Asianet Suvarna News Asianet Suvarna News

ಬೆಳೆವಿಮೆ ಕಂತು ಕಟ್ಟಿ ಯೊಜನೆಯಲ್ಲಿ ಪಾಲ್ಗೊಳ್ಳುವಂತೆ ಉದಾಸಿ ಮನವಿ

* ರೈತರು ಕೊನೆ ದಿನಗಳ ವರೆಗೆ ಕಾಯದೆ ಕೂಡಲೇ ಕಂತು ಕಟ್ಟಿ
*  ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ತೋಟಗಾರಿಕಾ ಅಧಿಕಾರಿ ಸಂಪರ್ಕಿಸಿ
* ವಿನಾ ಕಾರಣ ಅಲೆದಾಡಿಸದಂತೆ ಬ್ಯಾಂಕ್‌ ಸಿಬ್ಬಂದಿ ಸಹಕರಿಸುವಂತೆ ಸೂಚನೆ 

Haveri Gadag MP Shivkumar Udasi Talks Over Crop Insurance grg
Author
Bengaluru, First Published Jun 12, 2021, 1:16 PM IST

ಹಾನಗಲ್ಲ(ಜೂ.12): ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಪರಿಷ್ಕೃತ ಹವಾಮಾನ ಆಧಾರಿತ ಬೆಳೆವಿಮೆ ಅಡಿಯಲ್ಲಿ ತಾಲೂಕಿನ ಅಡಕೆ, ಶುಂಠಿ, ಹಸಿಮೆಣಸಿನಕಾಯಿ ಬೆಳೆಗಾರರು, ಬೆಳೆಹಾನಿ ಪರಿಹಾರ ಪಡೆಯಲು, ವಿಮಾ ಕಂತನ್ನು ಕಟ್ಟಲು ಜೂನ್‌ 30 ಅಂತಿಮ ದಿನವಾಗಿದೆ. ರೈತರು ಕೊನೆ ದಿನಗಳ ವರೆಗೆ ಕಾಯದೆ ಕೂಡಲೇ ಕಂತನ್ನು ಕಟ್ಟಿ ಬೆಳೆವಿಮೆ ಯೊಜನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸದ ಶಿವಕುಮಾರ ಉದಾಸಿ ಮನವಿ ಮಾಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿರುವ ಅವರು, ಕಳೆದ ಮೂರು ವರ್ಷದಿಂದ ಹಾವೇರಿ ಜಿಲ್ಲೆಯಲ್ಲಿ ಹಾನಗಲ್ಲ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಅಡಕೆ, ಶುಂಠಿ, ಹಸಿಮೆಣಸಿನಕಾಯಿ ಮಾವು ಬೆಳೆವಿಮೆ ತುಂಬಿ ಪರಿಹಾರ ಪಡೆದುಕೊಂಡಿದ್ದಾರೆ. 2020-21ನೇ ಸಾಲಿನ ಅಡಕೆ, ಶುಂಠಿ ಮತ್ತು ಹಸಿಮೆಣಸಿನಕಾಯಿ ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ನೀಡುವಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಶೀಘ್ರದಲ್ಲಿ ವಿಮಾ ಕಂಪನಿಯವರು, ಗ್ರಾಮ ಪಂಚಾಯತಿವಾರು ಹವಾಮಾನ ಅಧಾರಿತ ಲೆಕ್ಕಾಚಾರದ ಮೇಲೆ ರೈತರ ವಯಕ್ತಿಕ ಖಾತೆಗಳಿಗೆ ಬಿಡುಗಡೆ ಮಾಡಲಿದ್ದಾರೆ ಎಂದರು.

ಬ್ಯಾಡಗಿ: ಕೋವಿಡ್‌ ಟೆಸ್ಟ್‌ಗೆ ಹೆದರಿ ಊರನ್ನೇ ತೊರೆದ ಗ್ರಾಮಸ್ಥರು..!

ಪ್ರಸಕ್ತ ಸಾಲಿನಲ್ಲಿ ಬೆಳೆವಿಮೆ ಪ್ರತಿ ಹೆಕ್ಟೇರ್‌ಗೆ ಅಡಕೆ ಬೆಳೆಗೆ 6400, ಶುಂಠಿ ಬೆಳೆಗೆ 6500, ಹಸಿಮೆಣಸಿನಕಾಯಿ ಬೆಳೆಗೆ 3550 ನಿಗದಿ ಪಡಿಸಲಾಗಿದ್ದು, ರೈತರು ಜೂ. 30ರೊಳಗೆ ಬ್ಯಾಂಕ್‌, ಸಹಕಾರಿ ಸಂಸ್ಥೆ ಹಾಗೂ ಕಾಮನ್‌ ಸರ್ವಿಸ್‌ ಸೆಂಟರ್‌ನಲ್ಲಿ ಬೆಳೆವಿಮಾ ಕಂತು ಕಟ್ಟಬೇಕು. ಬೆಳೆವಿಮೆ ತುಂಬಿದ ರೈತರು ಕಡ್ಡಾಯವಾಗಿ ಬೆಳೆವಿಮೆ ಸಮೀಕ್ಷೆ ಮಾಡಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದು, ತಾವೇ ಆಗಲಿ ಅಥವಾ ಗ್ರಾಮಲೆಕ್ಕಾಧಿಕಾರಿಗಳ ಮುಖಾಂತರ ಬೆಳೆ ಸಮೀಕ್ಷೆ ಮಾಡಿಸಬೇಕು.ಇಲ್ಲವಾದಲ್ಲಿ ವಿಮಾ ಪರಿಹಾರ ಸಂದಾಯವಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ರೈತರು ಬೆಳೆವಿಮಾ ಕಂತು ಕಟ್ಟಲು ಆಧಾರ್‌ಕಾ​ರ್ಡ್‌, ಆಧಾರ ಲಿಂಕ್‌ ಹೊಂದಿದ ಬ್ಯಾಂಕ್‌ ಪಾಸ್‌ಬುಕ್‌ ತೆಗೆದುಕೊಂಡು ಹೋಗಬೇಕು. ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ತೋಟಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು. ಬೆಳೆ ವಿಮಾಕಂತು ತುಂಬಲು ಕಡಿಮೆ ದಿನಗಳು ಇರುವುದರಿಂದ ಜಿಲ್ಲಾ ಅಗ್ರಣೀಯ ಬ್ಯಾಂಕ್‌ ವ್ಯವಸ್ಥಾಪಕರೊಂದಿಗೆ ಮಾತನಾಡಿದ್ದು, ವಿಮಾ ಕಂತು ತುಂಬುವ ರೈತರಿಗೆ ಯಾವುದೆ ತೊಂದರೆಯಾಗದಂತೆ, ವಿನಾ ಕಾರಣ ಅಲೆದಾಡಿಸದಂತೆ ಬ್ಯಾಂಕ್‌ ಸಿಬ್ಬಂದಿ ಸಹಕರಿಸುವಂತೆ ಸೂಚಿಸಲಾಗಿದೆ ಎಂದು ಶಿವಕುಮಾರ ಉದಾಸಿ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಪರಿಷ್ಕೃತ ಹವಾಮಾನ ಆಧಾರಿತ ಬೆಳೆವಿಮೆ ತುಂಬಲು ಕಡಿಮೆ ಸಮಯವಿರುವುದರಿಂದ ರೈತರು ಆಸ್ತೆ ವಹಿಸಿ ಕೊನೆ ದಿನದವರೆಗೆ ಕಾಯದೆ, ಸಮೀಪದ ಬ್ಯಾಂಕ್‌, ಸಹಕಾರಿ ಸಂಸ್ಥೆ ಹಾಗೂ ಕಾಮನ್‌ ಸರ್ವಿಸ್‌ ಸೆಂಟರ್‌ನಲ್ಲಿ ವಿಮಾ ಕಂತಿನ ಪ್ರೀಮಿಯಂ ಮಾತ್ರ ತುಂಬಬೇಕು. ಇದಕ್ಕೆ ತಗಲುವ ಸೇವಾಶುಲ್ಕ (ಸರ್ವಿಸ್‌ ಚಾರ್ಜ್‌) ದಿ. ಸಿ.ಎಂ. ಉದಾಸಿ ಹೆಸರಿನಲ್ಲಿ ಭರಿಸಲಾಗುವುದು. ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ. 
 

Follow Us:
Download App:
  • android
  • ios