ಸ್ಫೋಟ ಕೇಸ್ : ತಂದೆಗೆ ಮಗನ ಗುರುತು ಸಿಗಲಿಲ್ಲ!
ಚಿಕ್ಕಬಳ್ಳಾಪುರದಲ್ಲಿ ನಡೆದ ಕ್ವಾರಿ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದ ಕಣ್ಣೀರ ಕಥೆ ಇದು. ಅಕ್ರಮ ಸ್ಪೋಟದಿಂದಾಗಿ ಕುಟುಂಬಗಳು ಕಣ್ಣೀರಿಡುವಂತಾಗಿದೆ.
ಚಿಕ್ಕಬಳ್ಳಾಪುರ (ಫೆ.24): ‘ಐದು ವರ್ಷ ಪ್ರೀತಿಸಿ ಮದುವೆಯಾದರು. ಪೋನ್ ಮಾಡಿ ರಾತ್ರಿ ಚೆನ್ನಾಗಿಯೇ ಮಾತನಾಡಿದರು. ಅಲ್ಲಿ ಏನಾಯ್ತೋ ಏನೂ ಗೊತ್ತಿಲ್ಲ . ಬೆಳಗ್ಗೆ 4 ಗಂಟೆಗೆ ಸುಮಾರಿಗೆ ಘಟನೆ ಬಗ್ಗೆ ತಿಳಿದು ಇಲ್ಲಿಗೆ ಬಂದೆ’ ಎಂದು ಜಿಲೆಟಿನ್ ಸ್ಫೋಟದಲ್ಲಿ ಬಲಿಯಾದ ಸ್ಥಳೀಯ ಹಿರೇನಾಗವೇಲಿ ನಿವಾಸಿ ರಾಮು ಪತ್ನಿ ಲಕ್ಷ್ಮೇ ತನ್ನ ಪುಟ್ಟಕಂದನನ್ನು ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ ಅಲ್ಲಿದ್ದವರಿಗೆ ಸಂತೈಸಲು ಮಾತುಗಳೇ ಬರುತ್ತಿರಲಿಲ್ಲ.
ಅತ್ತ ದುರಂತದಲ್ಲಿ ಅಸುನಿಗೀದ ಅಭಿನಾಯಕ್, 11 ತಿಂಗಳ ಹಿಂದೆ ಮದುವೆ ಆಗಿದ್ದು 21 ದಿನದ ಮಗು ಇದೆ. ಕುಟುಂಬಕ್ಕೆ ಆಧಾರವಾಗಿದ್ದ ಅಭಿ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ಆದರೆ ವಿಧಿಯಾಟ ಬಲ್ಲವರಾರು ಎಂಬಂತೆ ಸ್ಫೋಟಕ ಸಾಮಗ್ರಿ ಸಾಗಿಸುವಾಗ ನಡೆದ ಸ್ಫೋಟದಲ್ಲಿ ಗುರುತೇ ಸಿಗದಂತೆ ಮೃತಪಟ್ಟಿದ್ದನ್ನು ನೋಡಿ ಮಗನನ್ನು ಸಾಕಿ ಬೆಳೆಸಿದ ತಂತೆ ಕೃಷ್ಣಮೂರ್ತಿ ಅಕ್ರಂದನಕ್ಕೆ ಸಮಾಧಾನ ಹೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.
ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ: ಗಂಭೀರ ಕಾರಣ ಕೊಟ್ಟ ಸಿದ್ದರಾಮಯ್ಯ
ಇದು ಜಿಲೆಟಿನ್ ಹಿರೇನಾಗವೇಲಿ ದುರಂತದಲ್ಲಿ ಮೃತರಾದ ಕ್ರಷರ್ ಹಾಗೂ ಕ್ವಾರಿ ಕೂಲಿ ಕಾರ್ಮಿಕರ ಹಿಂದಿನ ಕರುಣಾಜನಕ ಕಥೆಗಳ ಸ್ಯಾಂಪಲ್ ಅಷ್ಟೇ. ಮೃತರಾದ ಪ್ರತಿ ಕಾರ್ಮಿಕನ ಬದುಕಿನ ಹೋರಾಟ ತಿಳಿದರೆ ಎಂತಹವರಿಗೂ ಕಣ್ಣೀರು ತರಿಸುತ್ತದೆ. ದೂರದ ನೇಪಾಳದಿಂದ ಬಂದಿದ್ದ ಮಹೇಶ್ ಸಿಂಗ್ ಭೋರ, ಮ್ಯಾನೇಜರ್ ಕೆಲಸ ಮಾಡುತ್ತಿದ್ದ ಉಮಾಮಹೇಶ್ ಸಹ ನೆರೆಯ ಆಂಧ್ರದ ಕಾಕಿನಾಡದವರು. ಸ್ಫೋಟಕದ ರಭಸಕ್ಕೆ ಅವರೆಲ್ಲರ ಮೃತದೇಹಗಳು 150ರಿಂದ 200 ಮೀಟರ್ ದೂರದಲ್ಲಿ ಗುರುತೇ ಸಿಗದ ರೀತಿಯಲ್ಲಿ ಬಿದ್ದಿದ್ದವು. ಕೆಲವರ ದೇಹಗಳ ಅಂಗಾಂಗಳು ಗುರುತು ಸಿಗಲಾರದಷ್ಟುಮಾಂಸದ ಮುದ್ದೆಯಾಗಿ ಅಲ್ಲಲ್ಲಿ ಬಿದ್ದಿದ್ದವು.
ನಾವು ಪ್ರೀತಿಸಿ ಮದುವೆಯಾಗಿದ್ದವು. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಈಗ ನನ್ನ ಪತಿ ಇಲ್ಲ. ಸ್ಥಳದಲ್ಲಿ ಏನಾಯ್ತೋ ಏನೋ ಗೊತ್ತಾಗುತ್ತಿಲ್ಲ. ಅವರು ಕೆಲಸದ ಬಗ್ಗೆ ಎಂದೂ ನನ್ನ ಜೊತೆ ಮಾತನಾಡಿರಲಿಲ್ಲ. 24 ಗಂಟೆ ಕೆಲಸವಾದರೆ 24 ಗಂಟೆ ವಿಶ್ರಾಂತಿಯಲ್ಲಿ ಇರುತ್ತಿದ್ದರು.
-ಲಕ್ಷ್ಮೀ, ಮೃತ ರಾಮುವಿನ ಪತ್ನಿ