ಬೆಂಗ್ಳೂರಿನ ಈ ರೋಡಲ್ಲಿ ಟೋಲ್ ಸಂಗ್ರಹಕ್ಕೆ ತಡೆ
ಬೆಂಗಳೂರಿನ ಈ ರೋಡಲ್ಲಿ ಟೋಲ್ ಸಂಗ್ರಹ ಮಾಡದಂತೆ ಹೈ ಕೋರ್ಟ್ ತಡೆ ನೀಡಿದೆ.
ಬೆಂಗಳೂರು [ಡಿ.10]: ರಸ್ತೆ ಕಾಮಗಾರಿ ಕುರಿತು ಸೂಕ್ತ ವಿವರ ನೀಡದ ಹಿನ್ನೆಲೆಯಲ್ಲಿ ಬೆಂಗಳೂರು- ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡದಂತೆ ಸರ್ಕಾರ ಮತ್ತು ಯಲಹಂಕ ಎಪಿ ಬಾರ್ಡರ್ ಟೋಲ್ ಹೈವೇಸ್ ಪ್ರೈವೇಟ್ ಲಿಮಿಟೆಡ್‌ಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಬೆಂಗಳೂರು- ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿದ್ದರೂ ರಾಜಾನುಕುಂಟೆ ಸಮೀಪದ ಟೋಲ್ ಕೇಂದ್ರದಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ದೊಡ್ಡಬಳ್ಳಾಪುರದ ವಕೀಲ ಜಿ.ವೆಂಕಟೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಬೆಂಗಳೂರು- ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯ ಕಾಮಗಾರಿ ಎಷ್ಟುಪ್ರಮಾಣದಲ್ಲಿ ಪೂರ್ಣಗೊಂಡಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಸ್ವತಂತ್ರ ಎಂಜಿನಿಯರ್ ನೇಮಿಸಬೇಕು. ಅವರು ಕಾಮಗಾರಿ ಪರಿಶೀಲಿಸಿ ನೀಡುವ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಕಳೆದ ವಿಚಾರಣೆ ವೇಳೆ ನಿರ್ದೇಶಿಸಿತ್ತು. ಅದರಂತೆ ಸರ್ಕಾರಿ ವಕೀಲರು ಸೋಮವಾರ ನ್ಯಾಯಪೀಠಕ್ಕೆ ವರದಿ ಸಲ್ಲಿಸಿ, ಬೆಂಗಳೂರು- ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯ ಕಾಮಗಾರಿ ಶೇ.75ರಷ್ಟುಪೂರ್ಣಗೊಂಡಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಗಡ್ಕರಿ ಬಹಿರಂಗ ಪಡಿಸಿದ್ರು ಟೋಲ್ ಸಂಗ್ರಹ ಹಣ; ಮೊತ್ತ ಕೇಳಿ ಬಿಚ್ಚಿ ಬಿದ್ದ ಜನ!...
ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲ ವೆಂಕಟೇಶ್ ಪಿ.ದಳವಾಯಿ, ಕಾಮಗಾರಿಯು ಶೇ.75ರಷ್ಟುಪೂರ್ಣಗೊಂಡಿಲ್ಲ. ಸರ್ಕಾರ ತಮಗೆ ಬೇಕಾದವರನ್ನು ನೇಮಿಸಿಕೊಂಡು ಶೇ.75ರಷ್ಟುಕಾಮಗಾರಿ ಪೂರ್ಣಗೊಂಡಿದೆ ಎಂಬುದಾಗಿ ತಪ್ಪು ಮಾಹಿತಿ ನೀಡುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಸರ್ಕಾರದ ಪ್ರಮಾಣ ಪತ್ರವೂ ಸೂಕ್ತ ವಿವರ ನೀಡದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಬೆಂಗಳೂರು- ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡಬಾರದು ಎಂದು ಸರ್ಕಾರ ಮತ್ತು ಟೋಲ್ ಕೇಂದ್ರ ನಿರ್ವಹಿಸುತ್ತಿರುವ ಯಲಹಂಕ ಎಪಿ ಬಾರ್ಡರ್ ಟೋಲ್ ಹೈವೇಸ್ ಪ್ರೈವೇಟ್ ಲಿಮಿಟೆಡ್‌ಗೆ ಮಧ್ಯಂತರ ಆದೇಶ ಮಾಡಿತು.