂರು [ಜು.09] : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಮಿಶ್ರ ಕಸ ತಮಗೆ ನೀಡುವಂತೆ ಸಕ್ಕರೆ ಕಾರ್ಖಾನೆಗಳಿಂದ ಭಾರೀ ಬೇಡಿಕೆ ಬರುತ್ತಿದೆ.

ಕಸ ವಿಲೇವಾರಿ, ಸಂಸ್ಕರಣೆ ಮತ್ತು ನಿರ್ವಹಣೆಗೆ ಪಾಲಿಕೆ ಪ್ರತಿವರ್ಷ ಒಂದು ಸಾವಿರ ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡುತ್ತಿದೆ. ಆದರೂ ವೈಜ್ಞಾನಿಕವಾಗಿ ಕಸ ವಿಲೇವಾರಿ ಸಾಧ್ಯವಾಗಿಲ್ಲ. ಹೀಗಾಗಿ ನಗರದ ಮಿಶ್ರಕಸ ಸಮಸ್ಯೆ ಪರಿಹರಿಸಲು ಬಿಬಿಎಂಪಿ ಈಗಾಗಲೇ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದೆ. 

ಜತೆಗೆ ಮಿಶ್ರ ಕಸ ನೀಡುವ ಸಾರ್ವಜನಿಕರಿಗೆ ಸೆಪ್ಟಂಬರ್‌ನಿಂದ 500 ರಿಂದ ಒಂದು ಸಾವಿರ ರು. ವರೆಗೆ ದಂಡ ವಿಧಿಸುವ ಮೂಲಕ ಈ ಸಮಸ್ಯೆ ನಿವಾರಣೆಗೆ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಸಕ್ಕರೆ ಕಾರ್ಖಾನೆ ಮಾಲಿಕರು ಪಾಲಿಕೆಗೆ ಯಾವುದೇ ಹೊರೆ ಆಗದಂತೆ ತಮ್ಮದೇ ವೆಚ್ಚದಲ್ಲಿ ನಗರದ ಮಿಶ್ರ ಕಸ ತೆಗೆದುಕೊಂಡು ಹೋಗುವುದಕ್ಕೆ ಮುಂದೆ ಬಂದಿದ್ದಾರೆ. ಆದರೆ, ಮಿಶ್ರಕಸವನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡುವುದಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಬೇಕಾಗಿದೆ.

ನಮಗೂ ಅನುಮತಿ ಕೊಡಿ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊಸ ನಿಯಮದ ಪ್ರಕಾರ ಸಿಮೆಂಟ್ ಕಾರ್ಖಾನೆಗಳು ಕಡ್ಡಾಯವಾಗಿ ಶೇಕಡ 5 ರಿಂದ 10 ರಷ್ಟು ಕಸದಿಂದ ಇಂಧನ ಉತ್ಪಾದಿಸುವ ಸಾಮರ್ಥ್ಯದ ತಂತ್ರಜ್ಞಾನ ಹೊಂದಿರಬೇಕು. ಅಲ್ಲದೇ 60 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಖಾನೆಗಳು ತಮ್ಮದೇ ವೆಚ್ಚದಲ್ಲಿ ತ್ಯಾಜ್ಯ ಪಡೆಯಬೇಕು. ಹಾಗಿದ್ದಲ್ಲಿ ಮಾತ್ರವೇ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಗಳಿಗೆ ಅನುಮತಿ ನೀಡುತ್ತದೆ. ಹೀಗಾಗಿ, ಕೆಲ ಕಾರ್ಖಾನೆಗಳು ಪಾಲಿಕೆಯ ಕೆಸಿಡಿಸಿ ಸೇರಿದಂತೆ ವಿವಿಧ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಲು ಸಾಧ್ಯವಾಗದ ತ್ಯಾಜ್ಯ ಪಡೆಯುತ್ತಿವೆ. ಅದೇ  ಮಾದರಿಯಲ್ಲಿ ಸಕ್ಕರೆ ಕಾರ್ಖಾನೆಗಳು ಸಹ ಮಿಶ್ರಕಸ ನೀಡುವಂತೆ ಪಾಲಿಕೆ ಮುಂದೆ ಬೇಡಿಕೆ ಇಟ್ಟಿವೆ. 

ಮಿಶ್ರ ಕಸಕ್ಕೆ ಡಿಮ್ಯಾಂಡ್: ಸಕ್ಕರೆ ಕಾರ್ಖಾನೆಗಳು ವರ್ಷದ ಮೂರ್ನಾಲ್ಕು ತಿಂಗಳು ಮಾತ್ರ ಕಾರ್ಯ ನಿರ್ವಹಿಸುತ್ತವೆ. ಉಳಿದ ಏಳು-ಎಂಟು ತಿಂಗಳು ಸ್ಥಗಿತಗೊಂಡಿರುತ್ತವೆ. ಈ ಅವಧಿಯಲ್ಲಿ ಉಚಿತವಾಗಿ ಸಿಗುವ ಮಿಶ್ರಕಸ ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದು ಎಂಬ ಕಾರಣಕ್ಕೆ ಸಕ್ಕರೆ ಕಾರ್ಖಾನೆ ಮಾಲಿಕರು ಪಾಲಿಕೆಗೆ ತ್ಯಾಜ್ಯ ನೀಡುವಂತೆ ಮನವಿ ಸಲ್ಲಿಸಿವೆ. 

ಈ ಸಂಬಂಧ ಎನ್‌ಜಿಟಿ ರಾಜ್ಯ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷರು ಸೋಮವಾರ ಉತ್ತರ ಕರ್ನಾಟಕ ಭಾಗದ ಸಕ್ಕರೆ ಕಾರ್ಖಾನೆ ಮಾಲಿಕರು, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಮಿಶ್ರಕಸವನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡುವುದರಿಂದ ಪರಿಸರದ ಮೇಲಾಗುವ ಪರಿಣಾಮದ ಕುರಿತು ಅಧ್ಯಯನ ಸಮಿತಿ ರಚಿಸಿ  15 ದಿನಗಳಲ್ಲಿ ವರದಿ ಸಲ್ಲಿಕೆಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಲಾಗಿದೆ.