ಮಗನಿಗಾಗಿ ನನ್ನನ್ನು ಬಲಿಕೊಟ್ಟು ಗೌಡರನ್ನೂ ಬಲಿ ಕೊಟ್ಟಎಚ್‌ಡಿಕೆ : ಎಲ್‌ಆರ್‌ಎಸ್
ಒಕ್ಕಲಿಗರ ಹೆಸರೇಳಿಕೊಂಡು ರಾಜಕೀಯವಾಗಿ ಮೇಲೆ ಬಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಒಕ್ಕಲಿಗರಿಗೇ ಚೂರಿ ಹಾಕುತ್ತಿದ್ದಾರೆ ಎಂದು ನಾನು ಹೇಳಿಲ್ಲ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಲೇವಡಿ ಮಾಡಿದರು.
ನಾಗಮಂಗಲ : ಒಕ್ಕಲಿಗರ ಹೆಸರೇಳಿಕೊಂಡು ರಾಜಕೀಯವಾಗಿ ಮೇಲೆ ಬಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಒಕ್ಕಲಿಗರಿಗೇ ಚೂರಿ ಹಾಕುತ್ತಿದ್ದಾರೆ ಎಂದು ನಾನು ಹೇಳಿಲ್ಲ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಲೇವಡಿ ಮಾಡಿದರು.
ಪಟ್ಟಣದ ಟಿ.ಬಿ.ಬಡಾವಣೆಯ ಉಪ್ಪಾರಹಳ್ಳಿ ಗೇಟ್ ಮುಂಭಾಗ ನೂತನವಾಗಿ ನಿರ್ಮಿಸಿರುವ ತಮ್ಮ ಗೃಹಪ್ರವೇಶದ ಸರಳ ಹಾಗೂ ಸಾಂಪ್ರದಾಯಿಕ ಪೂಜೆ ನೆರವೇರಿಸಿ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಬೆನ್ನಿಗೆ ನಾನು ಯಾವ ರೀತಿ ಚೂರಿ ಹಾಕಿದ್ದೇನೆ ಎಂಬುದರ ಬಗ್ಗೆ ಚರ್ಚೆಯಾಗಲಿ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರ ಮಗನಿಗೋಸ್ಕರ ನನ್ನನ್ನು ಬಲಿಕೊಟ್ಟಿದ್ದಲ್ಲದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನೂ ಬಲಿಕೊಟ್ಟರು. ಆ ಚುನಾವಣೆಯಲ್ಲಿ ನಾನು ಸೋಲನುಭವಿಸಿದ್ದು ಲೆಕ್ಕವಿಲ್ಲ. ಆದರೆ ದೇವೇಗೌಡರು ಸೋತಿದ್ದು ಮಾತ್ರ ನನಗೆ ಬಹಳ ನೋವಾಯಿತು ಎಂದರು.
ನಾನು ಚೂರಿ ಹಾಕಿಲ್ಲ
ಕುಮಾರಣ್ಣ ಅವರು ಬಹಳ ದೊಡ್ಡ ವ್ಯಕ್ತಿ. ಮಾಜಿ ಮುಖ್ಯಮಂತ್ರಿಗಳು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಏನೇ ಮಾತಾಡಿದರೂ ನಡೆಯುತ್ತದೆ. ಆದರೆ ಕಳೆದ ಮಾ.5ರಂದು ಬೆಂಗಳೂರಿನಲ್ಲಿ ನೆಲೆಸಿರುವ ತಾಲೂಕಿನ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ನನ್ನ ಬಗ್ಗೆ ಅಷ್ಟೊಂದು ಹಗುರವಾಗಿ ಮಾತನಾಡುವ ಅವಶ್ಯಕತೆಯಿರಲಿಲ್ಲ. ಶಿವರಾಮೇಗೌಡ ನನ್ನ ಬೆನ್ನಿಗೆ ಚೂರಿ ಹಾಕಿದರೆಂದು ಅದ್ಯಾವ ಭಾಷೆಯಲ್ಲಿ ಹೇಳಿದರೋ ಅಥವಾ ಮರೆತು ಹೇಳಿದರೋ ನನಗೆ ಗೊತ್ತಿಲ್ಲ. ಹಾಗಾಗಿ ಅವರ ಹೇಳಿಕೆಗೆ ನಾನು ಬೆಂಗಳೂರಿನಲ್ಲಿಯೇ ಮಾ.19ರಂದು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.
ಅಂದು ಬಂದ ಜನ ಇಂದು ತಂದ ಜನ
ಕಳೆದ ಎಂಎಲ್‌ಎ ಚುನಾವಣೆಯಲ್ಲಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಬಲಿಹಾಕಬೇಕೆನ್ನುವಾಗ ಜೆಡಿಎಸ್ ವರಿಷ್ಠರಿಗೆ ಈ ಶಿವರಾಮೇಗೌಡನ ಸಹಕಾರ ಬೇಕಿತ್ತು. ಕುಮಾರಸ್ವಾಮಿ ಅವರ ಮೇಲಿನ ಪ್ರೀತಿ ಮತ್ತು ನಾನು ಮಾಡಿದ ಸಂಘಟನೆಯಿಂದಾಗಿ ಕುಮಾರಪರ್ವಕ್ಕೆ ಅಷ್ಟೊಂದು ಜನ ಸೇರಿದ್ದರು. ಕುಮಾರಪರ್ವಕ್ಕೆ ಬಂದಷ್ಟುಜನ ಪಂಚರತ್ನಯಾತ್ರೆಗೆ ಬರಲಿಲ್ಲವೇಕೆ. ಅವತ್ತೆಲ್ಲಾ ಬಂದ ಜನ ಇವತ್ತು ತಂದ ಜನ ಇಷ್ಟೇ ವ್ಯತ್ಯಾಸ. ಕಳೆದ ಎಂಪಿ ಚುನಾವಣೆಯಲ್ಲಿ ಇಡೀ ಜಿಲ್ಲೆಯಲ್ಲಿ ತಾಲೂಕಿನ ಮತದಾರರು ಮಾತ್ರ ನಿಖಿಲ್‌ಕುಮಾರಸ್ವಾಮಿಗೆ 7ಸಾವಿರ ಅಧಿಕ ಮತ ಕೊಟ್ಟರು. ಇದಕ್ಕೆ ಶಿವರಾಮೇಗೌಡ ಕಾರಣ ಹೊರತು ಬೇರೆಯವರಲ್ಲ ಎಂದು ಮಾಜಿ ಸಿಎಂ ಎಚ್ಡಿಕೆಗೆ ಚಾಟಿ ಬೀಸಿದರು.
ಸುರೇಶ್‌ಗೌಡರ ಚಾಣಕ್ಷ್ಯತನ ಎಚ್ಡಿಕೆಗೆ ಗೊತ್ತಿಲ್ಲ
ಒಬ್ಬ ಹೆಣ್ಣು ಮಗಳ ಮೂಲಕ ಜೆಡಿಎಸ್ ಪಕ್ಷದಿಂದ ನನ್ನನ್ನು ಹೊರ ಹಾಕಿಸಿದಂತೆ ಅವಕಾಶ ಸಿಕ್ಕರೆ ಕುಮಾರಸ್ವಾಮಿ ಅವರನ್ನೇ ಶಾಸಕ ಸುರೇಶ್‌ಗೌಡ ಹೊರಹಾಕಿಸುತ್ತಾರೆ. ಅವರಲ್ಲಿ ಎಂತಹ ಚಾಣಕ್ಷ್ಯತನವಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಇನ್ನೂ ಗೊತ್ತಿಲ್ಲ ಎಂದ ಅವರು, ಕಳೆದ ಚುನಾವಣೆ ವೇಳೆ ಕೆ.ಆರ್.ಪೇಟೆಯ ನಾರಾಯಣಗೌಡ ಅವರಿಂತ ಮೊದಲೇ ಸುರೇಶ್‌ಗೌಡ ಬಿಜೆಪಿ ಸೇರಿಕೊಳ್ಳುತ್ತಿದ್ದರು. ಆದರೆ ವ್ಯವಹಾರ ಸರಿಯಾಗಿ ಕುದುರಲಿಲ್ಲವೆಂದು ಇಲ್ಲೇ ಉಳಿದುಕೊಂಡಿದ್ದಾರೆ. ಶಾಸಕ ಸುರೇಶ್‌ಗೌಡ ಮತ್ತು ಜಿಲ್ಲೆಯ ಮತ್ತೊಬ್ಬ ಮಹಾನ್ ನಾಯಕ ಸೇರಿ ಬಹಳ ವ್ಯವಸ್ಥಿತವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸ್ಪರ್ಧೆ ನಿಶ್ಚಿತ
ಮುಂಬರುವ ಚುನಾವಣೆಗೆ ನಾನು ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಯಾಗುವುದಂತೂ ನಿಶ್ಚಿತ. ಆದರೆ ಅಂತಿಮವಾಗಿ ಯಾವ ಪಕ್ಷ ಸೇರಬೇಕೆಂಬ ಲೆಕ್ಕಾಚಾರದಲ್ಲಿದ್ದೇನೆ. ಸಂಸದೆ ಸುಮಲತಾ ಅಂಬರೀಷ್ ಯಾವ ಪಕ್ಷ ಸೇರುತ್ತಾರೆಂಬುದು ನಿರ್ಧಾರವಾದ ಬಳಿಕ ನಾನು ಪಕ್ಷ ಸೇರುವ ಬಗ್ಗೆ ತೀರ್ಮಾನಿಸುತ್ತೇನೆ ಎಂದು ಬಿಜೆಪಿ ಪಕ್ಷ ಸೇರುವ ಕುರಿತು ಸುಳಿವು ನೀಡಿದರು.
ಹೊಸ ಮನೆಯ ಸಾಂಪ್ರದಾಯಿಕ ಪೂಜಾ ಸಮಾರಂಭದಲ್ಲಿ ಪತ್ನಿ ಸುಧಾಶಿವರಾಮೇಗೌಡ, ಪುತ್ರ ಚೇತನ್‌ಗೌಡ, ಸೊಸೆ ಶೃತಿ, ಪುತ್ರಿ ಭವ್ಯ ಎಸ್.ಗೌಡ, ಅಳಿಯ ರಾಜೀವ್ ರಾಥೋಡ್ ಸೇರಿದಂತೆ ಕುಟುಂಬಸ್ಥರು ಹಾಗೂ ಹಿತೈಷಿಗಳು ಪಾಲ್ಗೊಂಡಿದ್ದರು.