ಶಿವಮೊಗ್ಗ ಸ್ಫೋಟದಲ್ಲಿ ಮೃತರಿಬ್ಬರ ಕಣ್ಣೀರ ಕಥೆ ಇದು : ತುಂಬು ಗರ್ಭಿಣಿ ಪತ್ನಿ ತೊರೆದು ಹೋದ
ಶಿವಮೊಗ್ಗದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಕಾರ್ಮಿಕರ ಕಣ್ಣಿರ ಕಥೆ ಇದೆ. ಅಲ್ಲಿ ಮೃತಪಟ್ಟ ಒಬ್ಬೊಬ್ಬರದ್ದು ಒಂದೊಂದು ನೋವಿನ ದುರಂತ ಅಂತ್ಯ. ಇಬ್ಬರ ಗುರುತು ಸಿಕ್ಕಿದ್ದು ಇಬ್ಬರದ್ದು ಕಡು ಕಷ್ಟದ ಜೀವನವೇ ಆಗಿತ್ತು.
ಭದ್ರಾವತಿ (ಜ.23): ಹುಣಸೋಡು ಕಲ್ಲು ಗಣಿಗಾರಿಕೆ ಬಳಿ ಗುರುವಾರ ರಾತ್ರಿ ನಡೆದ ಸ್ಫೋಟ ಪ್ರಕರಣದಲ್ಲಿ ತಾಲೂಕಿನ ಅಂತರಗಂಗೆ ವ್ಯಾಪ್ತಿಯ ಇಬ್ಬರು ಮೃತಪಟ್ಟಿರುವ ಮಾಹಿತಿ ತಿಳಿದು ಬಂದಿದೆ.
ಒಟ್ಟು 5 ಮಂದಿ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ಪೈಕಿ ಅಂತರಗಂಗೆ ತಾಪಂ ವ್ಯಾಪ್ತಿಯ ಉಕ್ಕುಂದ ಕ್ರಾಸ್ ನಿವಾಸಿ ಮಂಜುನಾಥ(38) ಮತ್ತು ಬಸವನಗುಡಿ ಮೊದಲನೇ ಕ್ರಾಸ್ ನಿವಾಸಿ ಪ್ರವೀಣ್‌ಕುಮಾರ್(40) ಮೃತಪಟ್ಟಿದ್ದಾರೆ ಎನ್ನಲಾಗಿದೆ. ಉಳಿದ ಮೂವರು ಪುನೀತ್, ನಾಗರಾಜ್ ಮತ್ತು ಶಶಿಕುಮಾರ್ ಎನ್ನಲಾಗಿದ್ದರೂ, ಈ ಬಗ್ಗೆ ಇನ್ನೂ ಖಚಿತ ಮಾಹಿತಿ ತಿಳಿದು ಬಂದಿಲ್ಲ.
ಶಿವಮೊಗ್ಗ ಹುಣಸೋಡು ಸ್ಫೋಟಕ್ಕೆ ಜಿಲೆಟಿನ್ ಕಾರಣವಲ್ಲ, ಹೊರಬಿತ್ತು Exclusive ಮಾಹಿತಿ!
ಮಂಜುನಾಥ್ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ತಾಯಿ, ಪತ್ನಿ ಹಾಗೂ 4 ವರ್ಷದ ಹೆಣ್ಣು ಮಗು ಮತ್ತು 15 ವರ್ಷದ ಗಂಡು ಮಗು, 4 ಜನ ಸಹೋದರಿಯರೊಂದಿಗೆ ಸಂಸಾರ ಸರಿದೂಗಿಸುತ್ತಿದ್ದು, ಕುಟುಂಬಕ್ಕೆ ಅವರೇ ಆಧಾರವಾಗಿದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದದಂತೆ ಈತನ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಂಜುನಾಥ್ ಹುಣಸೋಡು ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗಿರುವ ಬಗ್ಗೆ ನಿಖರವಾದ ಮಾಹಿತಿ ಯಾರಿಗೂ ತಿಳಿದಿರಲಿಲ್ಲ.
ಸ್ಫೋಟದ ಮೂಲ ಶಿವಮೊಗ್ಗ ಅಲ್ಲ! ಬೆನ್ನತ್ತಿದಾಗ ಸಿಕ್ಕ ಬೆಚ್ಚಿಬೀಳಿಸುವ ರಹಸ್ಯ .
ನೋವಿನ ಮಡಿಲಲ್ಲಿ ತುಂಬು ಗರ್ಭಿಣಿ ಪತ್ನಿ:
ಮತ್ತೊಬ್ಬ ಮೃತರಾದ ಪ್ರವೀಣ್‌ಕುಮಾರ್ ಸಹ ತಾಯಿ, ಪತ್ನಿ ಹಾಗೂ 6 ವರ್ಷದ ಗಂಡು ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದು, ಪ್ರಸ್ತುತ ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಇದೇ 29ಕ್ಕೆ ಹೆರಿಗೆಗೆ ವೈದ್ಯರು ದಿನಾಂಕ ನೀಡಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಮೊದಲು ಹಾಲಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಪ್ರವೀಣ್ ಬಳಿಕ ಸ್ವಂತ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ಇತರ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಸದ್ಯ ಮೃತರ ಬಗ್ಗೆ ತನಿಖೆಯಿಂದಷ್ಟೇ ಇನ್ನೂ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಅಲ್ಲದೆ, ಹುಣಸೋಡು ಗ್ರಾಮಕ್ಕೆ ಕೆಲಸಕ್ಕೆ ತೆರಳಿದ್ದ 5 ಮಂದಿಯಲ್ಲಿ ಉಳಿದ 4 ಮಂದಿ ಈತನ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು ಎಂಬುದು ಸ್ಥಳೀಯರಿಂದ ತಿಳಿದ ಮಾಹಿತಿ. ಆದರೆ, ಗಲ್ಲು ಗಣಿಗಾರಿಕೆ ಕೆಲಸಕ್ಕೆ 5 ಮಂದಿ ಹೋಗಿರುವ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಕಲ್ಲು ಗಣಿಗಾರಿಕೆ ಕೆಲಸಕ್ಕೆ ಕರೆದುಕೊಂಡು ಹೋದವರು ಯಾರು? ಹೇಗೆ ಹೋದರು? ಎಷ್ಟುದಿನದಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.