ಹಾಸನ (ಅ.06):  ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ. ಚುನಾವಣೆ ಸಂದರ್ಭದಲ್ಲೇ ಏಕೆ ದಾಳಿ ನಡೆಬೇಕು ಎಂದು ಮಾಜಿ ಸಚಿವರೂ ಆದ ಶಾಸಕ ಎಚ್‌.ಡಿ.ರೇವಣ್ಣ ಪ್ರಶ್ನೆ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಮನೆ ಹಾಗೂ ನನ್ನ ಆತ್ಮೀಯರ ಮನೆಗಳ ಮೇಲೂ ಈ ಹಿಂದೆ ಸಿಬಿಐ ದಾಳಿ ಮಾಡಿದ್ದರು. ದಾಳಿ ಮಾಡಿದ್ರೆ ನಾನು ಬೇಡ ಅನ್ನೋಕಾಗುತ್ತಾ. ಪಕ್ಷದವರನ್ನು ನೋಡಿಕೊಂಡು ದಾಳಿ ಮಾಡುತ್ತಾರೆ. ಚುನವಾಣೆ ಸಂದರ್ಭದಲ್ಲೇ ಯಾಕೆ ದಾಳಿ ಮಾಡುತ್ತಾರೆ? ಈ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವೂ ಇಲ್ಲ: ಡಿ.ಕೆ. ಶಿವಕುಮಾರ .

ಜೆಡಿಎಸ್‌ ಒಂದು ಪಕ್ಷವೇ ಅಲ್ಲ ಅನ್ನೋ ಹೆಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲು ನಾವೇನು ತಬ್ಬಿಕೊಳ್ಳಿ ಅಂದಿದ್ವಾ. ಅವರೆ ಬಂದು ನಮ್ಮನ್ನು ತಬ್ಬಿಕೊಂಡ್ರು, ಈಗ ಜೆಡಿಎಸ್‌ ಅಂದ್ರೆ ಭಯ. ಕುಮಾರಸ್ವಾಮಿ ಸರ್ಕಾರದಲ್ಲಿ ಕೆಲವರು ವ್ಯಾಪಾರ ಮಾಡಿಕೊಂಡು ಮನೆ ಸೇರಿದ್ದಾರೆ. ಯಾವ ಅಧಿ​ಕಾರಿಗಳು ಬಂದ್ರು ಕೆಲಸ ಮಾಡಿಸಿಕೊಳ್ಳುವ ಶಕ್ತಿ ನನಗಿದೆ. ಹಾಸನಕ್ಕೆ ಡ್ಯಾಮೇಜ್‌ ಅ​ಧಿಕಾರಿಗಳನ್ನು ತಂದು ಹಾಕಿದ್ದಾರೆ. ಯಾರು ದುಡ್ಡು ಹೊಡೆದು ಕೊಡುತ್ತಾರೋ ಅಂತವರನ್ನು ಹಾಕಿಕೊಂಡಿದ್ದಾರೆ. ಹಾಸನದಲ್ಲಿ ನಾನು ಕಟ್ಟಿರುವ ಬಿಲ್ಡಿಂಗ್‌ಗಳಿಗೆ ಮೊದಲು ಬಣ್ಣ ಹೊಡೆಸಿಕೊಳ್ಳಲಿ. ಬಿಜೆಪಿಯವರಿಗೆ ಜೆಡಿಎಸ್‌ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.

ಶಾಸಕ ಪ್ರೀತಂ ಗೌಡ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದ ರೇವಣ್ಣ, 25 ಗ್ರಾಮಗಳನ್ನು ನಗರಸಭೆಗೆ ಸೇರಿಸಿ ಮಹಾ ನಗರ ಪಾಲಿಕೆ ಮಾಡುತ್ತಿರುವುದಕ್ಕೆ ಸಂತೋಷ. ಕಾಂಗ್ರೆಸ್‌ನವರು ಪಕ್ಷಕ್ಕೆ ಅಭ್ಯರ್ಥಿ ಹುಡುಕುವುದಕ್ಕೆ ಆಗಿಲ್ಲ. ಅದಕ್ಕೆ ನಮ್ಮ ಪಕ್ಷದಲ್ಲಿದ್ದವರನ್ನು ಹುಡುಕಿದ್ದಾರೆ. ನಮ್ಮ ಪಕ್ಷದಲ್ಲಿದ್ದ ಹನುಮಂತರಾಯಪ್ಪ ಈಗ ಕಾಂಗ್ರೆಸ್‌ ಪಕ್ಷಕ್ಕೆ ಹೋಗಿದ್ದಾರೆ. ಇನ್ನು ಕಾಂಗ್ರೆಸ್‌ ಸೇರಿರುವ ಡಿ.ಕೆ.ರವಿ ಪತ್ನಿ ಬಗ್ಗೆ ನಾನೇಕೆ ಮಾತನಾಡಲಿ. ಅವರು ಸಮಯ ನೋಡಿ ಪಕ್ಷಕ್ಕೆ ಹೋಗಿದ್ದಾರೆ. ಹೆಣ್ಣು ಮಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.