ಬೆಂಗಳೂರು (ಮೇ 16): ಲಾಕ್‌ ಡೌನ್‌ ಉಲ್ಲಂಘಿಸಿ ಹಾವೇರಿ ಜಿಲ್ಲೆಯ ಸವಣೂರು ಪೇಟೆಯ ಜುಮ್ಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ ಹಾಗೂ ಮಸೀದಿಯಿಂದ ಹೊರ ಹೋಗುವಂತೆ ಸೂಚಿಸಿದ ಸ್ಥಳೀಯ ತಹಶೀಲ್ದಾರ್‌ ಹಾಗೂ ಕೊರೋನಾ ನಿಯಂತ್ರಣ ಸಿಬ್ಬಂದಿಯನ್ನು ದೂಡಿದ ಪ್ರಕರಣ ಸಂಬಂಧ ಬಂಧನ ಭೀತಿ ಎದುರಿಸುತ್ತಿದ್ದ ಆರೋಪಿ ವೈದ್ಯ  ಡಾ.ನನ್ನೆಮಿಯಾಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಿರೀಕ್ಷಣಾ ಜಾಮೀನು ಕೋರಿ ಡಾ. ನನ್ನೆಮಿಯಾ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರು 2 ವಾರದೊಳಗೆ ತನಿಖಾಧಿಕಾರಿಗೆ ಎದುರು ಹಾಜರಾಗಿ, 50 ಸಾವಿರ ವೈಯಕ್ತಿಕ ಬಾಂಡ್‌ ನೀಡಬೇಕು. ತನಿಖೆಗೆ ಸಹಕರಿಸಬೇಕು. ಪ್ರಕರಣದ ಸಾಕ್ಷ್ಯ ನಾಶಪಡಿಸಲು ಯತ್ನಿಸಬಾರದು ಎಂದು ಷರತ್ತು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.

ಮೈಸೂರು ಸಂಪೂರ್ಣ ಕೊರೋನಾ ಮುಕ್ತ; ಡಾ. ಸುಧಾಕರ್ ಮೆಚ್ಚುಗೆ

ಪ್ರಕರಣವೇನು?:

2020ರ ಏ.17ರಂದು ಮಧ್ಯಾಹ್ನ ಅರ್ಜಿದಾರ ವೈದ್ಯ ಸೇರಿದಂತೆ ಐವರು ಆರೋಪಿಗಳು ಸವಣೂರು ಪೇಟೆಯ ಜುಮ್ಮಾ ಮಸೀದಿಯಲ್ಲಿ ನಮಾಜ್‌ ಮಾಡುತ್ತಿದ್ದರು. ವಿಷಯ ತಿಳಿದು ಅಲ್ಲಿಗೆ ತೆರಳಿದ ತಹಶೀಲ್ದಾರ್‌ ಲಾಕ್‌ ಡೌನ್‌ ಇರುವುದರಿಂದ ಸಾಮೂಹಿಕವಾಗಿ ನಮಾಜ್‌ ಮಾಡುವುದು ಅಪರಾಧವಾಗುತ್ತದೆ ಎಂದು ತಿಳಿಸಿದರು. ಆಗ ಆರೋಪಿಗಳು ‘ನೀವು ನಿಮ್ಮ ಡ್ಯೂಟಿ ಎಷ್ಟುಇದೆ, ಅಷ್ಟುಮಾಡಿ. ಮಸೀದಿಗೆ ಯಾಕ್‌ ಬಂದಿರಿ ನೀವು’ ಎಂದು ಗದರಿಸಿದ್ದರು.

ಅಲ್ಲದೆ, ಎಲ್ಲ ಆರೋಪಿಗಳು ಸೇರಿ ತಹಶೀಲ್ದಾರ್‌ ಮತ್ತು ಅವರ ಸಿಬ್ಬಂದಿಯವರನ್ನು ದೂಡಿದ್ದರು. ಆ ಮೂಲಕ ಕೋವಿಡ್‌-19 ವೈರಸ್‌ ಹರಡುವುದನ್ನು ನಿಯಂತ್ರಿಸುವ ಸರ್ಕಾರದ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದಯ ತಹಶೀಲ್ದಾರ್‌ ಏ.18ರಂದು ದೂರು ನೀಡಿದ್ದರು. ಸವಣೂರು ಠಾಣಾ ಪೊಲೀಸರು ದೂರು ದಾಖಲಿಸಿದ್ದರಿಂದ ಅರ್ಜಿದಾರರು ಬಂಧನ ಭೀತಿ ಎದುರಿಸುತ್ತಿದ್ದರು.