ಭಾರೀ ಪೈಪೋಟಿಯಿಂದ ನಡೆದ ಚುನಾವಣೆಯಲ್ಲಿ  ಮಾಜಿ ಸಚಿವ ಎಚ್‌ ಡಿ ರೇವಣ್ಣ  ಬಾಮೈದಗೆ ಸೋಲುಂಟಾಗಿದೆ. ಜಿಟಿ ದೇವೇಗೌಡರ ಬಣವು ಭಾರೀ ಗೆಲುವು ಪಡೆದುಕೊಂಡಿದೆ. 

ಮೈಸೂರು (ಮಾ.17) : ಜೆಡಿಎಸ್‌ನ ಇಬ್ಬಣಗಳಿಗೆ ಪ್ರತಿಷ್ಠೆಯ ಕಣವಾಗಿದ್ದ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್‌) ಆಡಳಿತ ಮಂಡಳಿ ಚುನಾವಣೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರ ಬಣವು ಒಟ್ಟು 15 ರಲ್ಲಿ 12 ಸ್ಥಾನಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಶಾಸಕ ಸಾ.ರಾ. ಮಹೇಶ್‌ ಅವರ ಬಣದಿಂದ ಕೇವಲ 3 ಮಂದಿ ಮಾತ್ರ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಮೈಮುಲ್‌ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಸ್ವಪಕ್ಷದವರಿಗೇ ತಿರುಗೇಟು ನೀಡಿದ್ದಾರೆ.

ಬಿಎಸ್‌ವೈ - ಸಿದ್ದರಾಮಯ್ಯ ಸಹಕಾರ ಎಂದ ಜಿಟಿಡಿ : ಬಣಕ್ಕೆ ಭರ್ಜರಿ ಗೆಲುವು

ಹುಣಸೂರು ವಿಭಾಗದಲ್ಲಿ ಸ್ಪರ್ಧಿಸಿದ್ದ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಭಾಮೈದ ಕೆ.ಎಸ್‌. ಮಧುಚಂದ್ರ ಅವರು ಹೀನಾಯ ಸೋಲು ಅನುಭವಿಸಿದ್ದಾರೆ.

ತಮ್ಮ ಸೋವಿನ ಸಂಬಂಧ ಕೆ.ಎಸ್‌. ಮಧುಚಂದ್ರ ಮಾತನಾಡಿ, ನಾವು ಪೂರ್ವಭಾವಿ ಸಿದ್ಧತೆ ಇಲ್ಲದೆ ಚುನಾವಣೆ ಹೋಗಿದ್ದೇವು. ಈ ಚುನಾವಣೆ ನಡೆಯುತ್ತ ಇಲ್ಲವೊ ಎಂಬ ಅನುಮಾನ ಇತ್ತು. ನಾವು ಸರಿಯಾಗಿ ಸಂಘಟನೆ ಮಾಡಿದ್ದವು. ಜಿ.ಟಿ. ದೇವೆಗೌಡರು ಮೈಸೂರು ಸಹಕಾರಿ ಧುರೀಣ ಎಂಬುದು ಸಾಬೀತಾಗಿದೆ. ಇದು ಜೆಡಿಎಸ್‌ ಪಕ್ಷದ ಸೋಲಲ್ಲ. ಇದು ನನ್ನ ವೈಯುಕ್ತಿಕ ಸೋಲು. ರೇವಣ್ಣರವರು ನನ್ನ ಭಾವ ಇರಬಹುದು. ಪಕ್ಷದ ಮುಖಂಡರಾಗಿ ನನ್ನ ಪರವಾಗಿ ಪ್ರಚಾರ ಮಾಡಿದ್ದಾರೆ. ಹುಣಸೂರು ವಿಭಾಗದಲ್ಲಿ ನಮ್ಮ ಬಣದವರು ಯಾರು ಗೆದ್ದಿಲ್ಲ ಎಂದು ಹೇಳಿದರು.