‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಎಂಬ ಮನೆ-ಮನೆ ಆರೋಗ್ಯ ಸಮೀಕ್ಷೆ ಈವರೆಗೆ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 57,528 ಮಂದಿ ಪತ್ತೆ
ಬೆಂಗಳೂರು(ಸೆ.07) : ಕೊರೋನಾ ಮೂರನೇ ಅಲೆ ತಡೆಗೆ ಸಹಕಾರಿಯಾಗುವಂತೆ ಪಾಲಿಕೆಯಿಂದ ಆಯ್ದ 54 ವಾರ್ಡ್‌ಗಳಲ್ಲಿ ಹಮ್ಮಿಕೊಂಡಿರುವ ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಎಂಬ ಮನೆ-ಮನೆ ಆರೋಗ್ಯ ಸಮೀಕ್ಷೆಯಲ್ಲಿ ಈವರೆಗೆ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 57,528 ಮಂದಿ ಪತ್ತೆಯಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 21 ದಿನಗಳಿಂದ ಈ ಮನೆ-ಮನೆ ಆರೋಗ್ಯ ಸಮೀಕ್ಷೆ ನಡೆಯುತ್ತಿದ್ದು, ಈವರೆಗೆ 2.48 ಲಕ್ಷ ಮನೆಗಳಿಗೆ ಪಾಲಿಕೆ ವೈದ್ಯರ ತಂಡ ಭೇಟಿ 7.11 ಲಕ್ಷ ಜನರ ಆರೋಗ್ಯದ ಮಾಹಿತಿ ಸಂಗ್ರಹಿಸಿದೆ. ಇದರಲ್ಲಿ 57,528 ಮಂದಿ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವುದು ತಿಳಿದು ಬಂದಿದೆ ಎಂದರು.
ಕರ್ನಾಟಕದಲ್ಲಿ ಕೊರೋನಾ ಏರಿಳಿತ, ಇಂದು (ಸೆ.7) ಭಾರೀ ಇಳಿಕೆ
ಆರೋಗ್ಯ ಮಾಹಿತಿ ಸಂಗ್ರಹಿಸಿರುವ 7.11 ಲಕ್ಷ ಮಂದಿ ಪೈಕಿ 4.39 ಲಕ್ಷ ಮಂದಿ ಮೊದಲ ಡೋಸ್ ಹಾಗೂ 1.67 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಮನೆ-ಮನೆ ಆರೋಗ್ಯ ಸಮೀಕ್ಷೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವೈದ್ಯರ ತಂಡಗಳಿಗೆ ಪಾಲಿಕೆಯ ಎಂಟು ವಲಯಗಳ ವ್ಯಾಪ್ತಿಯಲ್ಲಿ ಆಯ್ದ 54 ವಾರ್ಡ್‌ಗಳಲ್ಲಿ ದಿನಕ್ಕೆ ಕನಿಷ್ಠ 1 ಸಾವಿರದಿಂದ ಗರಿಷ್ಠ 3 ಸಾವಿರ ಮನೆಗಳಂತೆ ಒಟ್ಟು 2.76 ಲಕ್ಷ ಮನೆಗಳ ಗುರಿ ನಿಗದಿ ಪಡಿಸಲಾಗಿದೆ. ಈ ಪೈಕಿ ಕಳೆದ 21 ದಿನಗಳಲ್ಲಿ 2.48 ಲಕ್ಷ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿಸುವ ಮೂಲಕ ಶೇ.90ರಷ್ಟುಗುರಿ ಸಾಧಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುನ್ನೆಚ್ಚರಿಕಾ ಕ್ರಮಕ್ಕೆ ಸಹಕಾರಿ
ಆರೋಗ್ಯ ಸಮೀಕ್ಷೆಯಿಂದ ಕೋವಿಡ್ ಪಾಸಿಟಿವ್ ಇರುವವರಿಗೆ ಸಕಾಲಕ್ಕೆ ಚಿಕಿತ್ಸೆ ನೀಡಬಹುದು. ಮೂರನೇ ಅಲೆಗೂ ಮುನ್ನ ಲಸಿಕೆ ನೀಡುವುದು, ಔಷಧಿ ಸಂಗ್ರಹ, ಬೆಡ್ ವ್ಯವಸ್ಥೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೂರನೇ ಅಲೆ ನಿಯಂತ್ರಣಕ್ಕೆ ಟಾಸ್ಕ್ ಪೋರ್ಸ್ ರಚಿಸಲು ತೀರ್ಮಾನಿಸಲಾಗಿದೆ. ಅಂತೆಯೆ ಅಗತ್ಯ ಔಷಧಿ ಖರೀದಿಗೆ ಸಚಿವ ಸಂಪುಟ ಸಭೆಯಲ್ಲಿ 120 ಕೋಟಿ ರು. ಹಣ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
